ಬೆಂಗಳೂರು(ಮೇ.16): ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಸರ್ಕಾರ ಸೆಮಿ ಲಾಕ್‌ಡೌನ್‌ ಜಾರಿಗೊಳಿಸಿ ಇಷ್ಟು ದಿನಗಳಾದರೂ ರಸ್ತೆಗಳಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಗಿತ್ತು. ಆದರೆ ತೌಕ್ಟೆ ಚಂಡಮಾರುತ ಶನಿವಾರ ಚಿತ್ರಣವನ್ನೇ ಬದಲಿಸಿದ್ದರಿಂದ ರಾಜ್ಯದ ಏಳೆಂಟು ಜಿಲ್ಲೆಗಳಲ್ಲಿ ಜನ ರಸ್ತೆಗಿಳಿಯಲು ಮನಸ್ಸನ್ನೇ ಮಾಡಲಿಲ್ಲ. ಇನ್ನುಳಿದಂತೆ ಬಹುತೇಕ ಜಿಲ್ಲೆಗಳಲ್ಲೂ ಅಗತ್ಯ ವಸ್ತುಗಳನ್ನು ಖರೀದಿಸಿ 10 ಗಂಟೆ ವೇಳೆ ಮನೆ ಸೇರಿಕೊಂಡಿದ್ದರಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಜನ ಸಂಚಾರ, ವಾಹನ ಸಂಚಾರ ಬಹುತೇಕ ವಿರಳವಾಗಿತ್ತು.

ದಕ್ಷಿಣ ಕನ್ನಡದಲ್ಲಿ ದಿನಪೂರ್ತಿ ಎಡೆಬಿಡದೆ ವರ್ಷಧಾರೆಯಾದರೆ, ಕಾರವಾರ, ಮೈಸೂರು,ಹಾಸನ, ಕೊಡಗು, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಗದಗ, ಬೆಳಗಾವಿಯಲ್ಲಿ ಜಿಟಿಜಿಟಿ ಮಳೆ ಸುರಿಯಿತು. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ವಿಜಯಪುರ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಡೀ ದಿನ ಮೋಡಕವಿದ ವಾತಾವರಣ ಕಂಡು ಬಂದ ಕಾರಣ ರಸ್ತೆಗಿಳಿಯಲು ಜನ ಸಹ ಹಿಂದೇಟು ಹಾಕಿದರು.

ತೌಕ್ಟೆ ಚಂಡಮಾರುತ ಎಫೆಕ್ಟ್: ಬೆಂಗ್ಳೂರಿನಿಂದ ಹೊರಡುವ ಈ ರೈಲುಗಳು ರದ್ದು

ಇನ್ನೂ ರಾಯಚೂರಿನಲ್ಲಿ ಭಾನುವಾರದಿಂದ ವಾರಕ್ಕೆ 3 ದಿನ ಸಂಪೂರ್ಣ ಲಾಕ್‌ಡೌನ್‌ ಘೋಷಿಸಲಾಗಿದ್ದು, ನಿಯಮ ಉಲ್ಲಂಘಿಸಿ ದಿನಸಿ, ತರಕಾರಿ ಖರೀದಿಯಲ್ಲಿ ತೊಡಗಿದ್ದರು. ಮದ್ಯದ ಅಂಗಡಿಗಳ ಮುಂದೆ ಉದ್ದುದ್ದ ಸಾಲು ಕಂಡುಬಂತು. ಗದಗ, ಬಳ್ಳಾರಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನಜಂಗುಳಿ ಉಂಟಾಗಿತ್ತು.