ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪ್ರಥಮ ಆದ್ಯತೆ ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಹೊಣೆಯನ್ನು ಅಧಿಕಾರಿಗಳು ಹೊರಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ಬೆಂಗಳೂರು (ಆ.10):  ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪ್ರಥಮ ಆದ್ಯತೆ. ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಇದರ ಹೊಣೆಯನ್ನು ಅಧಿಕಾರಿಗಳು ಹೊರಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಸೋಮವಾರ ವಿಕಾಸಸೌಧದಲ್ಲಿ ಇಲಾಖೆಯ ಹಿರಿಯ ಪೊಲೀಸ್‌ ಅಧಿಕಾರಿಗಳ ಜೊತೆ ಮೊದಲ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿ ಹೊಂದಿರುವ ಗೃಹ ಇಲಾಖೆ ದಿನದ 24 ಗಂಟೆಗಳ ಕಾಲ ಎಚ್ಚರದಿಂದ ಕಾರ್ಯ ನಿರ್ವಹಿಸಬೇಕು, ಜನರ ರಕ್ಷಣೆ ಮಾಡುವುದು ಪೊಲೀಸರ ಕರ್ತವ್ಯವಾಗಿದ್ದು, ಠಾಣೆಗಳು ಮಲಗಬಾರದು ಎಂದು ಸೂಚಿರುವುದಾಗಿ ತಿಳಿಸಿದರು.

ಬಿಜೆಪಿ,ಸಂಘ ಪರಿವಾರದ ಕಾರ್ಯಕರ್ತರ ಮೇಲಿನ ಕೇಸ್ ಹಿಂಪಡೆಯುವಂತೆ ಮನವಿ

ಮುಂಬರುವ ದಿನಗಳಲ್ಲಿ ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಪರಾಧ ಚಟುವಟಿಕೆಗಳಿಗೆ ಇನ್ನಷ್ಟುಕಡಿವಾಣ ಹಾಕಲಾಗುವುದು. ಜೊತೆಗೆ ಇಲಾಖೆಯಲ್ಲಿ ಇನ್ನೂ ಕೆಲವು ಸುಧಾರಣೆ ಕ್ರಮಗಳನ್ನು ತರುವ ಯೋಜನೆ ತಮ್ಮ ಮುಂದಿದೆ. ಈ ಹಿಂದಿನ ಗೃಹ ಸಚಿವರಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಾಕಷ್ಟುಮಾಹಿತಿ ಇದೆ. ಹಾಗಾಗಿ ಮಂಗಳವಾರ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಇಂದು ಅಧಿಕಾರಿಗಳ ಜೊತೆ ನಡೆದ ಮೊದಲ ಸಭೆಯಾಗಿದ್ದು, ಇಲಾಖೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಯಾವುದೇ ನಿರ್ದಿಷ್ಟಪ್ರಕರಣದ ಬಗ್ಗೆ ಚರ್ಚೆಯಾಗಿಲ್ಲ ಎಂದರು.

ಪೊಲೀಸ್‌ ಇಲಾಖೆಯಲ್ಲಿ ಈ ಹಿಂದೆ 23 ಸಾವಿರ ಹುದ್ದೆಗಳು ಖಾಲಿ ಇತ್ತು. ಆದರೆ ಈಗ ನೇಮಕಾತಿ ಮಾಡಿಕೊಂಡ ನಂತರ ಖಾಲಿ ಹುದ್ದೆಗಳ ಸಂಖ್ಯೆ 16 ಸಾವಿರಕ್ಕೆ ಇಳಿದಿದೆ. ಹೊಸದಾಗಿ ನಾಲ್ಕು ಸಾವಿರ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಬಹುತೇಕರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ, ಅದೇ ರೀತಿ ಸಬ್‌ ಇನ್‌ಸ್ಪೆಕ್ಟರ್‌ಗಳ ಹುದ್ದೆ ಸಹ ಖಾಲಿ ಇದ್ದು, ಅದನ್ನು ಸಹ ಶೀಘ್ರದಲ್ಲಿ ಭರ್ತಿ ಮಾಡಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿದೇಶಿಗರಿಂದ ಅಪರಾಧ ಕೃತ್ಯಗಳು ಹೆಚ್ಚು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಗೃಹ ಇಲಾಖೆಯ ಕಾರ್ಯದರ್ಶಿ ರಜನೀಶ್‌ ಗೋಯಲ್‌,ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಸೇರಿದಂತೆ ವಿವಿಧ ವಿಭಾಗಗಳ ಹಿರಿಯ ಪೊಲೀಸ್‌ ಅಧಿಕಾರಿಗಳು ಭಾಗಿಯಾಗಿದ್ದರು.

ಝೀರೋ ಟ್ರಾಫಿಕ್‌ ಬೇಡ

ತಮಗೆ ಝೀರೋ ಟ್ರಾಫಿಕ್‌ ವ್ಯವಸ್ಥೆ ಬೇಡ ಎಂದು ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತಾವು ಎಲ್ಲರಂತೆ ಸಂಚರಿಸುತ್ತೇನೆ, ತಮಗಾಗಿ ಯಾವುದೇ ವಿಶೇಷ ವ್ಯವಸ್ಥೆ ಬೇಡ, ಮುಖ್ಯಮಂತ್ರಿಗಳಿಗೆ ಮಾತ್ರ ಝೀರೋ ಟ್ರಾಫಿಕ್‌ ವ್ಯವಸ್ಥೆ ಇರುತ್ತದೆ. ಆದರೆ ಮಂತ್ರಿಗಳಿಗೆ ಇರುವುದಿಲ್ಲ. ಆದರೆ ಕೆಲವು ಸಚಿವರು ಝೀರೋ ಟ್ರಾಫಿಕ್‌ ಸೌಲಭ್ಯ ಪಡೆಯುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹಾಗಾಗಿ ತಮಗೆ ಝೀರೋ ಟ್ರಾಫಿಕ್‌ ವ್ಯವಸ್ಥೆ ಬೇಡ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಚಿವರು ಸುದ್ದಿಗಾರರಿಗೆ ತಿಳಿಸಿದರು.