‘ವಂದೇ ಭಾರತ್‌’ ಕೇವಲ ರೈಲು ಮಾತ್ರವಲ್ಲ, ಭಾರತದ ಹೊಸ ಹೆಗ್ಗುರುತು. ಹೀಗಾಗಿ, ದೇಶಾದ್ಯಂತ 400ಕ್ಕೂ ಅಧಿಕ ವಂದೇ ಭಾರತ್‌ ರೈಲುಗಳು ಮತ್ತು ವಿಸ್ಟಾಡೋಮ್‌ ಬೋಗಿ ರೈಲುಗಳು ಮುಂದಿನ ದಿನಗಳಲ್ಲಿ ಸಂಚರಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬೆಂಗಳೂರು (ನ.12): ‘ವಂದೇ ಭಾರತ್‌’ ಕೇವಲ ರೈಲು ಮಾತ್ರವಲ್ಲ, ಭಾರತದ ಹೊಸ ಹೆಗ್ಗುರುತು. ಹೀಗಾಗಿ, ದೇಶಾದ್ಯಂತ 400ಕ್ಕೂ ಅಧಿಕ ವಂದೇ ಭಾರತ್‌ ರೈಲುಗಳು ಮತ್ತು ವಿಸ್ಟಾಡೋಮ್‌ ಬೋಗಿ ರೈಲುಗಳು ಮುಂದಿನ ದಿನಗಳಲ್ಲಿ ಸಂಚರಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದಕ್ಷಿಣ ಭಾರತದ ಮೊದಲ ಹೈಸ್ಪೀಡ್‌ ಚೆನ್ನೈ-ಮೈಸೂರು ‘ವಂದೇ ಭಾರತ್‌’ ರೈಲಿಗೆ ಶುಕ್ರವಾರ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಅವರು ಅಧಿಕೃತ ಚಾಲನೆ ನೀಡಿದರು. ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ರೈಲ್ವೆ ಸೌಕರ್ಯಗಳ ಕುರಿತು ಮಾತನಾಡಿದ ಅವರು, ವಂದೇ ಭಾರತ್‌ ರೈಲು ಭಾರತವು ನಿಶ್ಚಲತೆಯ ದಿನಗಳಿಂದ ಹೊರಬಂದಿದೆ ಎಂಬುದಕ್ಕೆ ಸಂಕೇತವಾಗಿದೆ. ಭಾರತೀಯ ರೈಲ್ವೆಯ ಸಂಪೂರ್ಣ ಬದಲಾವಣೆಯ ಗುರಿಯೊಂದಿಗೆ ನಾವು ಸಾಗುತ್ತಿದ್ದೇವೆ. ಈ ನಿಟ್ಟಿನಲ್ಲಿ 400ಕ್ಕೂ ಅಧಿಕ ವಂದೇ ಭಾರತ್‌ ರೈಲುಗಳು ಮತ್ತು ವಿಸ್ಟಾಡೋಮ್‌ ಬೋಗಿಗಳನ್ನು ಹೊಂದಿರುವ ರೈಲುಗಳು ಮುಂದಿನ ದಿನಗಳಲ್ಲಿ ಸಂಚರಿಸಲಿದ್ದು, ಇವು ಭಾರತೀಯ ರೈಲ್ವೆಯ ಹೊಸ ಗುರುತಾಗಲಿವೆ ಎಂದರು.

ಏಕತೆಯ ಸಂದೇಶ ಸಾರಿದ್ದ ಕನಕದಾಸರು: ಪ್ರಧಾನಿ ಮೋದಿ

ಕಳೆದ ಹಲವು ವರ್ಷಗಳಿಂದ ರೈಲು ಸಂಪರ್ಕ ಕ್ಷೇತ್ರದಲ್ಲಿಯೂ ಕ್ರಾಂತಿಕಾರಿ ಬೆಳವಣಿಗೆಗಳಾಗಿವೆ. ಸರಕು ಸಾಗಣೆ, ಪ್ರಯಾಣಿಕರ ರೈಲುಗಳ ವೇಗ ಹೆಚ್ಚಿಸಲಾಗಿದ್ದು, ಸಮಯ ಉಳಿತಾಯವಾಗುತ್ತಿದೆ. ರೈಲು ನಿಲ್ದಾಣಗಳ ಆಧುನೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನ ಸರ್‌ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಹೊಸ ಅನುಭವವನ್ನೇ ನೀಡುತ್ತದೆ. ಜತೆಗೆ ಬೆಂಗಳೂರಿನ ರೈಲು ನಿಲ್ದಾಣಗಳು ಪ್ರಯಾಣಿಕರಿಗೆ ಉತ್ತಮ ಅನುಭವ ಒದಗಿಸುತ್ತಿವೆ. ಕರ್ನಾಟಕ ಸೇರಿದಂತೆ ಇತರ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ವಾಣಿಜ್ಯ ಚಟುವಟಿಕೆ ಹೆಚ್ಚಿಸಲಿದೆ: ಕೈಗಾರಿಕಾ ಕೇಂದ್ರ ಚೆನ್ನೈನಿಂದ ನವೋದ್ಯಮ ರಾಜಧಾನಿ ಬೆಂಗಳೂರು ಹಾಗೂ ಪಾರಂಪರಿಕ ನಗರಿ ಮೈಸೂರನ್ನು ಸಂಪರ್ಕಿಸುವ ಮೇಡ್‌ ಇನ್‌ ಇಂಡಿಯಾ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಮೊದಲ ರೈಲನ್ನು ಕರ್ನಾಟಕವು ಪಡೆದುಕೊಂಡಿದೆ. ಈ ರೈಲು ಸಂಪರ್ಕ ಸೌಲಭ್ಯದ ಜತೆಗೆ ವಾಣಿಜ್ಯ ಚಟುವಟಿಕೆಗಳನ್ನೂ ಹೆಚ್ಚಿಸುತ್ತದೆ. ಜನರ ಜೀವನವನ್ನು ಹೆಚ್ಚು ಸುಗಮಗೊಳಿಸುತ್ತದೆ. ಈ ರೈಲಿಗೆ ಚಾಲನೆ ನೀಡಿದ್ದು, ಸಂತಸವಾಗಿದೆ ಎಂದರು.

ನಮ್ಮದು ಜನಸ್ಪಂದನೆಯ ಸರ್ಕಾರ: ಸಿಎಂ ಬೊಮ್ಮಾಯಿ

ರೈಲು ಪರಿಶೀಲನೆ ನಡೆಸಿದ ಪ್ರಧಾನಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಸ್ವಾಗತಿಸಿದರು. ಬಳಿಕ ಪ್ಲಾಟ್‌ಫಾರಂ ಸಂಖ್ಯೆ 7ರಲ್ಲಿ ನಿಂತಿದ್ದ ವಂದೇಭಾರತ್‌ ಎಕ್ಸ್‌ಪ್ರೆಸ್‌ ಒಳ ಪ್ರವೇಶಿಸಿದ ಪ್ರಧಾನಿಗಳು ಲೊಕೋ ಪೈಲಟ್‌ಗಳನ್ನು (ಚಾಲಕರು) ಮಾತನಾಡಿಸಿದರು. ಹೊಸ ರೈಲಿನ ಸುರಕ್ಷಿತ ಚಾಲನೆಗೆ ಶುಭಕೋರಿದರು. ನಂತರ ರೈಲಿನ ಬೋಗಿಗೆ ತೆರಳಿ ವಿನ್ಯಾಸ, ಅಲ್ಲಿನ ತಂತ್ರಜ್ಞಾನದ ಕುರಿತು ಪರಿಶೀಲನೆ ನಡೆಸಿದರು. ಬಳಿಕ ಬೆಳಗ್ಗೆ 10.10ಕ್ಕೆ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕದ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಮತ್ತು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಉಪಸ್ಥಿತರಿದ್ದರು.