ಕೊನೆಗೂ ರೈತರಿಗೆ ಹಣ ನೀಡುವ ವೆಬ್‌ಸೈಟಿನಲ್ಲಿ ಕನ್ನಡದ ಆಯ್ಕೆ ಅಳವಡಿಕೆ ಮಾಡಲಾಗಿದೆ. ‘ಪಿಎಂ ಕಿಸಾನ್’ನಲ್ಲಿ ಕನ್ನಡ ಕಡೆಗಣಿಸಿದ ಬಗ್ಗೆ ಕನ್ನಡಪ್ರಭ ವರದಿ ಮಾಡಿತ್ತು.
ಬೆಂಗಳೂರು (ಜು.16): ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ವೆಬ್‌ಸೈಟ್‌ನಲ್ಲಿ ಕನ್ನಡ ಭಾಷೆ ಕಡೆಗಣಿಸಿರುವ ಬಗ್ಗೆ ಕನ್ನಡಪರ ಸಂಘಟನೆಗಳು, ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಕನ್ನಡದಲ್ಲೂ ಮಾಹಿತಿ ಒದಗಿಸಿದೆ. ರಾಜ್ಯದಲ್ಲಿ 50 ಲಕ್ಷಕ್ಕೂ ಅಧಿಕ ಫಲಾನುಭವಿಗಳಿದ್ದರೂ ಕನ್ನಡ ಕಡೆಗಣಿಸಲಾಗಿತ್ತು. 30 ಲಕ್ಷ ಫಲಾನುಭವಿಗಳಿರುವ ಅಸ್ಸಾಮಿ, ಮಲಯಾಳಿ ಭಾಷೆಗಳಲ್ಲಿ ಮಾಹಿತಿ ನೀಡಲಾಗಿತ್ತು. ಕನ್ನಡ ಕಡೆಗಣಿಸಿರುವ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ರೈತ ಮುಖಂಡ ಆಂಜನೇಯ ರೆಡ್ಡಿ, ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದ ಹನುಮನಗೌಡ ಬೆಳಗುರ್ಕಿ ಸೇರಿದಂತೆ ಹಲವು ಗಣ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಜುಲೈ 5ರಂದು ‘ಕನ್ನಡಪ್ರಭ’ದ ಮುಖಪುಟದಲ್ಲಿ ವರದಿ ಪ್ರಕಟವಾಗಿತ್ತು. ವರದಿ ಗಮನಿಸಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರೂ ‘ಕನ್ನಡದಲ್ಲಿ ಮಾಹಿತಿ ನೀಡದಿದ್ದರೆ ಸಾಹಿತಿಗಳು, ಸಂಘ-ಸಂಸ್ಥೆಗಳ ಜೊತೆ ಸಭೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಕಾನೂನು ಹೋರಾಟದ ಬಗ್ಗೆಯೂ ಚಿಂತಿಸಲಾಗುವುದು ಎಂದು ಎಚ್ಚರಿಸಿದ್ದರು. ಒತ್ತಡಕ್ಕೆ ಕೊನೆಗೂ ಮಣಿದ ಕೇಂದ್ರ ಸರ್ಕಾರ ಪಿಎಂ ಕಿಸಾನ್ ವೆಬ್‌ಸೈಟ್‌ನಲ್ಲಿ ಕನ್ನಡಕ್ಕೂ ಅವಕಾಶ ಕಲ್ಪಿಸಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ವೆಬ್‌ಸೈಟ್‌ನಲ್ಲಿ ಹಿಂದಿ, ಗುಜರಾತಿ, ತಮಿಳು, ತೆಲುಗು ಸೇರಿದಂತೆ ಹಲವು ಭಾರತೀಯ ಭಾಷೆಗಳು ಇದ್ದರೂ ಕನ್ನಡವನ್ನು ಮಾತ್ರ ಕಡೆಗಣಿಸಲಾಗಿದೆ. ಇದರಿಂದ ರಾಜ್ಯದಲ್ಲಿರುವ 50 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ತೊಂದರೆ ಉಂಟಾಗುತ್ತಿದೆ. ಯೋಜನೆಯ ವೆಬ್‌ಸೈಟ್‌ನಲ್ಲಿ ಇಂಗ್ಲಿಷ್, ಅಸ್ಸಾಮಿ, ಗುಜರಾತಿ, ಹಿಂದಿ, ಮಲಯಾಳಂ, ಮರಾಠಿ, ತಮಿಳು, ತೆಲುಗು ಭಾಷೆಗಳಿಗೆ ಮಾತ್ರ ಮಾನ್ಯತೆ ನೀಡಲಾಗಿದೆ ಎಂದು ಆರೋಪ ಕೇಳಿಬಂದಿತ್ತು.
ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ಯೋಜನೆ ಮಾಹಿತಿ ಪ್ರಕಾರ ಕೇರಳದಲ್ಲಿ 37 ಲಕ್ಷ, ಆಸ್ಸಾಂನಲ್ಲಿ 31 ಲಕ್ಷ ಫಲಾನುಭವಿಗಳಿದ್ದಾರೆ. ಆದರೆ, ಕರ್ನಾಟಕದಲ್ಲಿ 50 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಇದ್ದಾರೆ. ಆದರೂ ವೆಬ್‌ಸೈಟ್‌ನಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡಿರಲಿಲ್ಲ.
ಇ-ಕೆವೈಸಿ ಅಪ್ಡೇಟ್ ಗೆ ಜುಲೈ 31 ಕೊನೆ ದಿನ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pradhan Mantri Kisan Samman Nidhi) ಅಥವಾ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಸಹಾಯಧನ ಪಡೆಯುತ್ತಿರುವ ರೈತರಿಗೆ (Farmers) ಇ-ಕೆವೈಸಿ (eKYC) ಪೂರ್ಣಗೊಳಿಸಲು ನೀಡಿದ್ದ ಅಂತಿಮ ಗಡುವನ್ನು (Deadline) ಕೇಂದ್ರ ಸರ್ಕಾರ ಮತ್ತೆ ಮುಂದೂಡಿದೆ. ಈಗ ಜುಲೈ 31, 2022ಕ್ಕೆ ಕೊನೆಯ ದಿನವಾಗಿದೆ.
ಈ ಬಗ್ಗೆ ಪಿಎಂ ಕಿಸಾನ್ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ. 'ಪಿಎಂ ಕಿಸಾನ್ ಯೋಜನೆಯ ಎಲ್ಲ ಫಲಾನುಭವಿಗಳಿಗೆ ಇ-ಕೆವೈಸಿ ಪೂರ್ಣಗೊಳಿಸುವ ಅಂತಿಮ ಗಡುವನ್ನು 2022ರ ಜುಲೈ 31ರ ತನಕ ವಿಸ್ತರಿಸಲಾಗಿದೆ' ಎಂದು ಪಿಎಂ ಕಿಸಾನ್ ವೆಬ್ ಸೈಟ್ ನಲ್ಲಿ ಮಾಹಿತಿ ಪ್ರಕಟಿಸಲಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 11ನೇ ಕಂತಿನ ಹಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇ 31ರಂದು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ 10 ಕೋಟಿಗಿಂತಲೂ ಹೆಚ್ಚು ರೈತರಿಗೆ ವಿತರಿಸಿದ್ದರು.
