ವರ್ಷಕ್ಕೊಮ್ಮೆ 10 ಲಕ್ಷ ರು. ಪಾವತಿ, ಅಕ್ರಮ ಬಾಂಗ್ಲನ್ನರಿಗೆ ಪೊಲೀಸರ ಶ್ರೀರಕ್ಷೆ!
ಬಗಲ್ ಮೇ ಬಾಂಗ್ಲಾ ದುಷ್ಮನ್| ಅಕ್ರಮ ಬಾಂಗ್ಲನ್ನರಿಗೆ ಪೊಲೀಸರ ಶ್ರೀರಕ್ಷೆ!| ದಾಖಲೆ ಕೇಳ್ತಾರೆ, .1000 ಕೊಟ್ಟರೆ ಸುಮ್ಮನೆ ಹೋಗ್ತಾರೆ| ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ ಬಾಂಗ್ಲನ್ನರಿಂದಲೇ ಹೇಳಿಕೆ
ಬೆಂಗಳೂರು[ಜ.18]: ದಶಕಗಳ ಹಿಂದೆ ಹಸಿವು ನೀಗಿಸಿಕೊಳ್ಳಲು ದೇಶದ ಗಡಿಯೊಳಗೆ ನುಸುಳಿ ಅಕ್ರಮ ಹಾದಿ ಮೂಲಕ ಕರುನಾಡಿಗೆ ಕಾಲಿಟ್ಟನೆರೆಯ ಬಾಂಗ್ಲಾದೇಶ ಪ್ರಜೆಗಳನ್ನು ಪತ್ತೆ ಹಚ್ಚಿ ಹೊರದಬ್ಬ ಬೇಕಾದ ಪೊಲೀಸರೇ ನುಸುಳುಕೋರರಿಗೆ ಶ್ರೀರಕ್ಷೆಯಾಗಿದ್ದಾರೆಯೇ?
ಹೌದು ಎಂಬ ಆಘಾತಕಾರಿ ಸಂಗತಿಯೊಂದು ಸುವರ್ಣ ಸುದ್ದಿವಾಹಿನಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ.
'ಬಾಂಗ್ಲಾ ವಲಸಿಗರ ಹೊರಗೆ ಹಾಕ್ತೀವಿ ಅನ್ನೋದು ಸರಿಯಲ್ಲ'
ಬೆಂಗಳೂರಿನ ಹೊರವಲಯದಲ್ಲಿ ನೆಲೆಸಿರುವ ಬಾಂಗ್ಲಾ ನುಸುಳುಕೋರರೇ ಪೊಲೀಸರಿಗೆ ಹಣ ಕೊಟ್ಟರೆ ಸುಮ್ಮನೆ ಹೋಗುತ್ತಾರೆ ಎಂಬ ಅಂಶವನ್ನು ರಹಸ್ಯ ಕಾರ್ಯಾಚರಣೆಯಲ್ಲಿ ಬಾಯ್ಬಿಟ್ಟಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ಪೊಲೀಸರ ನೈತಿಕತೆಯನ್ನೇ ಪ್ರಶ್ನೆ ಮಾಡುವಂತಿದೆ.
ಬೆಂಗಳೂರಿನ ಹೊರವಲಯದ ಕಾಡುಬೀಸನಹಳ್ಳಿ, ದೇವರ ಬೀಸನಹಳ್ಳಿ, ಬೆಳ್ಳಂದೂರು, ವರ್ತೂರು ಭಾಗದಲ್ಲಿ ಅಂದಾಜು ಒಂಬತ್ತು ಸಾವಿರ ಬಾಂಗ್ಲಾ ನುಸುಳುಕೋರರು ಜೋಪಡಿಯಲ್ಲಿ ನೆಲೆಸಿದ್ದಾರೆ. ಏಜೆಂಟ್‌ವೊಬ್ಬ ಅಕ್ರಮವಾಗಿ ಬಾಂಗ್ಲಾದೇಶಿಗರನ್ನು ಇಂತಿಷ್ಟುಹಣ ಪಡೆದು ಬೆಂಗಳೂರು ನಗರಕ್ಕೆ ಕರೆ ತರುತ್ತಾನೆ. ಬರುವಾಗ ಎಂಟರಿಂದ ಹತ್ತು ಸಾವಿರ ರು. ಕೊಟ್ಟಿರುತ್ತೇವೆ. ಆತನೇ ನಮಗೆ ಗಾರೆ ಕೆಲಸ ಸೇರಿ ಮತ್ತಿತರ ಕೂಲಿ ಕೊಡಿಸುತ್ತಾನೆ. ಆಗಾಗ್ಗೆ ಬರುವ ಪೊಲೀಸರು ನಮ್ಮ ಬಳಿ ದಾಖಲೆ ತೋರಿಸುವಂತೆ ಕೇಳುತ್ತಾರೆ. ನಮ್ಮ ಬಳಿ ದಾಖಲೆಗಳಿರುವುದಿಲ್ಲ. ಈ ವೇಳೆ ಸಾವಿರ ರುಪಾಯಿ ಕೊಟ್ಟರೆ ಹಣ ಪಡೆದು ಸುಮ್ಮನೆ ಹೋಗುತ್ತಾರೆ. ಅವರು ಬಂದಾಗಲೆಲ್ಲಾ ಹಣ ಕೊಟ್ಟು ಕಳುಹಿಸುತ್ತೇವೆ. ಪ್ರತಿ ವಾರ ಏಜೆಂಟ್‌ಗೆ ತಲಾ . 500 ರಿಂದ . 1000 ಹಣ ನೀಡುತ್ತೇವೆ ಎಂದು ವರ್ತೂರು ಬಳಿ ಜೋಪಡಿಯಲ್ಲಿ ನೆಲೆಸಿರುವ ಅಬ್ದುಲ್ ಖಾದರ್ ಗಿಲಾನಿ ರಹಸ್ಯ ಕಾರ್ಯಾಚರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.
ಎರಡು ತಿಂಗಳ ಹಿಂದೆ ನನ್ನನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದರು. 24 ತಾಸು ಠಾಣೆಯಲ್ಲಿ ಇಟ್ಟುಕೊಂಡಿದ್ದು, ದಾಖಲೆ ಕೇಳಿದರು. ದಾಖಲೆ ಎಲ್ಲಿದೆ ನಮ್ಮ ಬಳಿ? ತಾಯಿ ಬಂದು ಠಾಣೆಯಲ್ಲಿ ಮನವಿ ಮಾಡಿದ ಬಳಿಕ ಬಿಟ್ಟು ಕಳುಹಿಸಿದರು ಎಂದು ಆತ ವಿವರಿಸಿದ.
ವರ್ಷಕ್ಕೊಮ್ಮೆ 10 ಲಕ್ಷ ರು. ಪಾವತಿ:
ಬೆಳ್ಳಂದೂರು ಪೊಲೀಸ್ ಠಾಣೆ ಕಟ್ಟಡ ನಿರ್ಮಾಣದ ವೇಳೆ 8 ದಿನ ಕೂಲಿ ಕೆಲಸ ಮಾಡಿದ್ದೇವೆ. ಒಂದು ದಿನದ ಕೂಲಿ ಸಹ ನೀಡಲಿಲ್ಲ. ನಮ್ಮ ಏಜೆಂಟ್ ಹೋಗಿ ಕೆಲಸ ಮಾಡಿಸಿದ. ಠಾಣೆ ಕೆಲಸಕ್ಕೆ ಜನ ಬೇಕು ಎಂದು ಹೇಳಿದ್ದು, ಏಜೆಂಟ್ ನಮ್ಮನ್ನು ಕಳುಹಿಸಿದ್ದ. ಎಲ್ಲರಿಗೂ ತಿಳಿದಿದೆ ನಾವು ಬಾಂಗ್ಲಾದೇಶ ಪ್ರಜೆಗಳೆಂದು. ಪ್ರತಿ ಬಾರಿ ಇನ್ಸ್‌ಪೆಕ್ಟರ್ ಬದಲಾವಣೆಯಾದ ಕೂಡಲೇ ಗುತ್ತಿಗೆದಾರರೆಲ್ಲಾ ನಮ್ಮ ಬಳಿ ಹಣ ಸಂಗ್ರಹಿಸಿ ಸುಮಾರು 10 ಲಕ್ಷ ರು.ಗಳನ್ನು ಇನ್ಸ್‌ಪೆಕ್ಟರ್‌ಗೆ ತಲುಪಿಸುತ್ತಾರೆ. ಹೀಗಾಗಿ ಪೊಲೀಸರು ನಮಗೆ ತೊಂದರೆ ಕೊಡುವುದಿಲ್ಲ ಎಂದು ಹೇಳಿಕೊಂಡ.
Super Exclusive; ಬಯಲಾಯ್ತು ಬಾಂಗ್ಲಾ ಅಕ್ರಮ ನುಸುಳುಕೋರರ ಭಯಾನಕ ರಹಸ್ಯ!
ನುಸುಳುಕೋರರ ಬಗ್ಗೆ ಲೆಕ್ಕವೂ ಇಲ್ಲ!
ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ), ಗುಪ್ತಚರ, ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಹಾಗೂ ಪೊಲೀಸರು ಹೀಗೆ ವಲಸಿಗರ ಮೇಲೆ ನಿಗಾ ವಹಿಸುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳು ಇದುವರೆಗೆ ರಾಜ್ಯದ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಅಧಿಕೃತವಾಗಿ ಮಾಹಿತಿ ಕಲೆ ಹಾಕಿಲ್ಲ ಎನ್ನಲಾಗಿದೆ. ಈ ಸಂಸ್ಥೆಗಳಿಗೆ ವಲಸಿಗರ ವಿಚಾರ ಗೊತ್ತಿಲ್ಲ ಎನ್ನುವಂತಿಲ್ಲ. ಸತ್ಯ ಗೊತ್ತಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿವೆ. ಒಮ್ಮೆ ಸರ್ಕಾರಿ ದಾಖಲೆಗಳಲ್ಲಿ ಅಧಿಕೃತವಾಗಿ ಅಕ್ರಮ ವಲಸಿಗ ಎಂದು ಉಲ್ಲೇಖವಾದರೆ ಸದರಿ ವ್ಯಕ್ತಿಯನ್ನು ರಾಜ್ಯದಿಂದ ಗಡೀಪಾರು ಮಾಡಬೇಕಾಗುತ್ತದೆ. ಇದೊಂದು ಸುದೀರ್ಘ ಪ್ರಕ್ರಿಯೆ. ಹೀಗಾಗಿ ಪೊಲೀಸರು ಮಾನವ ಸಂಪನ್ಮೂಲ ಕೊರತೆ ಮತ್ತು ಕಾರ್ಯದೊತ್ತಡದ ಕಾರಣಗಳನ್ನು ಹೇಳುತ್ತಾ ಅಕ್ರಮ ವಲಸಿಗರ ಪತ್ತೆಗೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪವೂ ಪೊಲೀಸರ ಮೇಲಿದೆ.
ಬಾಂಗ್ಲಾ ವಲಸಿಗರ ಅಕ್ರಮ ಎಂಟ್ರಿ; ಕಠಿಣ ಕ್ರಮಕ್ಕೆ ಗೃಹ ಸಚಿವರ ಸೂಚನೆ