ದೇಶದ ಅತಿದೊಡ್ಡ ಕಾಪ್ಟರ್‌ ಘಟಕ ಉದ್ಘಾಟನೆ, ಪ್ರಧಾನಿಗೆ ತುಮಕೂರಿನಲ್ಲಿ ತೊಡಿಸಲು ಸಿದ್ಧವಾಗಿರುವ ಅಡಿಕೆಯ ವಿಶೇಷ ಪೇಟ. 

ಬೆಂಗಳೂರು/ತುಮಕೂರು(ಫೆ.06): ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಭೇಟಿಯೂ ಹೆಚ್ಚಳಗೊಂಡಿದ್ದು, ಸೋಮವಾರ ರಾಜಧಾನಿ ಬೆಂಗಳೂರು ಮತ್ತು ತುಮಕೂರಿಗೆ ಭೇಟಿ ನೀಡಿ ಒಂದೇ ದಿನ ಆರು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಇಂದು(ಸೋಮವಾರ) ಬೆಳಗ್ಗೆ 8.30ಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ವಾಯುಪಡೆ ವಿಶೇಷ ವಿಮಾನದ ಮೂಲಕ ಹೊರಟು ಬೆಳಗ್ಗೆ 10.55ರ ವೇಳೆಗೆ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣ ತಲುಪಲಿರುವ ಮೋದಿ ಅವರು, ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಮೊದಲು ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಬೆಳಗ್ಗೆ 11.20ಕ್ಕೆ ಆಗಮಿಸಲಿದ್ದಾರೆ. ಅಲ್ಲಿ ಆಯೋಜಿಸಿರುವ ‘ಭಾರತ ಇಂಧನ ಸಪ್ತಾಹ’ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಅದೇ ವೇದಿಕೆಯಲ್ಲೇ ಪೆಟ್ರೋಲ್‌ಗೆ ಶೇ.20ರಷ್ಟುಎತನಾಲ್‌ ಮಿಶ್ರಣ ಮಾಡಿ ಸಿದ್ಧಪಡಿಸಲಾಗಿರುವ ‘ಇ 20’ ಪೆಟ್ರೋಲ್‌ ಅನ್ನು ದೇಶದ ವಿವಿಧ ರಾಜ್ಯಗಳ 67 ಪೆಟ್ರೋಲ್‌ ಬಂಕ್‌ಗಳಲ್ಲಿ ಪ್ರಾಯೋಗಿಕವಾಗಿ ವಿತರಣೆಗೆ ಚಾಲನೆ ನೀಡಲಿದ್ದಾರೆ. ಜತೆಗೆ ಒಮ್ಮೆ ಬಳಸಿ ಬಿಸಾಡುವ ಹಳೆಯ ಪ್ಲಾಸ್ಟಿಕ್‌ ಬಾಟಲ್‌ ತ್ಯಾಜ್ಯದಿಂದ ತಯಾರಿಸಿದ ಸಮವಸ್ತ್ರ ಅನಾವರಣ ಮಾಡಲಿದ್ದಾರೆ.

Union Budget 2023 ಮಧ್ಯಮ ವರ್ಗ ಸೇರಿದಂತೆ ಪ್ರತಿ ಕ್ಷೇತ್ರಕ್ಕೆ ಭರಪೂರ ಕೊಡುಗೆ, ಬಜೆಟ್ ಮೇಲೆ ಮೋದಿ ಭಾಷಣ!

ಬಳಿಕ ಹೆಲಿಕಾಪ್ಟರ್‌ ಮೂಲಕವೇ ತುಮಕೂರಿಗೆ ತೆರಳಲಿರುವ ಅವರು ಗುಬ್ಬಿ ತಾಲೂಕಿನ ಬಿದರೆಹಳ್ಳದಲ್ಲಿ 615 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ದೇಶದ ಅತಿದೊಡ್ಡ ರಕ್ಷಣಾ ಹೆಲಿಕಾಪ್ಟರ್‌ ತಯಾರಿಕಾ ಘಟಕವನ್ನು ಉದ್ಘಾಟಿಸಲಿದ್ದಾರೆ. ತುಮಕೂರು ಕೈಗಾರಿಕಾ ಟೌನ್‌ಶಿಪ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ವ್ಯಾಪ್ತಿಯಲ್ಲಿ ಸ್ವಚ್ಛ ಕುಡಿವ ನೀರು ಒದಗಿಸುವ ‘ಜಲಜೀವನ್‌ ಮಿಷನ್‌’ ಯೋಜನೆಗೆ ಗುದ್ದಲಿ ಪೂಜೆ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ 90 ಸಾವಿರ ಮಂದಿ ಸೇರುವ ನಿರೀಕ್ಷೆಯಿದ್ದು, ಮೋದಿಯವರ ಭವ್ಯ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಇಡೀ ಪ್ರದೇಶ ಕೇಸರಿಮಯವಾಗಿದೆ. ಎಲ್ಲೆಡೆ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಭದ್ರತೆಗಾಗಿ 3 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.

ಎಚ್‌ಎಎಲ್‌ ಸಂಸ್ಥೆ ಇಲ್ಲಿ ಮುಂದಿನ 20 ವರ್ಷಗಳಲ್ಲಿ .3 ಲಕ್ಷ ಕೋಟಿ ಮೌಲ್ಯದ 1,000ಕ್ಕೂ ಹೆಚ್ಚು ಹೆಲಿಕಾಪ್ಟರ್‌ ಉತ್ಪಾದಿಸುವ ಗುರಿ ಹೊಂದಿದೆ. ಮೊದಲ ಹಂತದಲ್ಲಿ ಈ ಘಟಕದಲ್ಲಿ ಲೈಟ್‌ ಯುಟಿಲಿಟಿ ಹೆಲಿಕಾಪ್ಟರ್‌ಗಳನ್ನು ನಿರ್ಮಾಣ ಮಾಡುವ ಉದ್ದೇಶವಿದೆ. ಹಂತ ಹಂತವಾಗಿ ಅದನ್ನು 3-15 ಟನ್‌ ಗಾತ್ರದ ವಿವಿಧ ಮಾದರಿ ಕಾಪ್ಟರ್‌ ಉತ್ಪಾದನೆಗೆ ವಿಸ್ತರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿ ಯೋಜನೆಯಡಿ ಒಟ್ಟು ಮೂರು ಹಂತದಲ್ಲಿ, 8,484 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್‌ಶಿಪ್‌ ನಿರ್ಮಾಣಗೊಳ್ಳಲಿದೆ. ಈ ಯೋಜನೆ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ವ್ಯಾಪ್ತಿಯಲ್ಲಿ ಬರುತ್ತದೆ.

ಫೆಬ್ರವರಿಯಲ್ಲಿ 3 ಬಾರಿ ಪ್ರಧಾನಿ ಮೋದಿ ಕರ್ನಾಟಕ ಪ್ರವಾಸ, ಸೃಷ್ಟಿಯಾಗುತ್ತಾ ಹೊಸ ಇತಿಹಾಸ?

‘ಜಲಜೀವನ್‌ ಮಿಷನ್‌’ ಯೋಜನೆಯಡಿ ತಿಪಟೂರು ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯನ್ನು 430 ಕೋಟಿ ರು. ವೆಚ್ಚದಲ್ಲಿ, ಚಿಕ್ಕನಾಯಕನಹಳ್ಳಿ ವ್ಯಾಪ್ತಿಯ 147 ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು 115 ಕೋಟಿ ರು. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಈ ಎರಡೂ ಯೋಜನೆಗಳು ಸಾವಿರಾರು ಜನರಿಗೆ ಸ್ವಚ್ಛ ಕುಡಿಯುವ ನೀರಿನ ಸೌಲಭ್ಯವನ್ನು ಖಚಿತಪಡಿಸಲಿವೆ. ನಂತರ ತುಮಕೂರಿನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್‌ ಮೂಲಕವೇ ಆಗಮಿಸಲಿರುವ ಮೋದಿ ಅವರು, ಅಲ್ಲಿಂದ ಸಂಜೆ 5.30ಕ್ಕೆ ದೆಹಲಿಗೆ ಹಿಂತಿರುಗಲಿದ್ದಾರೆ.

ಕರ್ನಾಟಕಕ್ಕೆ ಬರಲು ಕಾತುರನಾಗಿದ್ದೇನೆ

ಕರ್ನಾಟಕಕ್ಕೆ ಬರಲು ಕಾತುರನಾಗಿದ್ದೇನೆ. ಸೋಮವಾರ ಬೆಂಗಳೂರಿನಲ್ಲಿ ‘ಭಾರತ ಇಂಧನ ಸಪ್ತಾಹ’ದಲ್ಲಿ ಭಾಗವಹಿಸುತ್ತೇನೆ. ನಂತರ ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಮತ್ತು ವಿವಿಧ ಯೋಜನೆಗಳ ಶಂಕುಸ್ಥಾಪನೆ ಮಾಡಲು ತುಮಕೂರಿಗೆ ಭೇಟಿ ನೀಡುತ್ತೇನೆ ಅಂತ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. 

6 ಕಾರ್ಯಕ್ರಮ

1. ಬೆಂಗಳೂರಿನಲ್ಲಿ ‘ಭಾರತ ಇಂಧನ ಸಪ್ತಾಹ’ ಉದ್ಘಾಟನೆ
2. 20% ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ವಿತರಣೆಗೆ ಚಾಲನೆ
3. ಏಕಬಳಕೆ ಪ್ಲಾಸ್ಟಿಕ್‌ನಿಂದ ತಯಾರಿಸಿದ ಸಮವಸ್ತ್ರ ಬಿಡುಗಡೆ
4. ತುಮಕೂರಿನ ಗುಬ್ಬಿಯಲ್ಲಿ ದೇಶದ ಅತಿದೊಡ್ಡ ಹೆಲಿಕಾಪ್ಟರ್‌ ತಯಾರಿಕೆ ಘಟಕ ಉದ್ಘಾಟನೆ
5. ತುಮಕೂರಿನಲ್ಲಿ ನಿರ್ಮಾಣವಾಗುವ 8484 ಎಕರೆ ಕೈಗಾರಿಕಾ ಟೌನ್‌ಶಿಪ್‌ಗೆ ಶಂಕುಸ್ಥಾಪನೆ
6. ತಿಪಟೂರು, ಚಿಕ್ಕನಾಯಕನಹಳ್ಳಿಯಲ್ಲಿ 545 ಕೋಟಿ ರು. ಕುಡಿವ ನೀರಿನ ಯೋಜನೆಗೆ ಶಂಕು