ಬೆಂಗಳೂರು(ಮೇ.23): ಪುಲಿಕೇಶಿನಗರ ಸಂಚಾರ ಠಾಣಾ ವ್ಯಾಪ್ತಿಯ ಕಾನ್‌ಸ್ಟೇಬಲ್‌ವೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಠಾಣೆಯ 30 ಪೊಲೀಸರನ್ನು ಇದೀಗ ಕ್ವಾರಂಟೈನ್‌ ಮಾಡಲಾಗಿದೆ.

36 ವರ್ಷದ ಕಾನ್‌ಸ್ಟೇಬಲ್‌ ಹೆಗಡೆ ನಗರದ ಪೊಲೀಸ್‌ ವಸತಿ ಗೃಹದಲ್ಲಿ ಕುಟುಂಬದೊಂದಿಗೆ ನೆಲೆಸಿದ್ದರು. ಲಾಕ್‌ಡೌನ್‌ಗೂ ಮುನ್ನವೇ ಕುಟುಂಬವನ್ನು ಚಿತ್ರದುರ್ಗಕ್ಕೆ ಕರೆದೊಯ್ದು ಬಿಟ್ಟಿದ್ದರು. ಒಂದೂವರೆ ತಿಂಗಳಿಂದ ಮನೆಯಲ್ಲಿ ಕಾನ್‌ಸ್ಟೇಬಲ್‌ ಒಬ್ಬರೆ ಇದ್ದರು. 

ಕ್ಯಾನ್ಸರ್‌ ರೋಗಿಗೂ ತಗುಲಿದ ಮಹಾಮಾರಿ ಕೊರೋನಾ..!

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಕೊರೋನಾ ಸೋಂಕಿತ ಕಾನ್‌ಸ್ಟೇಬಲ್‌, ಠಾಣೆಯ ಮಹಿಳಾ ಕಾನ್‌ಸ್ಟೇಬಲ್‌ವೊಬ್ಬರನ್ನು ಬೈಕ್‌ನಲ್ಲಿ ಕರೆದುಕೊಂಡು ಬರುತ್ತಿದ್ದರು. ಹೀಗಾಗಿ ಅವರಿಗೂ ಪರೀಕ್ಷೆ ನಡೆಸಿದ್ದು, ವರದಿ ಬರಬೇಕಿದೆ. ಕಾನ್‌ಸ್ಟೇಬಲ್‌ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಇದೀಗ ಕ್ವಾರಂಟೈನ್‌ ಮಾಡಲಾಗಿದೆ. ಕಾನ್‌ಸ್ಟೇಬಲ್‌ಗೆ ಹೇಗೆ ಸೋಂಕು ಬಂದಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಪೇದೆ ವಾಸವಿದ್ದ ಥಣಿಸಂದ್ರವಾರ್ಡ್‌ನ ಹೆಗಡೆ ನಗರದ ಪೊಲೀಸ್‌ ವಸತಿ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ಯಲಹಂಕ ಜಂಟಿ ಆಯುಕ್ತ ಅಶೋಕ್‌ ಮಾಹಿತಿ ನೀಡಿದ್ದಾರೆ. ಮೊದಲ ಹಂತದಲ್ಲಿ ಪುಲಿಕೇಶಿನಗರ ಸಂಚಾರಿ ಪೊಲೀಸ್‌ ಠಾಣೆಯ ಇನ್‌ಸ್ಟೆಕ್ಟರ್‌ ಸೇರಿ 30 ಮಂದಿ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ಠಾಣೆಯಲ್ಲಿ 100 ಮಂದಿ ಸಿಬ್ಬಂದಿ ಇದ್ದು, 20 ಮಂದಿ ರಜೆಯಲ್ಲಿದ್ದಾರೆ. ಉಳಿದವರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಠಾಣೆಯ ಹೊಣೆಗಾರಿಕೆಯನ್ನು ಕೆ.ಜಿ.ಹಳ್ಳಿ ಇನ್‌ಸ್ಟೆಕ್ಟರ್‌ಗೆ ವಹಿಸಲಾಗಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆ ಇಲ್ಲದಂತೆ ಸಂಚಾರ ನಿರ್ವಹಣೆ ಇರಲಿದೆ ಎಂದು ಪೂರ್ವ ವಿಭಾಗದ ಡಿಸಿಪಿ (ಸಂಚಾರ) ನಾರಾಯಣ ‘ಕನ್ನಡಪ್ರಭ’ಕ್ಕೆ ತಿಳಿಸಿದರು.