ಪ್ರಧಾನಿ ನರೇಂದ್ರ ಮೋದಿ ಅವರ ಶುಕ್ರವಾರದ ಬೆಂಗಳೂರು ಭೇಟಿ ಆಡಳಿತಾರೂಢ ಬಿಜೆಪಿಗೆ ತುಸು ಲಾಭ ತರುವ ಸಾಧ್ಯತೆಯಿದೆ. ರಾಜ್ಯ ವಿಧಾನಸಭೆಯ ಚುನಾವಣೆಗೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಕೆಂಪೇಗೌಡರ ಬೃಹತ್‌ ಪ್ರತಿಮೆ ಅನಾವರಣ ಮಾಡಿದರು.

ಬೆಂಗಳೂರು (ನ.12): ಪ್ರಧಾನಿ ನರೇಂದ್ರ ಮೋದಿ ಅವರ ಶುಕ್ರವಾರದ ಬೆಂಗಳೂರು ಭೇಟಿ ಆಡಳಿತಾರೂಢ ಬಿಜೆಪಿಗೆ ತುಸು ಲಾಭ ತರುವ ಸಾಧ್ಯತೆಯಿದೆ. ರಾಜ್ಯ ವಿಧಾನಸಭೆಯ ಚುನಾವಣೆಗೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಕೆಂಪೇಗೌಡರ ಬೃಹತ್‌ ಪ್ರತಿಮೆ ಅನಾವರಣ, ವಿಧಾನಸೌಧದ ಬಳಿಯ ಕನಕದಾಸ ಮತ್ತು ವಾಲ್ಮೀಕಿ ಪ್ರತಿಮೆಗಳಿಗೆ ಪ್ರಧಾನಿ ಮೋದಿ ಅವರು ಮಾಲಾರ್ಪಣೆ ಮಾಡಿದ್ದು, ರಾಜ್ಯದಲ್ಲಿನ ಮೂರು ಪ್ರಬಲ ಸಮುದಾಯಗಳ ವಿಶ್ವಾಸ ಗಳಿಸಲು ಸಹಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕೆಂಪೇಗೌಡರ ಪ್ರತಿಮೆ ಮೂಲಕ ಒಕ್ಕಲಿಗ ಸಮುದಾಯ, ಕನಕದಾಸ ಪ್ರತಿಮೆಗೆ ಮಾಲಾರ್ಪಣೆ ಮೂಲಕ ಕುರುಬ ಸಮುದಾಯ ಹಾಗೂ ವಾಲ್ಮೀಕಿ ಸಮುದಾಯದ ಜನರು ಬಿಜೆಪಿಯತ್ತ ಸ್ವಲ್ಪವಾದರೂ ಒಲವು ತೋರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಹೋಲಿಸಿದರೆ ದುರ್ಬಲ ಎಂದೇ ಹೇಳಬಹುದಾಗಿದೆ. ಈ ಭಾಗದಲ್ಲಿ ಪಕ್ಷದ ಸಂಘಟನೆ ಬಲಗೊಂಡರೆ ಮಾತ್ರ ಪಕ್ಷ ತನ್ನ ಸ್ವಂತ ಬಲದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂಬುದು ಬಿಜೆಪಿ ವರಿಷ್ಠರ ಸ್ಪಷ್ಟಅಭಿಮತ. ಹಳೆ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಸಮುದಾಯ ಒಕ್ಕಲಿಗ. ಈ ಸಮುದಾಯದ ಮಹಾನ್‌ ವ್ಯಕ್ತಿ ಎಂದೇ ಕರೆಯಲ್ಪಡುವ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಮೂಲಕ ಸಮುದಾಯದ ವಿಶ್ವಾಸ ಗಳಿಸಲು ನೆರವಾಗಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಏರ್‌ಪೋರ್ಟ್‌ಗೆ ಕೆಂಪೇಗೌಡ ಹೆಸರಿಟ್ಟಿದ್ದು ನಾವು: ಸಿಎಂ ಬೊಮ್ಮಾಯಿ

ಇನ್ನು ಶುಕ್ರವಾರ ಕನಕ ಜಯಂತಿ ಕಾರ್ಯಕ್ರಮವಿತ್ತು. ಹೀಗಾಗಿ, ಆ ಜಯಂತಿ ನೆಪವಾಗಿ ವಿಧಾನಸೌಧದ ಬಳಿಯ ಶಾಸಕರ ಭವನದ ಆವರಣದಲ್ಲಿರುವ ಕನಕದಾಸ ಪ್ರತಿಮೆಗೆ ಪ್ರಧಾನಿ ಮೋದಿ ಅವರಿಂದ ಮಾಲಾರ್ಪಣೆ ಮಾಡಿಸುವುದಕ್ಕೆ ರಾಜ್ಯ ಬಿಜೆಪಿ ನಾಯಕರು ನಿರ್ಧರಿಸಿದರು. ಕನಕದಾಸರ ಪ್ರತಿಮೆ ಪಕ್ಕದಲ್ಲೇ ವಾಲ್ಮೀಕಿ ಪ್ರತಿಮೆಯಿದೆ. ಹೀಗಾಗಿ, ಎರಡೂ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿಸುವುದು ಸೂಕ್ತ ಎಂಬ ನಿಲವಿಗೆ ಬಂದ ಬಿಜೆಪಿ ನಾಯಕರು ಅದನ್ನು ಪ್ರಧಾನಿಗೆ ತಿಳಿಸಿ ಮನವೊಲಿಸುವಲ್ಲಿ ಯಶಸ್ವಿಯಾದರು ಎಂದು ಹೇಳಲಾಗಿದೆ.

5ಜಿ ಪ್ಲಸ್‌ ನೆಟ್‌ವರ್ಕ್ ಪಡೆದ ಮೊದಲ ವಿಮಾನ ನಿಲ್ದಾಣ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನೂತನ ಟರ್ಮಿನಲ್‌ನಲ್ಲಿ ಅಲ್ಟಾ್ರಫಾಸ್ಟ್‌ 5ಜಿ ನೆಟ್‌ವರ್ಕ್ ಸೇವೆ ಆರಂಭಗೊಂಡಿದೆ. ಏರ್‌ಟೆಲ್‌ನ 5ಜಿ ಪ್ಲಸ್‌ ಸೇವೆಯಿಂದ ಈ ಸೇವೆ ಹೊಂದಿರುವ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಏರ್‌ಪೋರ್ಟ್‌ನ ಸಾಮರ್ಥ್ಯ ಈಗ 2.5 ಕೋಟಿ ಪ್ರಯಾಣಿಕರಿಗೆ ಹೆಚ್ಚಳ: ಆವಿಷ್ಕಾರ, ಸುಸ್ಥಿರತೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ನೂತನ ಟರ್ಮಿನಲ್‌ ನಿರ್ಮಾಣದಿಂದ ನಮ್ಮ ವಿಮಾನ ನಿಲ್ದಾಣದ ಸಾಮರ್ಥ್ಯ ವರ್ಷಕ್ಕೆ 2.5 ಕೋಟಿ ಪ್ರಯಾಣಿಕರಿಗೆ ಹೆಚ್ಚಳವಾಗಿದೆ ಬಿಐಎಎಲ್‌ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಓ ಹರಿ ಮುರಾರ್‌ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

63 ಎಕರೆ ವಿಶಾಲ ವಿಸ್ತೀರ್ಣ: 2ನೇ ಟರ್ಮಿನಲ್‌ನ ಮೊದಲ ಹಂತವು ಬರೋಬ್ಬರಿ 2,55,661 ಚದರ ಮೀಟರ್‌ (63 ಎಕರೆ) ಬೃಹತ್‌ ವಿಸ್ತೀರ್ಣ ಹೊಂದಿದೆ. ಹೊಸ ಟರ್ಮಿನಲ್‌ ಮೊದಲ ಟರ್ಮಿನಲ್‌ನ ಈಶಾನ್ಯ ದಿಕ್ಕಿನಲ್ಲಿದ್ದು, ನ್ಯೂಯಾರ್ಕ್ ಮೂಲದ ವಾಸ್ತು ಶಿಲ್ಪ ಕಂಪನಿಯು ಇದನ್ನು ವಿನ್ಯಾಸಗೊಳಿಸಿದೆ.

ಟರ್ಮಿನಲ್‌ ಅಲ್ಲ ಉದ್ಯಾನ!: 2ನೇ ಟರ್ಮಿನಲ್‌ ಅನ್ನು ಟರ್ಮಿನಲ್‌ ರೀತಿಯಲ್ಲಿ ಅಲ್ಲದೆ ಉದ್ಯಾನದ ರೀತಿಯಲ್ಲಿ ನಿರ್ಮಿಸಿದ್ದಾರೆ. ಪ್ರಯಾಣಿಕರು ನಡೆದಷ್ಟೂಸುತ್ತಲೂ ಹಸಿರು ಆವರಿಸಿರುವಂತೆ ವಿನ್ಯಾಸಗೊಳಿಸಲಾಗಿದೆ. ಮುಖ್ಯ ರಸ್ತೆಯಿಂದ ಟಿ-2 ಪ್ರವೇಶಿಸುವವರೆಗೆ ಹಾಗೂ ಅಲ್ಲಿಂದ ವಿಮಾನ ಹತ್ತುವವರೆಗೆ ಸುತ್ತಲೂ ಹಸಿರು ಕಾಣುವಂತೆ ಮಾಡಲಾಗಿದೆ. ಟರ್ಮಿನಲ್‌ ಸುತ್ತಲೂ 10,235 ಚದರ ಅಡಿಗಳಷ್ಟುಹಸಿರು ಗೋಡೆ (ವರ್ಟಿಕಲ್‌ ಗಾರ್ಡನ್‌), ಕಂಚಿನ ಪರದೆಗಳ ಮೂಲಕ ಟರ್ಮಿನಲ್‌ನ ತಾರಸಿಯಿಂದ ಜೋತು ಬೀಳುವ ಹಸಿರು ಗಿಡಗಳು, ಹಸಿರು ಕೊಳಗಳು ಮುದ ನೀಡುತ್ತವೆ. 620 ಸ್ಥಳೀಯ ಸಸ್ಯಗಳು, 3,600ಕ್ಕೂ ಹೆಚ್ಚು ಹೊಸ ಸಸ್ಯ ಪ್ರಭೇದಗಳು, 150ರಷ್ಟು ತಾಳೆ ಪ್ರಭೇದ, 7,700ರಷ್ಟುಕಸಿ ಆದ ಮರ, 100 ವಿಧದ ಲಿಲ್ಲಿ, 96 ರೀತಿಯ ಕಮಲ, 180 ಅಪರೂಪದ ಸಸಿಗಳು ಇಲ್ಲಿವೆ. ಇನ್ನು ಟರ್ಮಿನಲ್‌ನ ಒಳಾಂಗಣಗಳು ಬಿದಿರಿನಿಂದ ಸ್ಫೂರ್ತಿ ಪಡೆದಿದ್ದು, ಸಾಂಪ್ರದಾಯಿಕ ಬಿದಿರಿನ ನೇಯ್ಗೆ ಹೊಂದಿವೆ. ಇದು ಟರ್ಮಿನಲ್‌ಗೆ ಆಧುನಿಕತೆ ಜತೆ ಕ್ಲಾಸಿಕ್‌ ಸ್ಪರ್ಶ ನೀಡಿದೆ.

ಏಕತೆಯ ಸಂದೇಶ ಸಾರಿದ್ದ ಕನಕದಾಸರು: ಪ್ರಧಾನಿ ಮೋದಿ

ಮುಖವೇ ಬೋರ್ಡಿಂಗ್‌ ಪಾಸ್‌!: ‘ನಿಮ್ಮ ಮುಖವೇ ನಿಮ್ಮ ಬೋರ್ಡಿಂಗ್‌ ಪಾಸ್‌’ ತಂತ್ರಜ್ಞಾನದಿಂದ ಪ್ರಯಾಣಿಕರು ಯಾವುದೇ ಅಡೆತಡೆಗಳಿಲ್ಲದೆ ಸೆಕ್ಯುರಿಟಿ ಚೆಕ್‌ಗಳನ್ನು ದಾಟಿ ಹೋಗಲು ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಪ್ರಯಾಣಿಕರ ಮುಖವನ್ನೇ ಬಯೋಮೆಟ್ರಿಕ್‌ ಟೋಕನ್‌ನಂತೆ ಪರಿಗಣಿಸಲಾಗುತ್ತದೆ. 90 ಕೌಂಟರ್‌ಗಳನ್ನು ಹೊಂದಿರುವ 2ನೇ ಟರ್ಮಿನಲ್‌ ವೇಗದ ಚೆಕ್‌-ಇನ್‌ಗಳು, ಸುರಕ್ಷತಾ ತಪಾಸಣೆ (ಸೆಕ್ಯುರಿಟಿ ಚೆಕ್‌) ಪ್ರದೇಶಗಳಿಂದ ವೇಗವಾಗಿ ಮುನ್ನಡೆಯಲು ಅನುವು ಮಾಡಿಕೊಡಲಿದೆ. ಜತೆಗೆ ಡಿಜಿ ಯಾತ್ರೆ, ಸೆಲ್ಫ್‌-ಬ್ಯಾಗೇಜ್‌ ಡ್ರಾಪ್‌ ವ್ಯವಸ್ಥೆ ಮೂಲಕ ತಡೆರಹಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.