Asianet Suvarna News Asianet Suvarna News

ಎಲ್ಲರೊಳಗೊಂದಾಗಿ ದೇಶ ಕಟ್ಟುತ್ತಿರುವ ನಾಯಕ ನರೇಂದ್ರ ಮೋದಿ

ಭಾರತದ ಯಾವ ಭಾಗಕ್ಕೇ ಹೋದರೂ ಅಲ್ಲಲ್ಲಿಯ ರೀತಿರಿವಾಜುಗಳನ್ನು ಗೌರವಿಸುವುದು ಕೂಡ ವ್ಯಕ್ತಿಕೇಂದ್ರಿತ ರಾಜಕಾರಣದ ಜಾಗದಲ್ಲಿ ಜನಕೇಂದ್ರಿತ ಆಡಳಿತವನ್ನು ನಡೆಸುತ್ತಿರುವುದರ ಸಂಕೇತವಾಗಿದೆ. ಇದರ ಮುಂದುವರಿದ ಭಾಗವಾಗಿ ಅವರು ತಮ್ಮ ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಅಲ್ಲಲ್ಲಿರುವ ಅನಿವಾಸಿ ಭಾರತೀಯರನ್ನು (ಇಂಡಿಯನ್‌ ಡಯಾಸ್ಪೋರ) ಒಂದೆಡೆ ಕಲೆಯುವಂತೆ ಮಾಡಿ, ಅವರೊಳಗೆ ತಾವೂ ಒಬ್ಬರಾಗಿ ಬಿಡುತ್ತಾರೆ. ಇದು, ಪ್ರಾಮಾಣಿಕವಾದ ಸಮರ್ಪಣಾ ಭಾವವಿದ್ದಲ್ಲಿ ಮಾತ್ರ ಸಾಧ್ಯವಾಗುತ್ತದಷ್ಟೆ.

PM narendra modi birthday special nalin kumar kateel article today ravjkl
Author
First Published Sep 17, 2022, 10:04 AM IST

- ನಳಿನ್‌ ಕುಮಾರ್‌ ಕಟೀಲ್ಲ, ರಾಜ್ಯ ಬಿಜೆಪಿ ಅಧ್ಯಕ್ಷ

ಇಂದು (ಸೆ.17) ನಮ್ಮೆಲ್ಲರ ನೆಚ್ಚಿನ ನಾಯಕ ಮತ್ತು ದ್ರಷ್ಟಾರ ನರೇಂದ್ರ ಮೋದಿಯವರ 72ನೇ ಜನ್ಮದಿನ. ದೇಶದ ಪ್ರಧಾನಿಯಾಗಿ ಕಳೆದ ಎಂಟು ವರ್ಷಗಳಲ್ಲಿ ಅವರು ಹಲವು ವಿಕ್ರಮಗಳ ನವೋನ್ಮೇಷವನ್ನೇ ಸೃಷ್ಟಿಸಿದ್ದಾರೆ. ದೇಶವಾಸಿಗಳ ಅಂತರಂಗದಲ್ಲಿ ಭರವಸೆಯ ಹೊಸಬೆಳಕು ಮೂಡುವಂತೆ ಮಾಡಿದ್ದಾರೆ. ನವಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಪಾಲುದಾರರಾಗುವಂತೆ ಪ್ರೇರೇಪಿಸುತ್ತಿದ್ದಾರೆ. ದೇಶವನ್ನು ಜಗತ್ತಿನ ಬೃಹತ್‌ ಆರ್ಥಿಕತೆಗಳ ಪೈಕಿ ಒಂದನ್ನಾಗಿ ಮಾಡುವತ್ತ ದಾಪುಗಾಲಿಟ್ಟಿದ್ದಾರೆ. ಒಟ್ಟಿನಲ್ಲಿ, ಭಾರತವೆಂದರೆ ಈಗ ಇಡೀ ಜಗತ್ತೇ ಮೂಕವಿಸ್ಮಿತವಾಗುವಂತೆ ಮಾಡಿರುವ ಶ್ರೇಯಸ್ಸು ಮೋದಿಯವರದಾಗಿದೆ. ಇಂತಹ ಅನುಪಮ ಸಾಧನೆಯು ಏನಕೇನ ಪ್ರಕಾರೇಣ ಸಾಧ್ಯವಾಗುವಂಥದ್ದಲ್ಲ. ಇದು ಸಾಮೂಹಿಕ ಅಥವಾ ಸಾಮುದಾಯಿಕ ಪ್ರಜ್ಞೆಯನ್ನು ಒಳಗೊಂಡ ಧೀಶಕ್ತಿಯನ್ನು ಬೇಡುತ್ತದೆ; ಪರಂಪರೆ ಮತ್ತು ಆಧುನಿಕತೆ ಎರಡನ್ನೂ ಬೆಸೆಯುವ ಪ್ರಜ್ಞೆಯನ್ನು ನಿರೀಕ್ಷಿಸುತ್ತದೆ; ದೇಶದೊಳಗಿನ ಅಂತಃಸ್ಸತ್ವದ ಅರಿವು ಮತ್ತು ಸಮಕಾಲೀನ ಜಿಯೋ-ಪಾಲಿಟಿಕ್ಸ್‌ನ ವಿದ್ಯಮಾನಗಳ ಸ್ಪಷ್ಟವಾದ ಗ್ರಹಿಕೆಯನ್ನು ಬಯಸುತ್ತದೆ. ಇವೆಲ್ಲವೂ ನಾಯಕರಾದವರ ವ್ಯಕ್ತಿತ್ವದಲ್ಲಿ ಏಕತ್ರಗೊಂಡರೆ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯವಷ್ಟೆ. ಮೋದಿಯವರಲ್ಲಿ ಇವೆಲ್ಲವೂ ಸಂಗಮಿಸಿರುವುದು ನಿಜಕ್ಕೂ ಒಂದು ಅಚ್ಚರಿಯ ಸಂಗತಿಯಾಗಿದೆ.

ಕರ್ತವ್ಯಪಥದಲ್ಲಿ ಉದಯಿಸುತ್ತಿರುವ ನವಭಾರತ

ಮೋದಿ ಸಾಂಘಿಕ ಗುಣದ ಇತಿಹಾಸ

ನರೇಂದ್ರ ಮೋದಿಯವರು ಮೊದಲಿನಿಂದಲೂ ಸಾಂಘಿಕತೆಯಲ್ಲಿ ನಂಬಿಕೆ ಇಟ್ಟುಕೊಂಡವರಾಗಿದ್ದಾರೆ. ಅವರ ಈ ಗುಣ ಕೇವಲ ಪ್ರಧಾನಿಯಾದ ಮೇಲೆ ಎಲ್ಲರಿಗೂ ಗೊತ್ತಾಗಿದೆಯಷ್ಟೆ. ವಾಸ್ತವವಾಗಿ, ಮೋದಿಯವರಲ್ಲಿ ಸುಪ್ತವಾಗಿದ್ದ ಈ ಬಗೆಯ ಸಾಮುದಾಯಿಕ ಪ್ರಜ್ಞೆ ಮೊಟ್ಟಮೊದಲಿಗೆ ಪ್ರಕಟವಾಗಿದ್ದು 1979ರಲ್ಲಿ ಗುಜರಾತಿನ ಮೋರ್ಬಿ ಪಟ್ಟಣದಲ್ಲಿ ಸಂಭವಿಸಿದ ದುರಂತದ ಸಮಯದಲ್ಲಿ! ಅಂದರೆ, ಆಗ ಅಲ್ಲಿ ಮಚ್ಛೂ ನದಿಗೆ ಕಟ್ಟಿದ್ದ ಅಣೆಕಟ್ಟು ಹಠಾತ್ತನೆ ಒಡೆದು, ಏನಿಲ್ಲವೆಂದರೂ 25 ಸಾವಿರ ಜನರು ಸಾವಿಗೀಡಾದರು. ಆಗ ಅಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರಕಾರವು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ದಾರುಣವಾಗಿ ವಿಫಲವಾಗಿದ್ದು ಇತಿಹಾಸದ ಒಂದು ಕರಾಳ ಅಧ್ಯಾಯವಾಗಿದೆ. ಆ ಸಂದರ್ಭದಲ್ಲಿ ಅಖಾಡಕ್ಕೆ ಧುಮುಕಿದವರು ನರೇಂದ್ರ ಮೋದಿ! ಆಗ ಕ್ಷಿಪ್ರವಾಗಿ ಕಾರ್ಯಪ್ರವೃತ್ತರಾದ ಮೋದಿಯವರು, ಮೋರ್ಬಿಯ ಜನತೆಗೆ ಒಂದು ಸಾರ್ವಜನಿಕ ಪತ್ರ ಬರೆದು, ನಾಮಾವಶೇಷವಾಗಿರುವ ಮೋರ್ಬಿ ಪಟ್ಟಣದ ಪುನರ್ನಿಮಾರ್ಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಮನೆಮನೆ ಬಾಗಿಲಿಗೆ ಹೋಗಿ ಕರೆ ನೀಡಿದರು! ಇದಕ್ಕೆ ಸಿಕ್ಕಿದ ಸ್ಪಂದನೆ ಅಭೂತಪೂರ್ವವಾಗಿತ್ತು. ಈ ಮೂಲಕ, ಮೋದಿಯವರು ಆಗ ಅಸಹಾಯಕರಾಗಿದ್ದ ಜನರಲ್ಲಿ ಮತ್ತೆ ಚೈತನ್ಯವನ್ನು ಹುಟ್ಟಿಸಿದರು. ಈ ಕೆಲಸದಲ್ಲಿ ಅವರ ಕರೆಗೆ ಸ್ಪಂದಿಸಿ, ಸಾವಿರಾರು ಜನರು ಹೆಗಲು ಕೊಟ್ಟಿದ್ದನ್ನು ಅವರು ಇಂದಿಗೂ ಮರೆತಿಲ್ಲ.

ರೈತರನ್ನು ದಲ್ಲಾಳಿಗಳಿಂದ ಪಾರು ಮಾಡಿದ್ದರು

ಇದಾದ ನಂತರ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಸ್ಪೃಹ ಕಾರ್ಯಕರ್ತರಾಗಿ ರೈತರ ಕಲ್ಯಾಣದತ್ತ ಗಮನ ಹರಿಸಿದರು. ಆಗ ಇವರಿಗೆ ಮಾರ್ಗದರ್ಶಕರಾಗಿದ್ದವರು ಯಾರೆಂದರೆ, ಈ ದೇಶ ಕಂಡ ಅಪರೂಪದ ಕಾರ್ಮಿಕ ನಾಯಕರಾದ ದತ್ತೋಪಂತ ಠೇಂಗಡಿಯವರು. ಇವರ ಸೂಚನೆಯಂತೆ ಮೋದಿಯವರು ಗುಜರಾತಿನಲ್ಲಿ ಕೆಲಸ ಮಾಡಿದ್ದರಿಂದ, ರಾಜ್ಯದ ಲಕ್ಷಾಂತರ ರೈತರು ದಲ್ಲಾಳಿಗಳ ಕಾಟದಿಂದ ಪಾರಾಗಿ, ತಮ್ಮ ಬೆಳೆಗಳನ್ನು ಯಾರ ಕಾಟವೂ ಇಲ್ಲದೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಸಾಧ್ಯವಾಯಿತು. ಇವು ಕೇವಲ ಉದಾಹರಣೆಗಳಷ್ಟೆ. ಅಹಮದಾಬಾದ್‌ ಸೇರಿದಂತೆ ಗುಜರಾತಿನ ನಗರ ಪಾಲಿಕೆಗಳಲ್ಲಿ ಬಿಜೆಪಿ ಮೊದಲ ಬಾರಿಗೆ ಜಯಭೇರಿ ಬಾರಿಸಿದ್ದರಲ್ಲಿ, ಗುಜರಾತಿನ ಜನತೆಗೆ ಬಿಜೆಪಿಯ ಸಿದ್ಧಾಂತ ಮತ್ತು ವಿಚಾರಗಳನ್ನು ಮನವರಿಕೆ ಮಾಡಿಕೊಟ್ಟು ಅವರ ಒಲವನ್ನು ಪಕ್ಷದ ಕಡೆಗೆ ತಿರುಗಿಸುವಲ್ಲಿ, ನಂತರ ಅಲ್ಲಿ ನಡೆದ ಹಕ್ಕುಪತ್ರ ಯಾತ್ರೆಯಲ್ಲಿ ಮೋದಿಯವರು ಪ್ರಚಂಡ ಯಶಸ್ಸನ್ನು ಕಂಡಿದ್ದು ಈಗ ಇತಿಹಾಸದ ಒಂದು ಮಧುರ ಸ್ಮೃತಿಯಾಗಿದೆ. ನಂತರದ ದಿನಗಳಲ್ಲಿ ಅಡ್ವಾಣಿಯವರು ಸೋಮನಾಥದಿಂದ ಅಯೋಧ್ಯೆಯವರೆಗೆ ನಡೆಸಿದ 10,000 ಕಿಲೋಮೀಟರುಗಳ ಐತಿಹಾಸಿಕ ‘ರಥಯಾತ್ರೆ’ ಮತ್ತು ಮುರಳಿ ಮನೋಹರ ಜೋಶಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದ ಶ್ರೀನಗರದವರೆಗೆ ಕೈಗೊಂಡ ‘ಚಾರಿತ್ರಿಕ ಏಕತಾ ಯಾತ್ರೆ’ ಎರಡರಲ್ಲೂ ಮೋದಿಯವರು ವಹಿಸಿದ ಪಾತ್ರವನ್ನು ಇಲ್ಲಿ ಉಲ್ಲೇಖಿಸಬೇಕು. ರಥಯಾತ್ರೆಯಲ್ಲಿ ಇವರು ಗುಜರಾತ್‌ ರಾಜ್ಯದ ಉಸ್ತುವಾರಿಯಾಗಿದ್ದರೆ, ಜೋಶಿಯವರ ಇಡೀ ಯಾತ್ರೆಯ ಸಂಚಾಲಕರಾಗಿದ್ದರು. ಇದರ ಫಲವಾಗಿ, ಶ್ರೀನಗರದ ಲಾಲ್‌ ಚೌಕದಲ್ಲಿ ಎಷ್ಟೋ ವರ್ಷಗಳ ನಂತರ ತ್ರಿವರ್ಣ ಧ್ವಜ ರಾರಾಜಿಸಿತು! ಇದರ ಮೂಲಕ ಭಾರತದ ಅಖಂಡ ಪ್ರಜ್ಞೆ ವಿಜೃಂಭಿಸಿತು!!

ಮೋದಿಯದ್ದು ದಿಗ್ವಿಜಯ ಯಾತ್ರೆ

ಮೇಲಿನವೆಲ್ಲ ಅವರು ತೆರೆಯ ಮರೆಯಲ್ಲೇ ಇದ್ದುಕೊಂಡು ಮಾಡಿದ ಘನವಾದ ಸಾಹಸಗಳು. ಸಾಮೂಹಿಕ ಪ್ರಜ್ಞೆ ಮತ್ತು ಚೈತನ್ಯದಲ್ಲಿ ಅವರು ಇಟ್ಟಿದ್ದ ನಂಬಿಕೆಯೇ ಅವರನ್ನು ಬಳಿಕ, ಒಂದು ರಾಜಕೀಯ ಸಂಕ್ರಮಣದ ಕಾಲಘಟ್ಟದಲ್ಲಿ ಗುಜರಾತಿನ ಮುಖ್ಯಮಂತ್ರಿಯ ಹುದ್ದೆಗೆ ತಂದಿತು. ಇದರ ನಂತರದ್ದು ಅವರ ಪಾಲಿಗೆ ಒಂದು ದಿಗ್ವಿಜಯ ಯಾತ್ರೆಯೇ ಆಗಿದೆ! ಕಳೆದ 20 ವರ್ಷಗಳಿಂದ ಅವರು ಮೊದಲು ಗುಜರಾತಿನ ಮುಖ್ಯಮಂತ್ರಿಯಾಗಿ, ಬಳಿಕ ದೇಶದ ಪ್ರಧಾನಿಯಾಗಿ ನಿರಂತರವಾಗಿ ದೇಶಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡು, ತ್ರಿಕರಣಪೂರ್ವಕವಾಗಿ ಯೋಗದಾನ ಮಾಡುತ್ತಿರುವುದರ ಹಿಂದೆ ಈ ಅನನ್ಯತೆಯ ಅಮೂಲ್ಯ ಕೊಡುಗೆ ಅಪಾರ. ಇಂತಹ ಸಮರ್ಪಣಾ ಭಾವ ಎಲ್ಲರಲ್ಲೂ ಇರುವುದಿಲ್ಲ. ಆದರೆ, ಇದನ್ನು ಮೈಗೂಡಿಸಿಕೊಂಡಿರುವಂಥವರು ದೇಶವನ್ನು ಮುನ್ನಡೆಸುವ ಹೊಣೆಯನ್ನು ಹೊತ್ತಿರುವುದು ನಮ್ಮೆಲ್ಲರ ಸುದೈವ.

ಯೋಧರ ಜತೆ ಮೋದಿ ದೀಪಾವಳಿ

ಪ್ರಧಾನಿ ಮೋದಿ ತಮ್ಮನ್ನು ತಾವೇ ಎಂದೂ ಎಲ್ಲೂ ಪ್ರತಿಷ್ಠಾಪಿಸಿಕೊಂಡಿಲ್ಲ. ಅವರು ಸದಾ ದುರ್ಬಲರು ಮತ್ತು ಅಂಚಿನಲ್ಲಿರುವವರ ಸಬಲೀಕರಣದ ಬಗ್ಗೆ ಧ್ಯಾನಿಸುತ್ತಿರುತ್ತಾರೆ. ಇದು ಯೌಗಿಕವಾದ ಒಂದು ಲಕ್ಷಣವೇ ಸೈ! ಏಕೆಂದರೆ, ಮೋದಿಯವರು ಪ್ರಧಾನಿಯಾದ ಮೇಲೆ ಕೂಡ ಜನರಲ್ಲಿರುವ ಶಕ್ತಿಯನ್ನು ಅದೇ ನಮ್ರ ಭಾವದಲ್ಲಿ ಗೌರವಿಸಿ, ಅವರೊಂದಿಗೆ ಒಂದಾಗುತ್ತಿದ್ದಾರೆ. ಇದಕ್ಕೆ ನಿದರ್ಶನವಾಗಿ ಅವರು ಪ್ರತೀವರ್ಷ ಕಾಶ್ಮೀರದಲ್ಲಿ ನಮ್ಮ ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯವನ್ನೇ ನೋಡಬಹುದು. ಇದಲ್ಲದೆ, ಹಲವು ಯೋಜನೆಗಳು ನಿಜಕ್ಕೂ ಅರ್ಹರನ್ನು ತಲುಪಿವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಅವರು ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸುವ ಪರಿಯನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಹಾಗೆಯೇ, ಭಾರತದ ಯಾವ ಭಾಗಕ್ಕೇ ಹೋದರೂ ಅಲ್ಲಲ್ಲಿಯ ರೀತಿರಿವಾಜುಗಳನ್ನು ಗೌರವಿಸುವುದು ಕೂಡ ವ್ಯಕ್ತಿಕೇಂದ್ರಿತ ರಾಜಕಾರಣದ ಜಾಗದಲ್ಲಿ ಜನಕೇಂದ್ರಿತ ಆಡಳಿತವನ್ನು ನಡೆಸುತ್ತಿರುವುದರ ಸಂಕೇತವಾಗಿದೆ. ಇದರ ಮುಂದುವರಿದ ಭಾಗವಾಗಿ ಅವರು ತಮ್ಮ ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಅಲ್ಲಲ್ಲಿರುವ ಅನಿವಾಸಿ ಭಾರತೀಯರನ್ನು (ಇಂಡಿಯನ್‌ ಡಯಾಸ್ಪೋರ) ಒಂದೆಡೆ ಕಲೆಯುವಂತೆ ಮಾಡಿ, ಅವರೊಳಗೆ ತಾವೂ ಒಬ್ಬರಾಗಿ ಬಿಡುತ್ತಾರೆ. ಇದು, ಪ್ರಾಮಾಣಿಕವಾದ ಸಮರ್ಪಣಾ ಭಾವವಿದ್ದಲ್ಲಿ ಮಾತ್ರ ಸಾಧ್ಯವಾಗುತ್ತದಷ್ಟೆ.

PM Modi Birthday: ದೇಶ ಸೇವೆಯನ್ನೇ ಕೃಷಿಯಾಗಿಸಿಕೊಂಡ ರಾಜರ್ಷಿ ನರೇಂದ್ರ ಮೋದಿ

ಸಂಕುಚಿತರಿಗೆ ಮೋದಿ ಅರ್ಥವಾಗಲ್ಲ

ಎಲ್ಲವನ್ನೂ ಕೇವಲ ಚುನಾವಣಾ ರಾಜಕಾರಣದ ಸಂಕುಚಿತ ದೃಷ್ಟಿಯಲ್ಲಿ ನೋಡುವವರಿಗೆ ಇವುಗಳ ಮಹತ್ವ ಅರ್ಥವಾಗುವುದಿಲ್ಲ. ಆದರೆ, ಜನರ ಶಕ್ತಿಯನ್ನು ಅರಿತಿರುವ ಮೋದಿಯವರು ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಈ ಕಾಯಿಲೆಯ ವಿರುದ್ಧ ಜನರನ್ನು ಘಂಟಾನಾದ, ದೀಪ ಬೆಳಗಿಸುವಿಕೆ, ಕರತಾಡನ ಇತ್ಯಾದಿ ಸರಳ ಕ್ರಿಯೆಗಳ ಮೂಲಕ ಸಂಘಟಿಸಿ, ಆತ್ಮವಿಶ್ವಾಸ ಮತ್ತು ಜಾಗೃತಿಯನ್ನು ಹುಟ್ಟಿಸಿದ್ದನ್ನು ನೋಡಿದರೆ ಇವುಗಳ ಮರ್ಮ ಗೊತ್ತಾಗುತ್ತದೆ. ಇಲ್ಲದೆ ಹೋಗಿದ್ದರೆ, 130 ಕೋಟಿ ಜನರಿರುವ ಒಂದು ದೇಶದಲ್ಲಿ ಏಕೋಭಾವವನ್ನು ಮೂಡಿಸುವುದು ಕಷ್ಟವಾಗುತ್ತಿತ್ತು ಅಲ್ಲವೇ?

ಜನರ ನಾಡಿಮಿಡಿತವನ್ನು ಅರಿತಿರುವುದರಿಂದಲೇ ಮೋದಿಯವರಿಗೆ ಕಾಶಿ ಕಾರಿಡಾರ್‌ ನಿರ್ಮಾಣವಾಗಲಿ, ಕೇದಾರನಾಥದ ಜೀರ್ಣೋದ್ಧಾರವಾಗಲಿ, ಪೌರಕಾರ್ಮಿಕರ ಪಾದಪೂಜೆ ಮಾಡುವುದಾಗಲಿ ಸುಗಮವಾದ ಕರ್ತವ್ಯಗಳಾಗಿ ಪರಿಣಮಿಸುತ್ತವೆ. ಅಂದಂತೆ, ಈಗ ದೇಶದ ಎಲ್ಲ ಕಡೆಗಳಲ್ಲೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಚರ್ಚೆಯಾಗುತ್ತಿದೆ. ಇದನ್ನು ಜಾರಿಗೊಳಿಸುವ ಮುನ್ನ ಮೋದಿಯವರು ಏಕಪಕ್ಷೀಯವಾಗಿ ಏನನ್ನೂ ಮಾಡಲಿಲ್ಲ. ಬದಲಿಗೆ, ಹಳ್ಳಿಯಿಂದ ದಿಲ್ಲಿಯವರೆಗೂ ಸಂಬಂಧಿಸಿದ ಎಲ್ಲರನ್ನೂ ಸಂಪರ್ಕಿಸಿ, ಐದು ಲಕ್ಷ ಸಲಹೆ/ಅಭಿಪ್ರಾಯಗಳನ್ನು ಸ್ವೀಕರಿಸಿದ್ದರು! ಮೋದಿಯವರು ಎಲ್ಲರೊಳಗೊಂದಾಗಿ ಎಲ್ಲರ ಪಾಲಿಗೂ ಹಿತಕರವಾದ ಭಾರತವನ್ನು ಕಟ್ಟುತ್ತಿದ್ದಾರೆ. ಅವರ ಈ ಅಂತಃಶಕ್ತಿಯು ಇನ್ನೂ ನೂರ್ಕಾಲ ಪ್ರಚಂಡ ಶಕ್ತಿಯಾಗಿ ಪ್ರವಹಿಸಿ, ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿ ಎನ್ನುವುದೇ ನಮ್ಮಂತಹವರ ಅಭೀಪ್ಸೆಯಾಗಿದೆ. ಮೋದಿ ಜಿ ಅವರಿಗೆ ಇನ್ನಷ್ಟುಹೆಚ್ಚಿನ ಆಯಸ್ಸು ಮತ್ತು ತೋಳ್ಬಲವನ್ನು ತಾಯಿ ಕಟೀಲು ದುರ್ಗಾ ಪರಮೇಶ್ವರಿಯು ದಯಪಾಲಿಸಲಿ ಎಂದು ನಾಡಿನ ಸಮಸ್ತ ನಾಗರಿಕರ ಪರವಾಗಿ ಪ್ರಾರ್ಥಿಸುತ್ತೇನೆ.

Follow Us:
Download App:
  • android
  • ios