ಮಂಡ್ಯ, (ಜ.30): ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಕಾರ್ಯಕರ್ತ ಸಿ.ಟಿ. ಮಂಜುನಾಥ್ ಮಾಡಿದ್ದ ಮನವಿಗೆ ಪ್ರಧಾನಿ ಕಾರ್ಯಾಲಯ ಸ್ಪಂದಿಸಿದೆ.

ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಂಬಂಧಿಸಿದ ಕೇಂದ್ರ ಜಲ ಆಯೋಗ ಹಾಗೂ ಕೇಂದ್ರ ಅಣೆಕಟ್ಟು ಸುರಕ್ಷತಾ ಸಮಿತಿ, ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಇಲಾಖೆ ಅಧೀನ ಕಾರ್ಯದರ್ಶಿಗೆ ಇ-ಮೇಲ್ ರವಾನಿಸಿ ಸೂಚಿಸಿದೆ.

ಗಣಿಗಾರಿಕೆಯಿಂದ KRSಗೂ ಕಾದಿದೆ ಮಹಾ ಆಪತ್ತು : ಸಿಎಂ ಖಡಕ್ ಸೂಚನೆ

ಜ.24ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿ.ಟಿ. ಮಂಜುನಾಥ್ ಪತ್ರ ಬರೆದು ಶಿವಮೊಗ್ಗದಲ್ಲಿ ಸ್ಫೋಟಕಗಳನ್ನು ತುಂಬಿದ್ದ ಲಾರಿ ಸ್ಫೋಟಗೊಂಡ ವಿಷಯವನ್ನು ಪ್ರಸ್ತಾಪಿಸಿ ಜೊತೆಗೆ ಕೃಷ್ಣರಾಜಸಾಗರ ಸಮೀಪದ ಬೇಬಿ ಬೆಟ್ಟದಲ್ಲಿ 2018ರ ಸೆ.25ರಂದು ಗಣಿ ಸ್ಫೋಟ ಸಂಭವಿಸಿದ್ದನ್ನು ಉಲ್ಲೇಖಿಸಿದ್ದರು. 

ಈ ಸ್ಫೋಟ ಕುರಿತು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದ್ದ ವೈಜ್ಞಾನಿಕ ವರದಿ, ಅಣೆಕಟ್ಟೆ ಸುರಕ್ಷತೆಗೆ ನೀಡಿದ್ದ ಸಲಹೆ ಹಾಗೂ 20 ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲು ಗಣಿ ಚಟುವಟಿಕೆ ನಿಷೇಧಿಸುವಂತೆ ಸಲಹೆ ನೀಡಿದ್ದನ್ನು ಮನವಿ ಪತ್ರದಲ್ಲಿ ಪ್ರಸ್ತಾಪಿಸಿ ಅಂಚೆ ಹಾಗೂ ಇ-ಮೇಲ್ ಮೂಲಕ ಕಳುಹಿಸಿದ್ದರು.
 
ಪಕ್ಷದ ಕಾರ್ಯಕರ್ತ ರವಾನಿಸಸಿದ ಮನವಿಯನ್ನು ಪರಿಶೀಲನೆ ನಡೆಸಿದ ಪ್ರಧಾನಿ ಕಾರ್ಯಾಲಯ, ತಕ್ಷಣ ಈ ಬಗ್ಗೆ ಕ್ರಮ ವಹಿಸಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದೆ. 

ಜಲಸಂಪನ್ಮೂಲ ಇಲಾಖೆಯ ಅಧೀನ ಕಾರ‌್ಯದರ್ಶಿ ಕೆ. ಸುಶೀಲ ಹಾಗೂ ಮುಖ್ಯಮಂತ್ರಿಗಳ ಕಾರ‌್ಯದರ್ಶಿ ಅವರಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.