ತರಾತುರಿಯಲ್ಲಿ ಕೈಗೊಂಡಿರುವ ನಿರ್ಣಯ ಸಂಪೂರ್ಣ ದೋಷಪೂರಿತ ಮತ್ತು ಕಾನೂನು ಬಾಹಿರವಾಗಿದೆ ಎಂದು ಅರ್ಜಿದಾರರ ಆಕ್ಷೇಪ.
ಬೆಂಗಳೂರು(ಏ.01): ಮುಸ್ಲಿಮರಿಗೆ ಹಿಂದುಳಿದ ವರ್ಗಗಳ ಪ್ರವರ್ಗ-2ಬಿ ಅಡಿಯಲ್ಲಿ ಒದಗಿಸಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿರುವ ರಾಜ್ಯ ಸರ್ಕಾರ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಸಂಬಂಧ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರೀಫ್ ಜಮೀಲ್ ಈ ಅರ್ಜಿ ಸಲ್ಲಿಸಿದ್ದು, ಮುಸ್ಲಿಮರ 2 ಬಿ ಮೀಸಲಾತಿ ರದ್ದುಪಡಿಸಿದ ನಂತರ ಅವರನ್ನು ‘ಆರ್ಥಿಕ ಹಿಂದುಳಿದ ವರ್ಗ’ಕ್ಕೆ (ಇಡಬ್ಲ್ಯುಎಸ್) ಸೇರಿಸಿ ರಾಜ್ಯ ಸರ್ಕಾರ 2023ರ ಮಾ.27ರಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ಸರ್ಕಾರದ ಆದೇಶದ ಜಾರಿಗೆ ಮಧ್ಯಂತರ ತಡೆ ನೀಡಬೇಕು ಎಂದು ಕೋರಿದ್ದಾರೆ.
ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಇಲಾಖೆ ಪ್ರಧಾನ ಕಾರ್ಯದರ್ಶಿ, ಶಾಸಕಾಂಗ ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ, ಮತ್ತು ಕರ್ನಾಟಕ ಶಾಶ್ವತ ಹಿಂದುಳಿದ ಆಯೋಗದ ಮುಖ್ಯಸ್ಥರು ಮತ್ತು ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಮುಖ್ಯಸ್ಥರನ್ನು ಅರ್ಜಿಯಲ್ಲಿ ಪ್ರತಿವಾದಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿಲ್ಲ; ಮುಂದಿನ ದಿನಗಳಲ್ಲಿ ಹೆಚ್ಚಿನ ನ್ಯಾಯ ಸಿಗಲಿದೆ : ಪೂಜಾರಿ
ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿ ನೀಡಲಾಗುತ್ತಿದ್ದ ಶೇ.4ರಷ್ಟು ಮೀಸಲಾತಿಯನ್ನು ಕಸಿದುಕೊಂಡು, ಅವರನ್ನು ಇಡಬ್ಲ್ಯುಎಸ್ ಪ್ರವರ್ಗಕ್ಕೆ ಸೇರಿಸಿ ರಾಜ್ಯ ಸರ್ಕಾರವು 2023ರ ಮಾ.24ರಂದು ನಿರ್ಧಾರ ಕೈಗೊಂಡಿದೆ. ಮುಸ್ಲಿಮರಿಗೆ 2ಬಿ ಅಡಿಯಲ್ಲಿ ನೀಡಲಾಗುತ್ತಿದ್ದ ಶೇ.4ರಷ್ಟು ಮೀಸಲಾತಿಯನ್ನು ರಾಜ್ಯದ ಬಲಿಷ್ಠ ಸಮುದಾಯಗಳಾದ ಒಕ್ಕಲಿಗೆ ಮತ್ತು ವೀರಶೈವ-ಲಿಂಗಾಯತರಿಗೆ ತಲಾ ಶೇ.2ರಂತೆ ಹಂಚಿಕೆ ಮಾಡಲಾಗಿದೆ. ಈ ತರಾತುರಿಯಲ್ಲಿ ಕೈಗೊಂಡಿರುವ ನಿರ್ಣಯ ಸಂಪೂರ್ಣ ದೋಷಪೂರಿತ ಮತ್ತು ಕಾನೂನು ಬಾಹಿರವಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಅಲ್ಲದೆ, ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ರಾಜಕೀಯ ಪ್ರೇರಿತವಾಗಿ ಕೈಗೊಂಡ ನಿರ್ಧಾರ ಇದಾಗಿದೆ. ಇದರಿಂದ ಇಡಬ್ಲ್ಯೂಎಸ್ ವರ್ಗಗಳಿಗೆ ನಿಗದಿಪಡಿಸಲಾದ ಶೇ.10ರ ಮೀಸಲಾತಿಯಲ್ಲಿ ಸಾಮಾನ್ಯ ವರ್ಗದಡಿ ಮುಸ್ಲಿಮರು ಪೈಪೋಟಿ ಮಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.
