ಕೊರೋನಾ ಸಂಬಂಧ ಮಾಡಿದ್ದ ಟ್ವೀಟ್‌ಗೆ ಆಕ್ಷೇಪಾರ್ಹ ಪ್ರತಿಕ್ರಿಯೆ|ಮಾಜಿ ಶಾಸಕರ ಬೆಂಬಲಿಗರಿಂದ ಆರ್‌.ಆರ್‌.ನಗರ ಠಾಣೆಗೆ ದೂರು|ಗಂಭೀರವಲ್ಲದ ಪ್ರಕರಣವಾಗಿಲ್ಲದ ಕಾರಣ ಬದ್ರಿನಾಥ್‌ರನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ|

ಬೆಂಗಳೂರು(ಸೆ.02): ರಾಜರಾಜೇಶ್ವರಿ ನಗರ ಕ್ಷೇತ್ರದ ಮಾಜಿ ಶಾಸಕ ಮುನಿರತ್ನ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿ, ನಿಂದಿಸಿದ್ದ ವ್ಯಕ್ತಿಯೊಬ್ಬನನ್ನು ಆರ್‌.ಆರ್‌.ನಗರ ಪೊಲೀಸರು ಬಂಧಿಸಿ, ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಆರ್‌.ಆರ್‌.ನಗರ ನಿವಾಸಿ ಬದ್ರಿನಾಥ್‌ ಬೊಮ್ಮನಹಳ್ಳಿ ಬಂಧಿತ. ಮಾಜಿ ಶಾಸಕರ ಬೆಂಬಲಿಗ ವಿಜಯಕುಮಾರ್‌ ಎಂಬುವರು ಕೊಟ್ಟದೂರಿನ ಮೇರೆಗೆ ಬದ್ರಿನಾಥ್‌ನನ್ನು ಬಂಧಿಸಿ, ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೊರೋನಾ ಸೋಂಕಿಗೆ ಒಳಗಾಗಿದ್ದ ಶಾಸಕ ಮುನಿರತ್ನ, ‘ನನಗೆ 57 ವಯಸ್ಸಾಗಿದ್ದು, ಕೊರೋನಾ ಸೋಂಕು ದೃಢಪಟ್ಟಿದೆ. ಕ್ಷೇಮವಾಗಿ ಬಂದರೆ ನಿಮ್ಮ ಸೇವೆ... ಇಲ್ಲದಿದ್ದರೆ ಕ್ಷಮಿಸಿಬಿಡಿ’ ಎಂದು ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಕ್ಷೇಮವಾಗಿ ಬಂದರೆ ನಿಮ್ಮ ಸೇವೆ ಇಲ್ಲದಿದ್ದರೆ ಕ್ಷಮಿಸಿ; ಕೊರೋನಾ ದೃಢಪಟ್ಟ ಮಾಜಿ ಶಾಸಕ ಮುನಿರತ್ನ ಸಂದೇಶ!

ಬೆಂಗಳೂರು ಕಿರಿಕ್‌ ಪಾರ್ಟಿ ಎಂಬ ವಾಟ್ಸಪ್‌ ಗ್ರೂಪ್‌ನಲ್ಲಿ ಬದ್ರಿನಾಥ್‌, ‘ಕೊರೋನಾಗೆ ಹೆದರುವ ಇಂಥವರಿಂದ ಸಮಾಜಕ್ಕೆ ಏನು ಸೇವೆ ಮಾಡಲು ಸಾಧ್ಯ? ನಿಮ್ಮಂತಹವರಿಂದಲೇ ಸಮಾಜ ಕಲುಷಿತವಾಗುತ್ತಿದೆ. ನೀವು ತೊಲಗಿದರೆ ಉತ್ತಮ. ಕೊರೋನಾ ಒಂದು ನೆಪವಷ್ಟೇ. ಸೋಂಕಿತ ವ್ಯಕ್ತಿ ದೊಡ್ಡ ಭ್ರಷ್ಟಾಚಾರಿ. ಸೋಂಕಿತ ಆಸ್ಪತ್ರೆಯಿಂದ ವಾಪಸ್‌ ಬರುವುದಿಲ್ಲ ಎಂಬ ನಂಬಿಕೆ ಇದೆ’ ಎಂದು ಚಾಟ್‌ ಮಾಡಿರುವುದು ಎಲ್ಲೆಡೆ ಹರಿದಾಡಿದೆ.

ಈ ವಿಚಾರ ತಿಳಿದ ವಿಜಯಕುಮಾರ್‌, ಈ ರೀತಿ ಮಾಡುವುದು ಸರಿಯಲ್ಲ ಎಂದು ಬದ್ರಿನಾಥ್‌ ಮತ್ತು ಕಿರಣ್‌ ಅವರಿಗೆ ಹೇಳಿದ್ದರು. ಈ ವೇಳೆ ಆರೋಪಿಗಳು ವಿಜಯಕುಮಾರ್‌ಗೆ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ವಿಜಯಕುಮಾರ್‌ ಕೊಟ್ಟದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಠಾಣಾ ಜಾಮೀನಿನ ಮೇಲೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ. ಇದೇ ರೀತಿ ಕಿರಣ್‌ ಎಂಬಾತ ಕೂಡ ಕೆಟ್ಟದಾಗಿ ಬರೆದಿದ್ದಾನೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಇನ್ನು ತಮ್ಮ ಬೆಂಬಲಿಗನ ಬಂಧನದ ವಿಷಯ ತಿಳಿದ ಬಿಜೆಪಿ ತುಳುಸಿ ಮುನಿರಾಜುಗೌಡ ಸೋಮವಾರ ತಡರಾತ್ರಿ ಆರ್‌.ಆರ್‌.ನಗರ ಠಾಣೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಬಳಿಕ ಗಂಭೀರವಲ್ಲದ ಪ್ರಕರಣವಾಗಿಲ್ಲದ ಕಾರಣ ಬದ್ರಿನಾಥ್‌ರನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.