ಬೆಂಗಳೂರು(ಮೇ.23): ನಗರದ ಅವೆನ್ಯೂ ರಸ್ತೆ, ಜೆ.ಸಿ. ರಸ್ತೆ ಸೇರಿದಂತೆ ನಗರದ ಪ್ರಮುಖ ವ್ಯಾಪಾರ ಪ್ರದೇಶಗಳಲ್ಲಿ ಶುಕ್ರವಾರ ಸಾವಿರಾರು ಜನರು ಗುಂಪು ಗುಂಪಾಗಿ ರಸ್ತೆಗಳಿದು ಭರ್ಜರಿ ಶಾಪಿಂಗ್‌ ನಡೆಸಿದ್ದು ಕಂಡು ಬಂದಿದೆ.

ಬೆಂಗಳೂರು ಕರೋನಾ ಸೋಂಕಿತರ ಗೂಡಾಗುತ್ತಿದೆ. ಇದ್ಯಾವುದರ ಬಗ್ಗೆ ಆತಂಕವಿಲ್ಲದೇ ಲಾಕ್‌ಡೌನ್‌ 4.0 ವಿನಾಯಿತಿ ನೀಡಿದ ನೆಪದಲ್ಲಿ ಶುಕ್ರವಾರ ಬೆಂಗಳೂರಿಗರು ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್‌ ರಸ್ತೆ, ಗಾಂಧಿ ನಗರ, ಜಯನಗರ, ಯಶವಂತಪುರ ಸೇರಿದಂತೆ ಪ್ರಮುಖ ಕಡೆ ಭರ್ಜರಿ ಶಾಪಿಂಗ್‌ ನಡೆಸಿದರು.

ಪೊಲೀಸ್‌ ಪೇದೆಗೆ ಸೋಂಕು: 30 ಸಿಬ್ಬಂದಿಗೆ ಕ್ವಾರಂಟೈನ್‌!

ಕೊರೋನಾ ಸೋಂಕು ಹರಡುವ ಭೀತಿ ಇರುವುದರಿಂದ ಸಾರ್ವಜನಿಕ ಸ್ಥಳದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್‌ ಧರಿಸಬೇಕು. ಜನಜಂಗುಳಿ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ನಿರ್ದೇಶಿಸಿದೆ. ಆದರೆ, ಅವೆನ್ಯೂರಸ್ತೆ, ಗಾಂಧಿ ನಗರ ಹಾಗೂ ಇತರೆ ವ್ಯಾಪಾರ ಸ್ಥಳದಲ್ಲಿ ಅದ್ಯಾವುದೂ ಶುಕ್ರವಾರ ಕಂಡು ಬರಲಿಲ್ಲ. ಸಾಮಾನ್ಯ ದಿನಗಳಲ್ಲಿ ಕಂಡು ಬಂದಂತೆ ಶುಕ್ರವಾರವೂ ಕಾಣುತ್ತಿತ್ತು. ಇನ್ನು ವ್ಯಾಪಾರಿ ಮಳಿಗೆ ಹೆಚ್ಚಿರುವ ಪ್ರದೇಶದಲ್ಲಿ ವಾಹನ ಸಂಚಾರವೂ ಹೆಚ್ಚಾಗಿ ಕಂಡು ಬಂದಿತ್ತು. ಗಾಂಧಿನಗರ, ಅವೆನ್ಯೂ ರಸ್ತೆಗಳಲಿ ಸಂಚಾರಿ ದಟ್ಟಣೆಯೂ ಉಂಟಾಗಿತ್ತು.

ರಂಜಾನ್‌ ಶಾಪಿಂಗ್‌?

ನಗರದ ಮಾಲ್‌, ಮಾರುಕಟ್ಟೆಗಳನ್ನು ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ. ಇದರಿಂದ ವ್ಯಾಪಾರ ಮಳಿಗೆಗಳು ಹೆಚ್ಚಾಗಿರುವ ರಸ್ತೆ, ಪ್ರದೇಶದಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಜತೆಗೆ ಸೋಮವಾರ ರಂಜಾನ್‌ ಹಬ್ಬದ ಹಿನ್ನೆಲೆಯಲ್ಲಿ ಜನರು ಹೊಸ ಬಟ್ಟೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಗೆ ಮುಂದಾಗಿದ್ದು ಕಂಡು ಬಂದಿದೆ.