ಬೆಂಗಳೂರು(ಸೆ.16): ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ 5 ತಿಂಗಳಿಂದ ಸ್ಥಗಿತಗೊಂಡಿದ್ದ ಮೆಟ್ರೋ ರೈಲು ಸಂಚಾರ ಆರಂಭಗೊಂಡು ಒಂದು ವಾರ ಕಳೆದರೂ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಲಾಕ್‌ಡೌನ್‌ಗೂ ಮೊದಲು ನಿತ್ಯ 4 ರಿಂದ 4.30 ಲಕ್ಷದಷ್ಟಿಟ್ಟಿದ್ದ ಪ್ರಯಾಣಿಕರ ಸಂಖ್ಯೆ ಇದೀಗ 30 ರಿಂದ 35 ಸಾವಿರಕ್ಕೆ ಕುಸಿದಿದೆ.

ಕೋವಿಡ್‌-19 ಮುಂಜಾಗ್ರತೆ ಕ್ರಮವಾಗಿ ಸೆ.7ರಿಂದ 9ರ ವರೆಗೆ ನೇರಳೆ ಮಾರ್ಗದಲ್ಲಿ ಮತ್ತು ಸೆ.9ರಿಂದ 10ರ ವರೆಗೆ ಹಸಿರು ಮಾರ್ಗದಲ್ಲಿ ಮೆಟ್ರೋ ರೈಲುಗಳು ಬೆಳಗ್ಗೆ 8ರಿಂದ 11 ಗಂಟೆ ಮತ್ತು ಸಂಜೆ 4ರಿಂದ ರಾತ್ರಿ 7.30ರ ತನಕ ಮಾತ್ರ ಸಂಚಾರ ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ದಿನಕ್ಕೆ ಮೂರು ಸಾವಿರದಿಂದ ನಾಲ್ಕು ಸಾವಿರ ಮಾತ್ರ ಪ್ರಯಾಣಿಕರು ಪ್ರಯಾಣಿಸಿದ್ದರು.

ನಿರೀಕ್ಷೆ ಹುಸಿ:

ಬೈಯ್ಯಪ್ಪನಹಳ್ಳಿ- ಮೈಸೂರು ರಸ್ತೆ (ನೇರಳೆ ಮಾರ್ಗ) ಮತ್ತು ನಾಗಸಂದ್ರ- ಯಲಚೇನಹಳ್ಳಿ(ಹಸಿರು ಮಾರ್ಗ)ದಲ್ಲಿ ಸೆ.11ರಿಂದ ಬೆಳಗ್ಗೆ 7 ರಿಂದ ರಾತ್ರಿ 9ರವರೆಗೆ ಪೂರ್ಣಾವಧಿ ಮೆಟ್ರೋ ರೈಲು ಸಂಚಾರ ಆರಂಭವಾಗಿತ್ತು. ಇದರಿಂದ ಸಹಜವಾಗಿಯೇ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿತ್ತು. ಆದರೆ, ಸೆ.11ರಿಂದ ಇಲ್ಲಿವರೆಗೆ ಪ್ರಯಾಣಿಕರ ಸಂಖ್ಯೆ 35 ಸಾವಿರ ದಾಟಿಲ್ಲ. ವಾರಾಂತ್ಯದ ಹಿನ್ನೆಲೆಯಲ್ಲಿ ಹಸಿರು ಮತ್ತು ನೇರಳೆ ಎರಡು ಮಾರ್ಗದಿಂದ ಭಾನುವಾರ 14,472 ಮತ್ತು ಸೋಮವಾರ 35,266 ಪ್ರಯಾಣಿಕರು ಮಾತ್ರ ಪ್ರಯಾಣಿಸಿದ್ದರು ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

ಇಂದಿನಿಂದ ಪೂರ್ಣಾವಧಿ ಮೆಟ್ರೋ ರೈಲು ಸಂಚಾರ

ಟೋಕನ್‌ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಿರುವ ಹಿನ್ನೆಲೆಯಲ್ಲಿ ಸ್ಮಾರ್ಟ್‌ ಕಾರ್ಡ್‌ ಇಲ್ಲದವರು ಮೆಟ್ರೋ ರೈಲು ಪ್ರಯಾಣಕ್ಕೆ ಮುಂದಾಗಿಲ್ಲ. ಜತೆಗೆ ಕೊರೋನಾ ಸೋಂಕಿನ ಭೀತಿಯಿಂದ ಜನರು ಸಾರ್ವಜನಿಕ ವಾಹನಗಳಿಂದ ದೂರ ಉಳಿದು ಸ್ವಂತ ವಾಹನಗಳಲ್ಲಿ ಓಡಾಡಲು ಹೆಚ್ಚು ಆಸಕ್ತಿ ತೋರಿಸಿರುವುದು ಪ್ರಯಾಣಿಕರ ಸಂಖ್ಯೆ ಹೆಚ್ಚದಿರಲು ಕಾರಣ ಎನ್ನಲಾಗಿದೆ.

ಮುನ್ನೆಚ್ಚರಿಕೆ ಕ್ರಮ

ಒಂದು ಸುತ್ತಿನ ಪ್ರಯಾಣದ ನಂತರ ಮೆಟ್ರೋ ರೈಲನ್ನು ರಾಸಾಯನಿಕ ಬಳಸಿ ಸ್ವಚ್ಛಗೊಳಿಸಲಾಗುತ್ತಿದೆ. ಪ್ರತಿ ಮೆಟ್ರೋ ನಿಲ್ದಾಣಗಳಲ್ಲೂ ಏಕಮುಖ ಸಂಚಾರಕ್ಕೆ ಆದ್ಯತೆ ನೀಡಿದ್ದು, ಸ್ಮಾರ್ಟ್‌ ಕಾರ್ಡ್‌ ಹೊಂದಿರುವವರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಮುಖಗವುಸು, ಸ್ಯಾನಿಟೈಸರ್‌ ಬಳಕೆ ಕಡ್ಡಾಯ ಮಾಡಲಾಗಿದೆ. ಪ್ರಯಾಣಿಕರ ಬ್ಯಾಗ್‌ ಇತ್ಯಾದಿ ವಸ್ತುಗಳನ್ನು ಸ್ಯಾನಿಟೈಸ್‌ ಮಾಡಿ ಒಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಪ್ರಯಾಣಿಕರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.