ವರ್ತೂರು ಪ್ರಕಾಶ್ ಹುಟ್ಟುಹಬ್ಬದಲ್ಲಿ ಬಿರಿಯಾನಿಗಾಗಿ ಕಿತ್ತಾಟ: ಪೊಲೀಸರಿಂದ ಲಾಠಿ ಚಾರ್ಜ್
ನಗರದ ಬೈರೆಗೌಡ ಬಡಾವಣೆಯಲ್ಲಿ ಕೋಲಾರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ವರ್ತೂರು ಪ್ರಕಾಶ್ ಅವರ 56ನೇ ಹುಟ್ಟುಹಬ್ಬವನ್ನು ಮಂಗಳವಾರ ಅದ್ದೂರಿಯಾಗಿ ಆಚರಿಸಲಾಯಿತು.
ಕೋಲಾರ (ಡಿ.21): ನಗರದ ಬೈರೆಗೌಡ ಬಡಾವಣೆಯಲ್ಲಿ ಕೋಲಾರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ವರ್ತೂರು ಪ್ರಕಾಶ್ ಅವರ 56ನೇ ಹುಟ್ಟುಹಬ್ಬವನ್ನು ಮಂಗಳವಾರ ಅದ್ದೂರಿಯಾಗಿ ಆಚರಿಸಲಾಯಿತು. ಸಮಾರಂಭಕ್ಕೆ ಆಗಮಿಸಿದ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತಗಾಗಿ ಭರ್ಜರಿ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 20 ಸಾವಿರ ಮಂದಿಗೆ 60 ಕ್ವಿಂಟಲ್ ಚಿಕನ್ ಬಿರಿಯಾನಿಯನ್ನು 50 ಮಂದಿ ಬಾಣಸಿಗರು ತಯಾರಿಸಿದ್ದರು. ಕಾರ್ಯಕ್ರಮದ ನಂತರ ಊಟದ ವೇಳೆ ಚಿಕನ್ ಬಿರಿಯಾನಿಗಾಗಿ ನೂಕು, ನುಗ್ಗಲು ಉಂಟಾಯಿತು. ಬ್ಯಾರಿಕೇಡ್ ಹಾರಿ, ಒಬ್ಬರಿಗೊಬ್ಬರು ಕಿತ್ತಾಟ ನಡೆಸಿದರು.
ಬಿರಿಯಾನಿ ಬಡಿಸುವವರ ಮೇಲೆಯೇ ಕೂಗಾಡಿದರು. ಪ್ಲೇಟ್‌ಗಾಗಿ ಮುಗಿಬಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾಜ್‌ರ್ ನಡೆಸಿದರು. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬನ ತಲೆಗೆ ಲಾಠಿ ಏಟು ಬಿದ್ದು, ರಕ್ತ ಸೋರಲು ಆರಂಭಿಸಿತು. ತಕ್ಷಣ ಆತನಿಗೆ ಪ್ರಥಮ ಚಿಕಿತ್ಸೆ ನೀಡಿ, ಕಳುಹಿಸಿಕೊಡಲಾಯಿತು. ಇದಕ್ಕೂ ಮೊದಲು ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್, ಇಂದು ನಿರೀಕ್ಷೆಗೂ ಮೀರಿ ಜನ ಬಂದಿದ್ದೀರಿ. ಇನ್ನು ಮೂರು ತಿಂಗಳಲ್ಲಿ ಮತ್ತೆ ನಿಮ್ಮ ಮುಂದೆ ಬರುತ್ತೇನೆ. ಇದೇ ರೀತಿ ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು. ಇದೇ ವೇಳೆ, ಅಭಿಮಾನಿಗಳು ಅವರಿಗೆ ಟಗರು ನೀಡಿ ಸತ್ಕರಿಸಿದರು.
2 ವರ್ಷದಿಂದ ಅಲ್ಪಸಂಖ್ಯಾತರಿಗೆ ಅನುದಾನ ನೀಡಿಲ್ಲ: ಸಿಎಂ ಬೊಮ್ಮಾಯಿ
ಕೋಲಾರದಲ್ಲಿ ವರ್ತೂರು ಹವಾ: ಇಷ್ಟು ದಿನಗಳಿಂದ ಬೇರೆಯವರ ಹವಾ ಇತ್ತು. ಇನ್ನು ಮುಂದೆ ಕೋಲಾರ ಕ್ಷೇತ್ರದಲ್ಲಿ ವರ್ತೂರು ಪ್ರಕಾಶ್ ಅವರದ್ದೇ ಹವಾ. ನನ್ನ ಮಾತು ಎಂದೂ ಸುಳ್ಳಾಗಿಲ್ಲ. 2023ರ ವಿಧಾನಸಭಾ ಚುನಾವಣೆ ವರ್ತೂರು ಪ್ರಕಾಶ್ ಬಹು ಮತದಿಂದ ನಿಮ್ಮೆಲ್ಲರ ಆಶೀರ್ವಾದದಿಂದ ಆಯ್ಕೆಯಾಗುವುದು 100ಕ್ಕೆ 100ರಷ್ಟುಖಚಿತ. ಮೇ ತಿಂಗಳಲ್ಲಿ ಚುನಾವಣೆ ಬರಲಿದ್ದು ನೀವೆಲ್ಲ ಈಗಿನಿಂದಲೇ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮನವಿ ಮಾಡಿದರು.
ನಗರದ ಬೈರೇಗೌಡ ನಗರದ ಮೈದಾನದಲ್ಲಿ ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ 56ನೇ ವರ್ಷದ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಮಾತನಾಡಿ, ಹೊಸ ವರ್ಷಕ್ಕೆ ಇನ್ನು 10 ದಿನಕ್ಕೆ ಮುನ್ನವೇ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಇಂದೇ ಹೊಸವರ್ಷ ಹಾಗೂ ಚುನಾವಣೆಯ ಮೂರು ತಿಂಗಳ ಮೊದಲೇ ಬಿಜೆಪಿ ಪಕ್ಷದ ವಿಜಯೋತ್ಸವ ಆಚರಣೆ ಮಾಡುತ್ತಿರುವುದು ಹರ್ಷದಾಯಕ. ವರ್ತೂರು ಪ್ರಕಾಶ್ ಅಧಿಕಾರದಲ್ಲಿ ಇಲ್ಲದಿದ್ದರೂ ನಿಮ್ಮಂತ ಅಭಿಮಾನಿಗಳನ್ನು ಪಡೆದಿರುವುದು ಅದೃಷ್ಟ ಎಂದರು.
ಕ್ಷೇತ್ರ ಹುಡುಕಾಟ ಸಿದ್ದುಗೆ ಅನಿವಾರ್ಯವೇ?: ಮಾಜಿ ಎಂಎಲ್ಸಿ ರಮೇಶ್ ಬಾಬು
ವರ್ತೂರು ಪ್ರಕಾಶ್ ಆಯ್ಕೆಯಾದ ನಂತರ ಕೋಲಾರ ಕ್ಷೇತ್ರದಲ್ಲಿ ಸುವರ್ಣಯುಗ ಆರಂಭವಾಗಲಿದೆ. ನೀವುಗಳು ಮುಂದಿನ ವರ್ಷದವರೆಗೆ ನಿಶ್ಚಿಂತೆಯಿಂದ ಇರಬಹುದು. ವರ್ತೂರು ಪ್ರಕಾಶ್‌ಗೆ ನಾನು ಮತ್ತು ಮುನಿರತ್ನ ಅವರು ಹೆಗಲಿಗೆ ಹೆಗಲು ಕೊಟ್ಟು ಅವರೊಂದಿಗೆ ಇರುತ್ತೇವೆ, ಏನೇ ಸಮಸ್ಯೆಗಳು ಬಂದರೂ ಒಟ್ಟಾಗಿ ಎದುರಿಸಲು ಸಿದ್ದರಿದ್ದೇವೆ ಎಂದರು.