Asianet Suvarna News Asianet Suvarna News

PM Modi Birthday: ದೇಶ ಸೇವೆಯನ್ನೇ ಕೃಷಿಯಾಗಿಸಿಕೊಂಡ ರಾಜರ್ಷಿ ನರೇಂದ್ರ ಮೋದಿ

ಕೋಟ್ಯಂತರ ಭಾರತೀಯರ ಆಶೋತ್ತರಗಳನ್ನು ಸಮರ್ಪಣೆ ಹಾಗೂ ಬದ್ಧತೆಯಿಂದ ಪೂರೈಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಈಗ 72 ವರ್ಷ ತುಂಬಿದೆ. ಅವರ ಈವರೆಗಿನ ಬದುಕು ಸ್ಫೂರ್ತಿದಾಯಕವಾಗಿದೆ. ಅದು ದೇಶದ ರಾಜಕೀಯ ಇತಿಹಾಸದ ದಿಕ್ಕನ್ನೇ ಬದಲಿಸಿದ ಅನೇಕ ಮಹತ್ವದ ನೋಟಗಳನ್ನು ನೀಡುತ್ತದೆ. ಅವರಂತೆ ಒಬ್ಬ ತಂದೆಯ ರೀತಿ ಜನರ ಭಾವನೆಗಳಿಗೆ ಸ್ಪಂದಿಸಿದ ನಾಯಕನನ್ನು ದೇಶ ಹಿಂದೆಂದೂ ಕಂಡಿರಲಿಲ್ಲ.

PM Narendra Modi 72 Birth Day today rav Jkl
Author
First Published Sep 17, 2022, 8:51 AM IST

- ಡಾ.ಕೆ.ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

ಮಹಾಭಾರತದಲ್ಲಿ ಬರುವ ರಾಜ ರಂತಿದೇವ ನನಗೆ ರಾಜ್ಯಭಾರದ ಆಸೆ ಇಲ್ಲ, ಸ್ವರ್ಗಸುಖದ ಅಭಿಲಾಷೆಯೂ ಇಲ್ಲ, ಇಹಲೋಕದ ತಾಪತ್ರಯಗಳಿಂದ ಮುಕ್ತಗೊಳ್ಳುವ ಮೋಕ್ಷವೂ ಬೇಡ, ನನಗೆ ಏನಾದರೂ ಬೇಕಿದ್ದರೆ ಅದು ದುಃಖಿತರ ದುಃಖವನ್ನು ದೂರಮಾಡುವ ಶಕ್ತಿ ಎಂದು ಭಗವಂತನಲ್ಲಿ ಬೇಡುತ್ತಾನೆ. ಕಲಿಯುಗದಲ್ಲಿ ಇಂತಹ ತ್ಯಾಗಮಯಿ ರಾಜ ಹುಟ್ಟಲು ಸಾಧ್ಯವೇ ಎಂದು ಮೂಗು ಮುರಿಯುವ ಪರಿಸ್ಥಿತಿ ಇರುವಾಗ ಪ್ರಧಾನಿ ನರೇಂದ್ರ ಮೋದಿ ಅವರಂತಹ ಮಹಾನ್‌ ಯುಗಪುರುಷನನ್ನು ಕಂಡ ನಾವೇ ಪುಣ್ಯವಂತರು.

ನರೇಂದ್ರ ಮೋದಿ ಅವರು ನಮ್ಮ ದೇಶ ಕಂಡ ಅತ್ಯಂತ ಜನಪ್ರಿಯ ಪ್ರಧಾನಿ ಎಂಬುದು ಅವರ ವಿರೋಧಿಗಳು ಸಹ ಒಪ್ಪುವ ವಾಸ್ತವ. ಒಬ್ಬ ನಾಯಕನಿಗೆ ಅನೇಕ ಗುಣಗಳಿರಬೇಕು. ಧೈರ್ಯ, ದಿಟ್ಟತನ, ಚಾಣಾಕ್ಷತೆ, ಮಾತುಗಾರಿಕೆ, ತಂತ್ರಗಾರಿಕೆ, ಅಚಲವಾದ ಛಲ, ಕಠಿಣ ಪರಿಶ್ರಮಪಡುವ ಪ್ರವೃತ್ತಿ ಇವೆಲ್ಲವೂ ಇರಬೇಕು ಸರಿ. ಆದರೆ ಇದೆಲ್ಲಕ್ಕಿಂತ ದೊಡ್ಡಗುಣ ಎಂದರೆ ಅದು ವಿಶ್ವಾಸಾರ್ಹತೆ. ಇದು ಕೇವಲ ನಾಯಕನಲ್ಲಿ ಮಾತ್ರವಲ್ಲ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅತ್ಯಂತ ಪ್ರಮುಖ ಗುಣ.

ಕಳೆದ ತಿಂಗಳಷ್ಟೇ ನಾವು ನಮ್ಮ ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಿಸಿದೆವು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ ದೇಶದೆಲ್ಲೆಡೆ ವಿಶಿಷ್ಟಸಂಭ್ರಮ ಸಡಗರ ಮನೆ ಮಾಡಿತ್ತು. ದೃಷ್ಟಿನೆಟ್ಟಲ್ಲೆಲ್ಲ, ಕಣ್ಣು ಹಾಯಿಸಿದಲ್ಲೆಲ್ಲ ತ್ರಿವರ್ಣ ಧ್ವಜ ಕಾಣುತ್ತಿತ್ತು. ಮನೆ, ಅಪಾರ್ಚ್‌ಮೆಂಟುಗಳು, ಶಾಲೆ, ಕಾಲೇಜು, ಕಚೇರಿ, ಫ್ಯಾಕ್ಟರಿ ಹೀಗೆ ಎಲ ್ಲಕಡೆ ತ್ರಿವರ್ಣ ಧ್ವಜ ರಾರಾಜಿಸುತ್ತಿತ್ತು. ಇದರ ಹಿಂದೆ ಇದ್ದದ್ದು ಒಬ್ಬ ವಿಶ್ವಾಸಾರ್ಹ ನಾಯಕನ ಒಂದು ಕರೆ. ಪ್ರಜೆಗಳಲ್ಲಿ ಸ್ವಾಭಾವಿಕವಾಗಿ ಇರುವ ದೇಶಪ್ರೇಮದ ಭಾವನೆಯನ್ನು ಬಡಿದೆಬ್ಬಿಸುವ ನಾಯಕತ್ವ ಗುಣ. ಪ್ರಜಾಪ್ರಭುತ್ವದಲ್ಲಿ ಅಧಿಕಾರವೆಂದರೆ ದಂಡ ಹಿಡಿದು ರಾಜ್ಯಭಾರ ನಡೆಸುವ ಪಾಳೆಗಾರಿಕೆಯಲ್ಲ. ಬಡವರ ಕಣ್ಣೀರೊರೆಸುವ, ದೀನದಲಿತರ ಕೈಹಿಡಿದು ನಡೆಸುವ, ಯುವಕರ ಬೆನ್ನುತಟ್ಟಿಮುನ್ನಡೆಸುವ, ಶ್ರಮಿಕರಿಗೆ ಹೆಗಲುಕೊಡುವ, ಆದರ್ಶ ಮಾರ್ಗದಲ್ಲಿ ನಡೆದು ಮೇಲ್ಪಂಕಿ ್ತಹಾಕಿಕೊಡುವ ಪ್ರೇರಣಾದಾಯಿ ನಾಯಕತ್ವ.

ವಿಶ್ವಾಸಾರ್ಹ ನಾಯಕ

ಬಡವರಿಗೆ ಗ್ಯಾಸ್‌ ಸಂಪರ್ಕ ನೀಡಲು ನೆರವಾಗಲು ಹೆಚ್ಚಿನ ಆದಾಯ ಇರುವವರು ಎಲ್ಪಿಜಿ ಸಬ್ಸಿಡಿ ತ್ಯಜಿಸುವಂತೆ ಕರೆಕೊಟ್ಟಾಗ ಲಕ್ಷಾಂತರ ಮಂದಿ ಸ್ವಯಂಪ್ರೇರಿತರಾಗಿ ಸಬ್ಸಿಡಿ ತ್ಯಾಗ ಮಾಡಿದರು. ಕೊರೋನಾ ಸಂದರ್ಭದಲ್ಲಿ ಕೊರೋನಾ ಯೋಧರಿಗೆ ಸ್ಫೂರ್ತಿ ತುಂಬಲು ದೀಪ ಹಚ್ಚಲು, ಚಪ್ಪಾಳೆ ತಟ್ಟಲು ಕರೆ ಕೊಟ್ಟಾಗ ಇಡೀ ದೇಶವೇ ಉತ್ಸಾಹದಿಂದ ಸ್ಪಂದಿಸಿತು. ಶತಮಾನದ ದೊಡ್ಡ ಸಾಂಕ್ರಾಮಿಕವನ್ನು ಎದುರಿಸಲು ಪಿಎಂ ಕೇ​ರ್‍ಸ್ ನಿಧಿಗೆ ನೆರವಿನ ಹೊಳೆಯೇ ಹರಿದು ಬಂತು. ಈಗಲೂ ನಮ್ಮೆಲ್ಲರಿಗೂ ಬಸ್ಸಿನಲ್ಲೋ, ರೈಲಿನಲ್ಲೋ, ಕಾರಿನಲ್ಲೋ ಹೋಗುವಾಗ ಬಿಸ್ಕತ್ತಿನ ಪೊಟ್ಟಣ ಅಥವಾ ಬಾಳೆ ಹಣ್ಣಿನ ಸಿಪ್ಪೆ ಎಸೆಯುವ ಮುನ್ನ ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತದ ಕರೆ ನೆನಪಾಗದೇ ಇರದು. ಇದು ಒಬ್ಬ ನಾಯಕನಿಗೆ ಇರಬೇಕಾದ ವಿಶ್ವಾಸಾರ್ಹತೆ.

ಚಂದ್ರಯಾನ-2 ಕನಸು ನನಸಾಗದಾಗ ಪ್ರಧಾನಿ ಮೋದಿ ಇಸ್ರೋ ಅಧ್ಯಕ್ಷ ಕೆ.ಶಿವನ್‌ ಅವರನ್ನು ತಬ್ಬಿ ಸಾಂತ್ವನ ಮಾಡಿದ ಘಟನೆ ಇರಬಹುದು ಅಥವಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ವಂಚಿತರಾದ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಆಟಗಾರ್ತಿಯರನ್ನು ಸಂತೈಸಿದ ಘಟನೆ ಇರಬಹುದು. ಪ್ರಧಾನಿ ಮೋದಿ ಅವರಂತೆ ಒಬ್ಬ ತಂದೆಯ ರೀತಿ ಜನರ ಭಾವನೆಗಳಿಗೆ ಸ್ಪಂದಿಸಿದ ನಾಯಕನನ್ನು ದೇಶ ಹಿಂದೆಂದೂ ಕಂಡಿರಲಿಲ್ಲ.

ಮೋದಿ ಅವರು ಪ್ರತಿ ದೀಪಾವಳಿಯನ್ನು ಗಡಿಯಲ್ಲಿ ದೇಶ ಕಾಯುವ ಸೈನಿಕರ ಜೊತೆಗೆ ಆಚರಿಸುತ್ತಾರೆ. ಗಲ್ವಾನ್‌ನಲ್ಲಿ ಚೀನಾ ದಾಳಿಯಾದ ನಂತರ ಅಲ್ಲಿಗೆ ಭೇಟಿ ನೀಡಿದ್ದ ಮೋದಿಯವರು ನಾವು ಭಾರತೀಯರು ಕೊಳಲು ಊದುವ ಮುರಳಿ ಮೋಹನ ಕೃಷ್ಣನನ್ನು ಎಷ್ಟುಭಕ್ತಿಯಿಂದ ಪೂಜಿಸುತ್ತೇವೆಯೋ ಸುದರ್ಶನಧಾರಿ ಶ್ರೀಕೃಷ್ಣನನ್ನು ಅಷ್ಟೇ ಭಕ್ತಿಯಿಂದ ಆರಾಧಿಸುತ್ತೇವೆ ಎಂದು ಹೇಳುವ ಮೂಲಕ ಭಾರತ ಎಷ್ಟುಶಾಂತಿಪ್ರಿಯ ದೇಶವೊ ಅದೇ ರೀತಿ ನಮ್ಮ ತಂಟೆಗೆ ಬಂದವರಿಗೆ ತಕ್ಕಪಾಠ ಕಲಿಸಬಲ್ಲ ಧೀರ ರಾಷ್ಟ್ರವೂ ಹೌದು ಎಂಬ ಸಂದೇಶ ನೀಡಿದರು.

ನವಭಾರತದತ್ತ ಹೆಜ್ಜೆ

ಕೋವಿಡ್‌ ನಂತರದ ಅಮೃತ ಕಾಲದಲ್ಲಿ ಭಾರತವು ನವ ಅಭಿವೃದ್ಧಿಯ ಕಡೆ ಹೆಜ್ಜೆ ಇರಿಸುತ್ತಿದೆ. ಕೃಷಿ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ದೇಶ ಹಿಂದೆಂದೂ ಸಾಧಿಸದ ಹೊಸ ಮೈಲುಗಲ್ಲುಗಳ ಹಿರಿಮೆ ಪಡೆದುಕೊಂಡಿದೆ. ಇದಕ್ಕೆ ಪ್ರಮುಖ ಕಾರಣವೇ ಕೋಟ್ಯಂತರ ಭಾರತೀಯರ ಆಶೋತ್ತರಗಳನ್ನು ಸಮರ್ಪಣೆ ಹಾಗೂ ಬದ್ಧತೆಯಿಂದ ಪೂರೈಸುತ್ತಿರುವ ರಾಜಕೀಯ ಸಂತ ಪ್ರಧಾನಿ ನರೇಂದ್ರ ಮೋದಿ. ಪ್ರಧಾನಿಗಳಿಗೆ ಈಗ 72 ವರ್ಷ ತುಂಬಿದ್ದು, ಅವರ ಈವರೆಗಿನ ಬದುಕು ದೇಶದ ರಾಜಕೀಯದ ಇತಿಹಾಸದ ದಿಕ್ಕನ್ನೇ ಬದಲಿಸಿದ ಅನೇಕ ಮಹತ್ವದ ನೋಟಗಳನ್ನು ನೀಡುತ್ತವೆ.

‘ರಾಜನು ಶಕ್ತಿವಂತನಾಗಿರಬೇಕು, ಆಗ ಮಾತ್ರ ರಾಷ್ಟ್ರವು ಪ್ರಗತಿ ಹೊಂದುತ್ತದೆ. ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ಎಂಬ ಮೂರು ಶಕ್ತಿಗಳನ್ನು ರಾಜನು ಹೊಂದಿರಬೇಕು’ ಎಂಬುದು ಚಾಣಕ್ಯ ನೀತಿಯ ಒಂದು ವಾಕ್ಯ. ಈ ನೀತಿಯನ್ನು ಯಥಾವತ್ತಾಗಿ ಪಾಲಿಸುತ್ತಿರುವ ಪ್ರಧಾನಿ ಮೋದಿಯವರು, ವೈಯಕ್ತಿಕ ಜೀವನದಲ್ಲೂ ಆದರ್ಶಪ್ರಾಯವಾಗಿದ್ದಾರೆ.

ಈ ಮೂರು ಶಕ್ತಿಗಳು ಆರೋಗ್ಯ ಪೂರ್ಣ ಪ್ರಜೆಗಳನ್ನು ಕೂಡ ಸೃಷ್ಟಿಸುತ್ತದೆ. ಇದರಿಂದಲೇ ಉತ್ತಮ ಸಮಾಜ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ಇದಕ್ಕಾಗಿಯೇ ಪ್ರಧಾನಿಗಳು ಕಳೆದ ಎಂಟು ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದ ಪ್ರಗತಿಗೆ ಭರಪೂರ ಕೊಡುಗೆ ನೀಡಿದ್ದಾರೆ.

ರಾಜ್ಯದಲ್ಲಿ ಯೋಗಥಾನ್‌

ಪ್ರಧಾನಿಗಳ ಈ ಬಾರಿಯ ಜನ್ಮದಿನದ ವಿಶೇಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರ್ಕಾರ ‘ಯೋಗಥಾನ್‌’ ಕಾರ್ಯಕ್ರಮ ರೂಪಿಸಿರುವುದು ಕೂಡ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಉಜ್ವಲಗೊಳಿಸಲು ಸಹಕಾರಿ. ಕಳೆದ ಸೆಪ್ಟೆಂಬರ್‌ 17 ರಂದು, ವಿಶೇಷ ಲಸಿಕಾ ಮೇಳ ನಡೆಸುವ ಮೂಲಕ ಜನರಿಗೆ ಆರೋಗ್ಯ ಸುರಕ್ಷತೆಯ ಭರವಸೆ ನೀಡಲಾಗಿತ್ತು. ಆ ಒಂದೇ ದಿನದಂದು, 28 ಲಕ್ಷ ಲಸಿಕೆಗಳನ್ನು ನೀಡಿ, ಒಟ್ಟು 5 ಕೋಟಿ ಲಸಿಕೆಯ ಗಡಿ ದಾಟಿ ಹೊಸ ದಾಖಲೆ ಸೃಷ್ಟಿಸಲಾಗಿತ್ತು. ಈ ಬಾರಿ ಯೋಗಥಾನ್‌ ಮೂಲಕ ಸಾಂಪ್ರದಾಯಿಕ ಆರೋಗ್ಯ ರಕ್ಷಣೆಯ ಕ್ರಮವನ್ನು ಉತ್ತೇಜಿಸಲಾಗುತ್ತಿದೆ.

ಆರೋಗ್ಯ ಭಾರತ, ಆರೋಗ್ಯ ಕರ್ನಾಟಕ

ಭಾರತದ ಕುಟುಂಬಗಳಲ್ಲಿ ಉಳಿತಾಯಕ್ಕೆ ಬಹಳ ಒತ್ತು ನೀಡಲಾಗುತ್ತದೆ. ಕುಟುಂಬದಲ್ಲಿ ಯಾರಾದರೂ ಗಂಭೀರ ಕಾಯಿಲೆಗೊಳಗಾದರೆ, ಆ ಕುಟುಂಬದ ಆರ್ಥಿಕ ಶಕ್ತಿಯೇ ಕುಸಿದುಹೋಗುವ ಅಪಾಯವಿರುತ್ತದೆ. ದೇಶದಲ್ಲಿ 1/3 ಭಾಗದ ಜನಸಂಖ್ಯೆಯನ್ನು ಆರೋಗ್ಯ ತುರ್ತು ಪರಿಸ್ಥಿತಿಯು ಬಡತನಕ್ಕೆ ಅಥವಾ ಸಾಲದ ಕೂಪಕ್ಕೆ ತಳ್ಳುತ್ತಿದೆ ಎಂದು ಅಂದಾಜಿಸಲಾಗಿದೆ.

ತಮ್ಮ 17ನೇ ವಯಸ್ಸಿನಲ್ಲಿ ದೇಶವನ್ನು ಸುತ್ತಿದ್ದ ನರೇಂದ್ರ ಮೋದಿಯವರು, ವಿವಿಧ ಭಾಗಗಳ ಜನ ಜೀವನ ಅರಿತುಕೊಂಡಿದ್ದರು. ಜನರು ಆರೋಗ್ಯ ಕಾಪಾಡಿಕೊಳ್ಳಲು ಅತಿ ಹೆಚ್ಚು ಹಣ ಖರ್ಚು ಮಾಡುತ್ತಾರೆ ಎಂಬುದು ಅವರ ಅರಿವಿಗೆ ಬಂದಿತ್ತು. ಇಂತಹ ಬೃಹತ್‌ ಜನಸಂಖ್ಯೆಯ ದೇಶಕ್ಕೆ ಒಂದೇ ಸೂರಿನಡಿ ಉಚಿತ ಆರೋಗ್ಯ ಸೇವೆ ನೀಡುವುದು ಅವರ ಗುರಿಯಾಗಿತ್ತು. ಅದಕ್ಕಾಗಿ, ಜಗತ್ತಿನಲ್ಲೇ ಅತಿದೊಡ್ಡ ಆರೋಗ್ಯ ವಿಮೆಯ ಯೋಜನೆ ‘ಆಯುಷ್ಮಾನ್‌ ಭಾರತ್‌’ ಜಾರಿ ಮಾಡಿ 50 ಕೋಟಿಗೂ ಅಧಿಕ ಜನರಿಗೆ ಅನುಕೂಲ ಕಲ್ಪಿಸಿದರು. ಈವರೆಗೆ 3.55 ಕೋಟಿ ರೋಗಿಗಳು ಉಚಿತ ಚಿಕಿತ್ಸೆ ಪಡೆದಿದ್ದಾರೆ ಎಂಬುದೇ ಈ ಯೋಜನೆಯ ಅಗಾಧ ವ್ಯಾಪ್ತಿಯನ್ನು ಸಾರುತ್ತದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 36.38 ಲಕ್ಷ ಜನರು ಇದರ ಲಾಭ ಪಡೆದಿದ್ದು, ಅವರ 4,620.20 ಕೋಟಿ ರು. ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಿದೆ. ಕಳೆದ 60 ವರ್ಷಗಳಲ್ಲಿ ಬಡ ಜನರಿಗೆ ವಿಮೆಯ ಮೂಲಕ ಉಚಿತ ಆರೋಗ್ಯ ಸೇವೆ ನೀಡಬೇಕೆಂಬ ಚಿಂತನೆಯನ್ನು ಯಾರೂ ಮಾಡಿರಲಿಲ್ಲ ಎಂಬುದು ಸೋಜಿಗದ ಸಂಗತಿ.

ದೇಶದಲ್ಲಿ 2013-14 ನೇ ಸಾಲಿನಲ್ಲಿ 387 ಮೆಡಿಕಲ್‌ ಕಾಲೇಜುಗಳಿದ್ದವು. 2014 ರಿಂದ 2021-22ರ ವೇಳೆಗೆ ಆ ಸಂಖ್ಯೆಯನ್ನು 596ಕ್ಕೇರಿಸಲಾಗಿದೆ. ಅಂದರೆ ಹೊಸ ಮೆಡಿಕಲ್‌ ಕಾಲೇಜುಗಳ ನಿರ್ಮಾಣದಲ್ಲಿ ಶೇ.55 ರಷ್ಟುಪ್ರಗತಿ ಸಾಧಿಸಿ, ಬಡ ಕುಟುಂಬಗಳ ಮಕ್ಕಳು ಕೂಡ ವೈದ್ಯರಾಗುವ ಕನಸನ್ನು ನನಸು ಮಾಡಿಕೊಳ್ಳಲು ಸೂಕ್ತ ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ಕೇಂದ್ರ ಸರ್ಕಾರದ ಆಸ್ಪತ್ರೆಗಳ ಉನ್ನತೀಕರಣಕ್ಕೆ 2014 ರಿಂದ 2022 ರವರೆಗೆ 2,726 ಕೋಟಿ ರು. ಖರ್ಚು ಮಾಡಲಾಗಿದೆ. ಜೊತೆಗೆ 6 ಏಮ್ಸ್‌ ಆರಂಭಿಸಲಾಗಿದೆ.

ಈ ಎಲ್ಲ ಮೂಲಸೌಕರ್ಯಾಭಿವೃದ್ಧಿ ಜೊತೆಗೆ 191 ದಿನಗಳಲ್ಲಿ 200 ಕೋಟಿಗೂ ಅಧಿಕ ಕೋವಿಡ್‌ ಲಸಿಕೆ ನೀಡಿ, ಜನರ ಜೀವ ರಕ್ಷಿಸಲಾಗಿದೆ. ‘ವಸುಧೈವ ಕುಟುಂಬಕಂ’ ತತ್ವದ ಆಧಾರದಲ್ಲಿ 240 ದಶಲಕ್ಷ ಲಸಿಕೆಗಳನ್ನು ಜಗತ್ತಿಗೆ ಪೂರೈಸಿರುವುದು ಪ್ರಧಾನಿಗಳ ವಿಶ್ವಮಾನವತೆಯ ಸಂಕೇತ.

ಜನೌಷಧಿ: ಜನರ ಸಂಜೀವಿನಿ

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು ಜನರ ಪಾಲಿಗೆ ಸಂಜೀವಿನಿ. ದೇಶದಲ್ಲಿ 8,727 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಬಡವರಿಗೆ ಕೈಗೆಟುಕದ ದರದಲ್ಲಿದ್ದ ಔಷಧಿಗಳು ಕೂಡ ಸುಲಭವಾಗಿ ದೊರೆಯುತ್ತಿವೆ. ರಾಜ್ಯದಲ್ಲಿ 952 ಜನ ಔಷಧಿ ಕೇಂದ್ರಗಳಿದ್ದು, ಹೆಚ್ಚು ಮಳಿಗೆ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನ ಪಡೆದಿದೆ ಎಂಬುದು ಸರ್ಕಾರದ ಹೆಗ್ಗಳಿಕೆ.

ಗ್ರಾಮೀಣ ಸಮುದಾಯಗಳಿಗಾಗಿ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ 7,257 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ನಿರ್ಮಾಣ ಗುರಿ ಕೊಟ್ಟಿದ್ದು, 8,619 ಕೇಂದ್ರಗಳನ್ನು ನಿರ್ಮಿಸಿ, ಗುರಿಗಿಂತ ಶೇ.118 ರಷ್ಟುಹೆಚ್ಚು ಸಾಧನೆ ಮಾಡಲಾಗಿದೆ. ಈ ಕೇಂದ್ರಗಳು ಗ್ರಾಮೀಣ ಪ್ರದೇಶಗಳಲ್ಲಿ ಉತ್ಕೃಷ್ಟಮಟ್ಟದ ಆರೋಗ್ಯ ಸೇವೆ ಕಲ್ಪಿಸಿವೆ. ಇದರ ಜೊತೆಗೆ ನಮ್ಮ ಸರ್ಕಾರ ಪ್ರಮುಖ ನಗರಗಳ 438 ಕಡೆಗಳಲ್ಲಿ ‘ನಮ್ಮ ಕ್ಲಿನಿಕ್‌’ ಆರಂಭಿಸಿ ಗುಣಮಟ್ಟದ ಪ್ರಾಥಮಿಕ ಆರೋಗ್ಯ ಸೇವೆ ನೀಡಲು ಸಿದ್ಧತೆ ಮಾಡಿಕೊಂಡಿದೆ.

ಆರೋಗ್ಯವಂತ ಪ್ರಜೆಯಿಂದ ಸದೃಢ ದೇಶ ಕಟ್ಟಲು ಸಾಧ್ಯ. ಈ ಆಶಯದೊಂದಿಗೆ ಮುಂದಿನ 25 ವರ್ಷಗಳಲ್ಲಿ ದೇಶವನ್ನು ಬಲಿಷ್ಠವಾಗಿಸುವ ಗುರಿಯ ಬಗ್ಗೆ ಪ್ರಧಾನಿ ಮೋದಿ ಹೇಳಿಕೊಂಡಿದ್ದಾರೆ. ಇದಕ್ಕೆ ಸೂಕ್ತ ಬುನಾದಿ ಹಾಕಿರುವ ಅವರು ಇದಕ್ಕಾಗಿಯೇ 20 ವರ್ಷಗಳ ರಾಜಕೀಯ ಜೀವನವನ್ನು ಸವೆಸಿದ್ದಾರೆ. ಈ ಪ್ರಧಾನ ಸೇವಕನ ಸೇವೆ ರಾಜಕೀಯ ಇತಿಹಾಸದಲ್ಲಿ ಹೊಸ ಮಾದರಿಯನ್ನೇ ಸೃಷ್ಟಿಸಿದೆ.

ಮೂರು ತಲೆಮಾರುಗಳ ಹೆಸರು ಹೇಳಿಕೊಂಡು ಮೂರು ತಲೆಮಾರುಗಳಿಗಾಗುವಷ್ಟುಮಾಡಿಕೊಂಡಿರುವ ರಾಜಕಾರಣಿಗಳಿರುವಾಗ ತಮಗೆ ಬಂದಿರುವ ಉಡುಗೊರೆಗಳನ್ನೂ ಸಹ ಹರಾಜು ಹಾಕಿ ಅದರಿಂದ ಸಂಗ್ರಹವಾದ ಹಣವನ್ನು ಗಂಗೆಯನ್ನು ಸ್ವಚ್ಛಗೊಳಿಸಲು ನೀಡುವ ನಾಯಕ ಜನರಿಗೆ ರಾಜರ್ಷಿಯಾಗಿ ಕಾಣುವುದು ಉತ್ಪ್ರೇಕ್ಷೆಯಲ್ಲ.

ಇಂತಹ ಶ್ರೇಷ್ಠನಾಯಕನಿಗೆ ಈಗ 72 ವಸಂತ ತುಂಬಿದೆ. ದೇಶ, ದೇಶವಾಸಿಗಳ ಶ್ರೇಯಸ್ಸಿಗಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ಆ ಶ್ರೇಷ್ಠನಾಯಕ ನೂರು ಕಾಲ ಬಾಳಲಿ, ದೇಶಕ್ಕೆ ಅವರ ಸೇವೆ, ಮಾರ್ಗದರ್ಶನ ಬಹುಕಾಲ ಸಿಗಲಿ ಎಂದು ಮನಸಾರೆ ಆಶಿಸೋಣ.

Follow Us:
Download App:
  • android
  • ios