Asianet Suvarna News Asianet Suvarna News

ಕರ್ನಾಟಕದ 5 ಜಿಲ್ಲೆಗಳಲ್ಲಿ ಚಿರತೆ ಚಿಂತೆ: ಆತಂಕದಲ್ಲಿ ಜನತೆ

ಬೆಳಗಾವಿ, ದಾವಣಗೆರೆ ಬಳಿಕ 3 ಜಿಲ್ಲೆಗಳಲ್ಲಿ ಚಿರತೆ, ಉತ್ತರ ಕನ್ನಡ, ಉಡುಪಿ, ಕೊಪ್ಪಳ ಜಿಲ್ಲೇಲೂ ಪ್ರತ್ಯಕ್ಷ, ರಾಜ್ಯದ ಜನವಸತಿ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಚಿರತೆಗಳ ದಾಳಿ

People of Karnataka Worried About Leopard grg
Author
Bengaluru, First Published Aug 27, 2022, 5:30 AM IST

ಬೆಂಗಳೂರು(ಆ.27):  ರಾಜ್ಯದ ಅಲ್ಲಲ್ಲಿ ಕಾಡಿನಿಂದ ನಾಡಿಗೆ ಲಗ್ಗೆಯಿಡುತ್ತಿರುವ ಚಿರತೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಬೆಳಗಾವಿ ನಗರಕ್ಕೆ 22 ದಿನದ ಹಿಂದೆ ಹೊಕ್ಕಿರುವ ಚಿರತೆ ಮತ್ತು ದಾವಣಗೆರೆಯ ನ್ಯಾಮತಿ ಬಳಿ 3 ದಿನದ ಹಿಂದೆ ಮಹಿಳೆಯೊಬ್ಬರನ್ನು ಕೊಂದಿರುವ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಪರದಾಡುತ್ತಿರುವ ಹೊತ್ತಲ್ಲೇ ಮತ್ತೆ 3 ಚಿರತೆಗಳು ಕಾಣಿಸಿಕೊಂಡಿರುವ ಪ್ರತ್ಯೇಕ ಘಟನೆಗಳು ಉತ್ತರ ಕನ್ನಡ, ಕೊಪ್ಪಳ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆದಿವೆ.

ಕುರುಚಲು ಅರಣ್ಯಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುವ ಚಿರತೆಗಳು ಇತ್ತೀಚೆಗಿನ ವರ್ಷಗಳಲ್ಲಿ ಆಹಾರವನ್ನೋ, ನೀರನ್ನೋ ಅರಸಿಕೊಂಡು ಪಟ್ಟಣ, ನಗರ ಪ್ರದೇಶಗಳಿಗೆ ಆಗಮಿಸುತ್ತಿರುವುದು ಸಾಮಾನ್ಯವೆಂಬಂತೆ ಆಗಿಬಿಟ್ಟಿದೆ. 2016ರಲ್ಲಿ ಬೆಂಗಳೂರಿನ ವಿಬ್‌ಗಯಾರ್‌ ಶಾಲೆಯ ಆವರಣದೊಳಗೆ ನುಗ್ಗಿದ್ದಾಗ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಈಗಂತೂ ತುಮಕೂರು, ರಾಮನಗರ, ಮೈಸೂರು, ದಕ್ಷಿಣ ಕನ್ನಡ, ಉಡುಪಿ ಹೀಗೆ ಈಗ ಎಲ್ಲ ಕಡೆಗಳಲ್ಲೂ ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ.

ಬೆಳಗಾವಿ ಚಿರತೆ ಸೆರೆಗೆ 200 ಜನ!: ಕಾರ್ಯಾಚರಣೆಗೆ 2 ಆನೆ ಕೂಡ ಬಳಕೆ

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟ ಸಮೀಪದ ಮೂಡುಗಿಳಿಯಾರು ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆಯ ಓಡಾಟ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಒಂದೆರಡು ದಿನಗಳ ಹಿಂದೆ ಇಲ್ಲಿನ ಸಣ್ಣಬಸವನಕಲ್ಲು ಪ್ರದೇಶದಲ್ಲಿ ಚಿರತೆಯನ್ನು ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಸಂಜೆ ಮನೆಗೆ ತೆರಳುವಾಗ ನೋಡಿದ್ದು, ಗಾಬರಿಯಾಗಿ ಮನೆಗೆ ಓಡಿ ಹೋಗಿದ್ದಾರೆ. ಅಲ್ಲದೇ ಇಲ್ಲಿನ ಜನಸಂಚಾರ ಹೆಚ್ಚಿರುವ ರಸ್ತೆಯೊಂದರ ಪಕ್ಕದ ಪೊದೆಯ ಬಳಿಯೂ ಚಿರತೆ ಕಾಣಸಿಕ್ಕಿದ್ದು, ಸ್ಥಳೀಯ ಯುವಕರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಕಳೆದ ವರ್ಷ ಇದೇ ಪರಿಸರದಲ್ಲಿ ಚಿರತೆಯು ಹಸುವೊಂದರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಯನಗರ ಪ್ರದೇಶದ ಬೆಟ್ಟದ ಮೇಲೆ ಅ.25ರಂದು ಚಿರತೆ ಕಾಣಿಸಿಕೊಂಡಿದೆ. ಕಳೆದ ವರ್ಷವಷ್ಟೇ ಇಲ್ಲಿಗೆ ಸಮೀಪದ ಹನುಮನಹಳ್ಳಿ ಮತ್ತು ವಿರುಪಾಪುರ ಗುಡ್ಡ, ದುರ್ಗಾಬೆಟ್ಟಗಳಲ್ಲಿ ಚಿರತೆ ಇಬ್ಬರನ್ನು ಕೊಂದು ಹಾಕಿತ್ತು.

ಇನ್ನು ಬೆಳಗಾವಿ ತಾಲೂಕಿನ ಬೆಳವಟ್ಟಿಬಳಿಯ ಕವಳೇವಾಡಿ ಕ್ರಾಸ್‌ ಹತ್ತಿರ ಹೊಲದಲ್ಲಿ ಆ.24ರಂದು ಚಿರತೆ ಕಾಣಿಸಿಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ ಅರಣ್ಯ ವಲಯದ ಕುಂದರಗಿ, ಮಾವಿನಕಟ್ಟಾ, ಭರಣಿ ಗ್ರಾಮಗಳ ವ್ಯಾಪ್ತಿಯಲ್ಲೂ ಆ.23ರಂದು ಚಿರತೆ ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆಯವರೇ ಕಾಡಿಗೆ ಅಟ್ಟಿದ್ದಾರೆ ಎನ್ನಲಾಗುತ್ತಿದೆ.

ವಿಫಲ ಕಾರ್ಯಾಚರಣೆ: ಆ.5ರಂದು ಬೆಳಗಾವಿ ನಗರದ ಜಾಧವ ನಗರದಲ್ಲಿ ಕಾರ್ಮಿಕನೊಬ್ಬನ ಮೇಲೆ ದಾಳಿ ನಡೆಸಿ ಗಾಲ್ಫ್‌ ಕ್ಲಬ್‌ ಪರಿಸರದಲ್ಲಿ ಅವಿತುಕೊಂಡಿರುವ ಚಿರತೆ ಇನ್ನೂ ಪತ್ತೆಯಾಗಿಲ್ಲ. ಜೊತೆಗೆ ನ್ಯಾಮತಿ ತಾಲೂಕಿನ ಫಲವನಹಳ್ಳಿ ಗ್ರಾಮದಲ್ಲಿ ಮಂಗಳವಾರ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಬಲಿ ಪಡೆದ ನರ ಹಂತಕ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಇಟ್ಟಿರುವ ಬೋನನ್ನು ಇಟ್ಟು ಕಾದು ಕುಳಿತಿದ್ದರೂ ಚಿರತೆಯ ಸುಳಿವು ಮಾತ್ರ ಇಲ್ಲದಿರುವುದು ಕಾರ್ಯಾಚರಣೆಯ ಅಧಿಕಾರಿ, ಸಿಬ್ಬಂದಿಯ ಚಿಂತೆ ಹೆಚ್ಚಿಸಿದೆ. 7 ಕಡೆ ಬೋನುಗಳನ್ನು ಇಟ್ಟಿದ್ದರೂ ಚಿರತೆ ಮಾತ್ರ ಬಿದ್ದಿಲ್ಲ.

ಆಪರೇಷನ್‌ ಚೀತಾ ಫೇಲ್‌: ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ, ಆತಂಕದಲ್ಲಿ ಜನತೆ..!

ಏತನ್ಮಧ್ಯೆ ಮೈಸೂರಿನ ಎಚ್‌.ಡಿ.ಕೋಟೆ ತಾಲೂಕಿನ ಬೊಪ್ಪನಹಳ್ಳಿಯಲ್ಲಿ ಮಂಗಳವಾರ 4 ವರ್ಷದ ಗಂಡು ಚಿರತೆಯೊಂದು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿರುವುದು ಗ್ರಾಮಸ್ಥರು ನಿಟ್ಟುಸಿರುವ ಬಿಡುವಂತಾಗಿದೆ.

ಬೆಳಗಾವಿಯಲ್ಲಿ ಹೆಚ್ಚುತ್ತಿರುವ ಸಮಸ್ಯೆ

ಪಶ್ಚಿಮ ಘಟ್ಟಹಾದು ಹೋಗುವ ಬೆಳಗಾವಿ ಜಿಲ್ಲೆಯಲ್ಲಂತೂ ಇತ್ತೀಚಿಗಿನ ದಿನಗಳಲ್ಲಿ ಚಿರತೆಗಳ ಹಾವಳಿ ತೀವ್ರ ಹೆಚ್ಚಾಗುತ್ತಿದೆ. ಬೆಳಗಾವಿ ತಾಲೂಕಿನ ಬೆಳವಟ್ಟಿಬಳಿಯ ಕವಳೇವಾಡಿ ಕ್ರಾಸ್‌ ಹತ್ತಿರ ಹೊಲದಲ್ಲೂ ಆ.24ರಂದು ಚಿರತೆ ಕಾಣಿಸಿಕೊಂಡಿತ್ತು. ಆ.3ರಂದು ಚಿಕ್ಕೋಡಿ ತಾಲೂಕಿನ ಚಂದೂರ ಟೇಕ್‌ ಗ್ರಾಮದ ರೈತರ ಜಮೀನಿನಲ್ಲಿ ಚಿರತೆ ಪತ್ತೆಯಾಗಿತ್ತು. ಜಮೀನಿನ ಪಕ್ಕದ ರಸ್ತೆಯಲ್ಲಿ ಚಿರತೆಯೊಂದು ರಾಜಾರೋಷವಾಗಿ ಓಡಾಡುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲನಲ್ಲಿ ಸೆರೆಹಿಡಿದಿದ್ದರು. ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮ ಹಾಗೂ ಮೂಡಲಗಿ ತಾಲೂಕಿನ ಧರ್ಮಟ್ಟಿಗ್ರಾಮದಲ್ಲೂ ಚಿರತೆಗಳು ಪ್ರತ್ಯಕ್ಷವಾಗಿದ್ದವು. ಇದಕ್ಕೂ ಮೊದಲು ಮಾ.21ರಂದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಳಗವಾಡಿಯ ಮೊರಾರ್ಜಿ ದೇಸಾಯಿ ಶಾಲೆ ಮತ್ತು ಮಠದ ಹತ್ತಿರವೂ ಚಿರತೆ ಜನರಿಗೆ ದರ್ಶನ ನೀಡಿತ್ತು. ಸವದತ್ತಿಯ ಸಿಂಧೋಗಿ, ಸವದತ್ತಿ ಅರಣ್ಯ ಪ್ರದೇಶದಲ್ಲಿ ಜು.22ರಂದು ಚಿರತೆ ಶವ ಪತ್ತೆಯಾಗಿತ್ತು.

ರಾಜ್ಯದಲ್ಲಿ ವನ್ಯ ಜೀವಿಗಳ ಸಂತತಿ ಹೆಚ್ಚಳವಾಗಿದೆ. ವನ್ಯಜೀವಿಗಳ ಗಣತಿಯಲ್ಲಿ ಇದು ಸಾಬೀತಾಗಿದೆ. ಹೀಗಾಗಿ ಕಾಡುಪ್ರಾಣಿಗಳು ಕಾಡಿನಿಂದ ನಾಡಿಗೆ ಧಾವಿಸುತ್ತಿವೆ ಅಂತ ಬೆಳಗಾವಿ ಸಿಎಫ್‌ಒ ಮಂಜುನಾಥ ಚೌಹಾಣ ತಿಳಿಸಿದ್ದಾರೆ. 
 

Follow Us:
Download App:
  • android
  • ios