ನಗರದಲ್ಲಿ ಗುರುವಾರ ರಾತ್ರಿ ನಡೆದ ಬ್ಯಾನರ್ ಗಲಾಟೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರು ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು ಈ ಸಂಬಂಧ ಫೋಟೋ ಸಾಕ್ಷ್ಯ ಬಿಡುಗಡೆ ಮಾಡಿದ್ದಾರೆ.
ಬಳ್ಳಾರಿ : ನಗರದಲ್ಲಿ ಗುರುವಾರ ರಾತ್ರಿ ನಡೆದ ಬ್ಯಾನರ್ ಗಲಾಟೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರು ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು ಈ ಸಂಬಂಧ ಫೋಟೋ ಸಾಕ್ಷ್ಯ ಬಿಡುಗಡೆ ಮಾಡಿದ್ದಾರೆ.
ಶನಿವಾರ ಸಂಜೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಶಾಸಕರಾದ ನಾಗೇಂದ್ರ ಹಾಗೂ ಭರತ್ ರೆಡ್ಡಿ, ಶುಕ್ರವಾರ ಬೆಳಗ್ಗೆ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ನಡೆಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಕೆಲ ನಾಯಕರು ಹಾಜರಿದ್ದರು. ಆ ವೇಳೆ, ಅವರು ಆರೋಗ್ಯವಾಗಿಯೇ ಇದ್ದರು. ಆದರೆ, ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬರುವ ವೇಳೆಗೆ ಅವರು ಆಸ್ಪತ್ರೆಯಲ್ಲಿ ಇದ್ದರು. ನಾಟಕದ ರೀತಿಯಲ್ಲಿ ಬ್ಯಾಂಡೇಜ್ ಕಟ್ಟಿಕೊಂಡು ಆಸ್ಪತ್ರೆ ಸೇರಿದ್ದರು ಎಂದು ದೂರಿ ಫೋಟೋ ಬಿಡುಗಡೆ ಮಾಡಿದರು.
ಈ ಫೋಟೊವನ್ನು ಬಿಡುಗಡೆ ಮಾಡಿದ ನಾಗೇಂದ್ರ ಹಾಗೂ ಭರತ್ ರೆಡ್ಡಿ, ಬಿಜೆಪಿ ಹೇಳ್ತಿರೋದೆಲ್ಲ ಸುಳ್ಳು ಎಂದು ಆರೋಪಿಸಿದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊವನ್ನು ಕಾಂಗ್ರೆಸ್ ನಾಯಕರು ಹಂಚಿಕೊಂಡಿದ್ದಾರೆ.
ಗಾಂಜಾ ಪೆಡ್ಲರ್ ಜತೆ ಭರತ್ ಸ್ನೇಹದ ವಿಡಿಯೋ ಬಿಡುಗಡೆ
ಗಾಂಜಾ ಪೆಡ್ಲರ್ ಜೊತೆಗೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಇದ್ದಾರೆ ಎಂದು ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ಬಳ್ಳಾರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಈ ವೇಳೆ ಗಾಂಜಾ ಪೆಡ್ಲರ್ ಜೊತೆ ಭರತ್ ರೆಡ್ಡಿ ಇರುವ ವಿಡಿಯೋ ಪ್ರದರ್ಶಿಸಿದರು. ಭರತ್ ರೆಡ್ಡಿ ಗಾಂಜಾ ಪೆಡ್ಲರ್ ದೌಲಾ ಎಂಬಾತನ ಜೊತೆ ಇದ್ದ ಎಂದು ಆರೋಪಿಸಿದರು. ವಿಡಿಯೋದಲ್ಲಿ, ಶಾಸಕ ನಾರಾ ಭರತ್ ರೆಡ್ಡಿ ಗಾಂಜಾ ಪೆಡ್ಲರ್ ದೌಲಾ ಜೊತೆಗೆ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿರುವ ದೃಶ್ಯಗಳು ಇವೆ. ಇದನ್ನು ಆಧಾರವಾಗಿಟ್ಟುಕೊಂಡು ಜನಾರ್ದನ ರೆಡ್ಡಿ ಕಾಂಗ್ರೆಸ್ ಶಾಸಕನ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ದೌಲಾ ಮೇಲೆ 50 ಕೆಜಿ ಗಾಂಜಾ ಪೆಡ್ಲಿಂಗ್ ಸೇರಿದಂತೆ 18 ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.
ಸತೀಶ್ ರೆಡ್ಡಿ ಮತ್ತು ಅವರ ಅಂಗರಕ್ಷಕರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹ
ಬಳ್ಳಾರಿ ಫೈರಿಂಗ್ ವಿಚಾರದಲ್ಲಿ ಮೃತ ಕಾಂಗ್ರೆಸ್ ಕಾರ್ಯಕರ್ತನಿಗೆ ನ್ಯಾಯ ಸಿಗಬೇಕಾದರೆ ತಪ್ಪಿತಸ್ಥರಾದ ಸತೀಶ್ ರೆಡ್ಡಿ ಮತ್ತು ಅವರ ಅಂಗರಕ್ಷಕರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದರು.


