ತತ್ವಜ್ಞಾನಿಯಂತೆ ಮೋದಿ ಕೆಲಸ: ಸುಧಾಕರ್
* ಕೋವಿಡ್ ನಿಗ್ರಹ, ರಾಜತಾಂತ್ರಿಕ ವಿಷಯದಲ್ಲಿ ಪ್ರಧಾನಿ ಸಾಧನೆ ಐತಿಹಾಸಿಕ
* ಮೋದಿ ದೂರದೃಷ್ಟಿಯಿಂದಾಗಿ ದೇಶದಲ್ಲಿ ಕೋಟ್ಯಂತರ ಸಾವುಗಳು ತಪ್ಪಿವೆ
* ಜಗತ್ತಿನ 50 ದೇಶಗಳು ಕೋವಿನ್ ಆ್ಯಪ್ ನೆರವು ಕೇಳಿವೆ
ಬೆಂಗಳೂರು(ಏ.13): ಕೋವಿಡ್ ತಡೆಯುವ ವಿಚಾರದಲ್ಲಿ ಮತ್ತು ರಾಜತಾಂತ್ರಿಕ ಸಂಬಂಧ ಬೆಳೆಸುವುದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು(Narendra Modi) ತತ್ವಜ್ಞಾನಿಯಂತೆ ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿಯವರ ದೂರದೃಷ್ಟಿಯ ಯೋಚನೆಗಳು ಭಾರತದಲ್ಲಿ ಆಗಬಹುದಾಗಿದ್ದ ಕೋಟ್ಯಂತರ ಸಾವು-ನೋವುಗಳನ್ನು ತಡೆದಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್(Dr K Sudhakar) ಹೇಳಿದ್ದಾರೆ.
ಲಸಿಕಾಕರಣದಿಂದ ಭಾರತ(India) ಕೋವಿಡ್(Covid-19) ಅನ್ನು ಸಮರ್ಥವಾಗಿ ಮತ್ತು ಸಮಗ್ರವಾಗಿ ಎದುರಿಸಿದೆ. ಸಂಭಾವ್ಯ 4ನೇ ಅಲೆಯನ್ನು ತಡೆಯಲು ಕೂಡ ಲಸಿಕೆ(Vaccine) ಒಂದೇ ಅಸ್ತ್ರ. ಸರ್ಕಾರ ನೀಡುವ ಲಸಿಕೆಯನ್ನು ಸಾರ್ವಜನಿಕರು ಶೀಘ್ರದಲ್ಲೇ ಪಡೆದುಕೊಂಡು ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಬೇಕು ಎಂದು ಸುದ್ದಿಗಾರರಿಗೆ ತಿಳಿಸಿದರು.
ಹಲಾಲ್, ಹಿಜಾಬ್ ವಿವಾದದಲ್ಲಿ ಸರ್ಕಾರದ ಪಾತ್ರ: ಸುಧಾಕರ್ ಹೇಳಿದ್ದಿಷ್ಟು
ಅನೇಕ ದೇಶಗಳಲ್ಲಿ ಈ ಹಿಂದೆಯೂ ಸಾಂಕ್ರಾಮಿಕ ರೋಗಗಳು(Infectious Diseases) ಬಂದಿದ್ದವು. ಸ್ಪ್ಯಾನಿಷ್ ಫ್ಲೂ ಕಾಯಿಲೆಯಲ್ಲಿ ಸತ್ತವರಿಗಿಂತ ಹೆಚ್ಚು ಜನರು ಹಸಿವಿನಿಂದ ಸತ್ತಿದ್ದಾರೆ ಎನ್ನುವುದನ್ನು ದಾಖಲೆಗಳು ಹೇಳುತ್ತವೆ. ಆದರೆ ಪ್ರಧಾನಿಯವರ ದೂರದೃಷ್ಟಿಯ ಯೋಜನೆಗಳು ಕೋವಿಡ್ ವೇಳೆ ಆಗಬಹುದಾಗಿದ್ದ ದೊಡ್ಡ ಮಟ್ಟದ ಅನಾಹುತಗಳನ್ನು ತಪ್ಪಿಸಿದೆ ಎಂದು ಹೇಳಿದರು.
ಭಾರತದಲ್ಲಿ ಕೊರೋನಾ(Coronavirus) ಉದ್ಭವವಾದಾಗ ಜಗತ್ತಿನ ಅನೇಕ ಮುಂದುವರೆದ ದೇಶಗಳು ಬೀದಿ ಬೀದಿಯಲ್ಲಿ ಸಾವು ಖಚಿತ ಎನ್ನುವ ರೀತಿಯಲ್ಲಿ ಮಾತನಾಡಿದ್ದವು. ಬಡತನ, ಅನಕ್ಷರತೆಯ ದೇಶವಾಗಿರುವ ಭಾರತ ದೊಡ್ಡ ಸಂಕಟಕ್ಕೆ ಸಿಲುಕಲಿದೆ ಎಂದುಕೊಂಡವರೇ ಹೆಚ್ಚು. ಆದರೆ, ಪ್ರಧಾನಿಗಳು ಬೇರೆಯದ್ದೇ ಯೋಚನೆ ಮಾಡಿದ್ದರು. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳ ಜೊತೆ ನಿಕಟ ಸಂಬಂಧ ಬೆಳೆಸಿ, ಪ್ರತೀ ಹಂತದಲ್ಲೂ ಮಾರ್ಗಸೂಚನೆಗಳನ್ನು ಕೊಟ್ಟು ವಿಚಾರ ವಿನಿಮಯ ಮಾಡಿಕೊಂಡರು. ಕೊರೋನಾವನ್ನು ಸಮರ್ಥವಾಗಿ ನಿಯಂತ್ರಣ ಮಾಡಲು ಲಸಿಕೆ ಒಂದೇ ದಾರಿ ಅನ್ನುವುದನ್ನು ಹೇಳಿದರು. ಸಂಶೋಧನಾ ಸಂಸ್ಥೆಗಳು, ವಿಜ್ಞಾನಿಗಳು ಮತ್ತು ಲಸಿಕೆ ತಯಾರಿಕಾ ಕಂಪನಿಗಳ ಜತೆ ಸಂಪರ್ಕ ಸಾಧಿಸಿದರು ಎಂದರು. 135 ಕೋಟಿ ಜನಸಂಖ್ಯೆ ಇದ್ದಂತಹ ಈ ದೇಶದಲ್ಲಿ ಕೊರೋನಾವನ್ನು ನಿಯಂತ್ರಣಕ್ಕೆ ತಂದಿದ್ದು ಐತಿಹಾಸಿಕ ಮತ್ತು ಕೇಸ್ ಸ್ಟಡಿಯೂ ಆಗಿದೆ ಎಂದು ಅಭಿಪ್ರಾಯಪಟ್ಟರು.
ಮಾರ್ಚ್ 2020ರಲ್ಲಿ ಕೊರೋನಾ ಭಾರತಕ್ಕೆ ಪ್ರವೇಶ ಕೊಟ್ಟಿತು. ಲಸಿಕೆಯನ್ನು 2021ರ ಜನವರಿ ವೇಳೆಗೆ ಅಭಿವೃದ್ಧಿ ಪಡಿಸಿ ಜನರಿಗೆ ಸಿಗುವಂತಹ ಯೋಜನೆಗಳನ್ನು ಜಾರಿ ಮಾಡಲಾಗಿತ್ತು. 2021 ಜ.16ರಂದು ಪ್ರಧಾನಿ ಮೋದಿ ದೂರದೃಷ್ಟಿ ಇಟ್ಟುಕೊಂಡು ಇಡೀ ದೇಶದಲ್ಲಿ ಏಕಕಾಲಕ್ಕೆ ಲಸಿಕಾಕರಣ ಆರಂಭಿಸಿದರು. ಇವತ್ತು ವಿಶ್ವದಲ್ಲೇ ಅತೀ ಹೆಚ್ಚು ಲಸಿಕೆ ನೀಡಿದ ದೇಶವಾಗಿ ಭಾರತ ಸಾಧನೆ ಮಾಡಿದೆ. ಚೀನಾ(China) ಆದ ಮೇಲೆ ಅತೀ ಹೆಚ್ಚು ಲಸಿಕೆ ನೀಡಿದ್ದು ಎನ್ನುವ ಹೆಗ್ಗಳಿಕೆ ಭಾರತದ ಪಾಲಾಗಿದೆ ಎಂದು ನುಡಿದರು.
ಹೈಪಟೈಟಿಸ್ ಬಿ ಲಸಿಕೆ 1985ರಲ್ಲಿ ವಿಶ್ವಕ್ಕೆ ಸಿಕ್ಕರೂ, ಭಾರತಕ್ಕೆ ಲಭ್ಯವಾಗಿದ್ದು 2005ರಲ್ಲಿ. ಬಿಸಿಜಿ 45 ವರ್ಷ ತಡವಾಗಿ ಬಂದಿತ್ತು. ಜಪಾನಿಸ್ ಎನ್ಸೆಫಲಿಟಿಸ್ ಭಾರತಕ್ಕೆ ಸಿಕ್ಕಿದ್ದು 85 ವರ್ಷಗಳ ಬಳಿಕ. ಆದರೆ ಕೊರೋನಾ ಲಸಿಕೆ ವಿಶ್ವಕ್ಕೆ 2020 ಡಿಸೆಂಬರ್‌ನಲ್ಲಿ ಸಿಕ್ಕರೆ, ಭಾರತಕ್ಕೆ 2021 ಜನವರಿಯಲ್ಲಿ ಬಂದಿತ್ತು. ಭಾರತೀಯ ಮೂಲದ ಲಸಿಕೆಯನ್ನು ತಯಾರಿಸಿದ್ದು ನಮ್ಮ ಹೆಮ್ಮೆ ಎಂದು ಮಾಹಿತಿ ನೀಡಿದರು.
ಜನರು ಹಸಿವಿನಿಂದ ಸಾಯಬಾರದು ಅನ್ನುವ ಕಾರಣದಿಂದ ಪ್ರಧಾನಿಗಳು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಜಾರಿಗೆ ತಂದು ಒಂದೂವರೆ ವರ್ಷ ಉಚಿತ ಆಹಾರ ಧಾನ್ಯ ಕೊಟ್ಟರು. 80 ಕೋಟಿ ಜನರ ಕುಟುಂಬಗಳಿಗೆ ಇದು ನೆರವಾಯಿತು. ಈಗ ಇದನ್ನು ಇನ್ನೂ ಆರು ತಿಂಗಳು ಮುಂದುವರೆಸಲಾಗಿದೆ. ವಿಶ್ವದ ಯಾವ ದೇಶದಲ್ಲೂ ಈ ರೀತಿ ಮಾಡಲು ಸಾಧ್ಯವಾಗಿಲ್ಲ. ಭಾರತದ ಯೋಜನೆಗಳ ಮೂಲಕ ಎಲ್ಲಾ ವರ್ಗದ ಜನರು ಸಮಾನ ಬದುಕು ಕಟ್ಟಿಕೊಳ್ಳುವಂತಾಗಿದೆ ಎಂದು ತಿಳಿಸಿದರು.
Dr K Sudhakar: ಎಲ್ಲಾ ಸರ್ಕಾರಿ ಆಸ್ಪತ್ರೆಗೂ ಒಂದೇ ನೇಮಕಾತಿ ನಿಯಮ
ರಾಜ್ಯದಲ್ಲಿ(Karnataka) ಈವರೆಗೆ 10.54 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಮೊದಲ ಡೋಸ್ ಶೇ.101ರಷ್ಟಿದೆ. 2ನೇ ಡೋಸ್ ಶೇಕಡಾ 98 ಆಗಿದೆ. 12-14 ವರ್ಷ ಕೆಟಗರಿಯಲ್ಲಿ ಶೇ.70.2, 15 ರಿಂದ 17 ವರ್ಷ ಕೆಟಗರಿಯಲ್ಲಿ ಶೇ.79.2, 18 ರಿಂದ 44 ವರ್ಷದ ಕೆಟಗರಿಯಲ್ಲಿ ಮೊದಲ ಡೋಸ್ ಶೇ.97.4 ನೀಡಲಾಗಿದೆ. ಕೋವಿಡ್ ಅಂತ್ಯವಾಗಿಲ್ಲ, ಬೇರೆ ಬೇರೆ ಪ್ರಭೇದದ ಮೂಲಕ ಬರಬಹುದು ಎನ್ನುವ ಎಚ್ಚರಿಕೆ ನೀಡಲಾಗಿದೆ. ಎಕ್ಸ್.ಇ ಮತ್ತು ಎಂ.ಇ ಗಳು ಪ್ರಭೇದಗಳು ಬರುತ್ತಿವೆ. ಆದರೆ ಎಲ್ಲವನ್ನೂ ಸಮರ್ಥವಾಗಿ ಎದುರಿಸಲು ಲಸಿಕೆ ಒಂದೇ ಉಪಾಯ. ಸರ್ಕಾರ ನೀಡುವ ಉಚಿತ ಲಸಿಕೆಯನ್ನು ಎಲ್ಲರೂ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಕೊರೋನಾ ಲಸಿಕೆಗೆ 2 ರಿಂದ 5 ಸಾವಿರ ರು. ವೆಚ್ಚವಾಗುತ್ತದೆ. ಆದರೆ ಭಾರತದಲ್ಲಿ ಇದು ಉಚಿತ. ಅಷ್ಟೇ ಅಲ್ಲ ಕೋವಿನ್ ಆ್ಯಪ್ ಮೂಲಕ ಲಸಿಕೆ ನೀಡಲಾಗಿದೆ. ಜಗತ್ತಿನ ವಿವಿಧ 50 ದೇಶಗಳು ಈ ತಂತ್ರಾಂಶದ ನೆರವು ಕೇಳಿವೆ. ಸುಮಾರು 40 ದೇಶಗಳಿಗೆ ಭಾರತ ಲಸಿಕೆಯನ್ನು ಉಚಿತವಾಗಿ ನೀಡಿದೆ. ಈ ಮೂಲಕ ಬೇರೆ ದೇಶಗಳಲ್ಲೂ ಪ್ರಾಣ ಹಾನಿಯನ್ನು ತಪ್ಪಿಸಿದೆ. ಆತ್ಮನಿರ್ಭರ ಭಾರತ್ ಯೋಜನೆಯಡಿಯಲ್ಲಿ ಕೇವಲ 3-4 ತಿಂಗಳಲ್ಲಿ 18 ರಿಂದ 20 ಕಂಪನಿಗಳು ಪಿಪಿಇ ಕಿಟ್, ವೆಂಟಿಲೇಟರ್ ಮಾಸ್ಕ್, ಆಕ್ಸಿಜನ್ ಬೆಡ್, ಐಸಿಯು ಎಲ್ಲವನ್ನೂ ತಯಾರಿ ಮಾಡಿವೆ. ಇತರೆ ದೇಶಗಳ ಮೇಲಿದ್ದ ಅಲಂಬನೆಯನ್ನು ಆತ್ಮನಿರ್ಭರ ಭಾರತ್ ಕಡಿಮೆ ಮಾಡಿದೆ ಎಂದರು.