ಹಣಕ್ಕೆ ಮತ ಹಾಕೋದೇ ಜನರಿಗೆ ಇಷ್ಟ: ಹೈಕೋರ್ಟ್!
ಸಾರ್ವಜನಿಕ ಪ್ರಕಟಣೆ ನೀಡಿದ ಹೊರತಾಗಿಯೂ ಇಡೀ ರಾಜ್ಯದ ಯಾವೊಂದು ಭಾಗದಿಂದಲೂ ಸ್ಮಶಾನ ಜಾಗಕ್ಕೆ ಭೂಮಿ ಮಂಜೂರಾತಿ ಕೋರಿ ಸರ್ಕಾರಕ್ಕೆ ಜನರು ಮನವಿ ಸಲ್ಲಿಸದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್.
ಬೆಂಗಳೂರು (ಏ.21): ಸಾರ್ವಜನಿಕ ಪ್ರಕಟಣೆ ನೀಡಿದ ಹೊರತಾಗಿಯೂ ಇಡೀ ರಾಜ್ಯದ ಯಾವೊಂದು ಭಾಗದಿಂದಲೂ ಸ್ಮಶಾನ ಜಾಗಕ್ಕೆ ಭೂಮಿ ಮಂಜೂರಾತಿ ಕೋರಿ ಸರ್ಕಾರಕ್ಕೆ ಜನರು ಮನವಿ ಸಲ್ಲಿಸದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ‘ಜನರಿಗೆ ಮೂಲಭೂತ ಸೌಲಭ್ಯ ಪಡೆಯುವುದಕ್ಕಿಂತ ಚುನಾವಣೆ ಬಗ್ಗೆಯೇ ಹೆಚ್ಚು ಆಸಕ್ತಿಯಿದೆ. ಮತ ಹಾಕಲು ಹಣ ವಸೂಲಿ ಮಾಡಬೇಕಲ್ಲವೇ’ ಎಂದು ಕಟುವಾಗಿ ನುಡಿದಿದೆ.
ರಾಜ್ಯದಲ್ಲಿ ಸ್ಮಶಾನ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸುವಂತೆ ಸೂಚಿಸಿ ಹೈಕೋರ್ಟ್ ಹೊರಡಿಸಿರುವ ಆದೇಶ ಜಾರಿಗೊಳಿಸದ್ದಕ್ಕೆ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ಪೀಠ, ಜನರ ಧೋರಣೆ ಬಗ್ಗೆ ಅಸಮಾಧಾನ ಹೊರಹಾಕಿತು. ಇದಕ್ಕೂ ಮುನ್ನ ವಿಚಾರಣೆ ವೇಳೆ ಸರ್ಕಾರಿ ವಕೀಲ ಕಿರಣ್ ಕುಮಾರ್, 2023ರ ಏ.19ರಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಒದಗಿಸಿರುವ ಪತ್ರ ಒಳಗೊಂಡ ಮೆಮೋವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಡಿಕೆಶಿ ಅಕ್ರಮ ಆಸ್ತಿ ಗಳಿಕೆ ಕೇಸ್: ಸರ್ಕಾರದ ಶಿಫಾರಸು ಪ್ರಶ್ನಿಸಿದ್ದ ಅರ್ಜಿ ಹೈಕೋರ್ಟಲ್ಲಿ ವಜಾ
‘2023ರ ಏ.6ರಂದು ಹೈಕೋರ್ಟ್ ಹೊರಡಿಸಿದ ಆದೇಶದಂತೆ ರಾಜ್ಯದಲ್ಲಿ ಸ್ಮಶಾನಕ್ಕೆ ಜಾಗವಿಲ್ಲದ ಗ್ರಾಮಕ್ಕೆ ಭೂಮಿ ಮಂಜೂರಾತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಪತ್ರಿಕೆಯಲ್ಲಿ ಸಾರ್ವಜನಿಕ ಪ್ರಕಟಣೆ ನೀಡಲಾಗಿತ್ತು. ಆದರೆ, ಇಡೀ ರಾಜ್ಯದ ಯಾವುದೇ ಭಾಗದಿಂದಲೂ ಯಾವೊಬ್ಬ ಗ್ರಾಮಸ್ಥನಿಂದಲೂ ಸ್ಮಶಾನಕ್ಕೆ ಭೂಮಿ ಮಂಜೂರಾತಿ ಕೋರಿ ಮನವಿ ಬಂದಿಲ್ಲ’ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.
ಈ ಪತ್ರ ನೋಡಿ ತೀವ್ರವಾಗಿ ಬೇಸರಗೊಂಡ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ‘ಇಷ್ಟೇ ರೀ.... ನಮ್ಮ ದೇಶ. ಸ್ಮಶಾನಕ್ಕೆ ಭೂಮಿ ಇತ್ಯಾದಿ ಮೂಲ ಸೌಲಭ್ಯ ಪಡೆಯುವ ಬಗ್ಗೆ ಜನರಿಗೆ ಆಸಕ್ತಿ ಇಲ್ಲ. ಚುನಾವಣೆ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಚುನಾವಣೆ ಬಂತಲ್ಲ; ಹಣ ವಸೂಲಿ ಮಾಡುವ ಕುರಿತು ಯೋಚಿಸುತ್ತಿದ್ದಾರೆ. ಹಣ ಸ್ವೀಕರಿಸಿ ಮತ ಹಾಕಬೇಕಲ್ಲವೇ? ಅದುವೇ ಜನರಿಗೆ ಇಷ್ಟದ ವಿಷಯ. ಜನರೇ ಹೀಗಿದ್ದರೆ ನಾವು (ನ್ಯಾಯಾಲಯ) ಏನು ಮಾಡಲು ಸಾಧ್ಯವಿದೆ’ ಎಂದು ನೊಂದು ನುಡಿದರು.
ಮೂಲ ಸೌಲಭ್ಯದ ಬಗ್ಗೆ ಜನ ಆಸಕ್ತಿ ತೋರದೆ ಇರುವುದಕ್ಕೇ ನಮ್ಮ ದೇಶ ಹೀಗಿರುವುದು. ಸ್ವಾತಂತ್ರ್ಯ ಸಿಕ್ಕಿದೆ; ಎಂಜಾಯ್ ಮಾಡಬೇಕಷ್ಟೇ ಎಂಬ ಮನಸ್ಥಿತಿ ಜನರಲ್ಲಿದೆ. ಸ್ವಾತಂತ್ರ್ಯ ಹೋದಾಗ ಅದರ ಮೌಲ್ಯ ತಿಳಿಯುತ್ತದೆ. ಪ್ರಕರಣದಲ್ಲಿ ನ್ಯಾಯಾಲಯವು ತನ್ನ ಕೆಲಸ ಮಾಡಿದೆ. ಜನರಿಗೇ ಮೂಲ ಸೌಲಭ್ಯ ಬೇಕಿಲ್ಲ ಎಂದಾದರೆ, ಈ ಪ್ರಕರಣವನ್ನು ಮುಕ್ತಾಯಗೊಳಿಸೋಣ. ಅದು ಬಿಟ್ಟು ಮತ್ತೇನು ಮಾಡೋಕೆ ಆಗುತ್ತದೆ. ನ್ಯಾಯ ಕಲ್ಪಿಸುತ್ತೇವೆ; ಕೋರ್ಟ್ ಬನ್ನಿ ಎಂದು ಸಾರಿ ಹೇಳಿದರೂ ಯಾವೊಬ್ಬ ಕಕ್ಷಿದಾರನೂ ಮುಂದೆ ಬಾರದ ಪರಿಸ್ಥಿತಿ ನೆಲೆಸಿರುವುದು ವಿಷಾದ ಎಂದು ನ್ಯಾಯಮೂರ್ತಿಗಳು ನುಡಿದರು.
ಅರ್ಜಿದಾರ ವಕೀಲ ಮೊಹಮ್ಮದ್ ಇಕ್ಬಾಲ್, ಸರ್ಕಾರ 2023ರ ಏ.20ವರೆಗೆ (ಗುರುವಾರ) ರಾಜ್ಯದ ಯಾವೆಲ್ಲಾ ಗ್ರಾಮಗಳಿಗೆ ಸ್ಮಶಾನಕ್ಕೆ ಭೂಮಿಯನ್ನು ಸರ್ಕಾರ ಕಲ್ಪಿಸಿದೆ ಎಂಬ ಬಗ್ಗೆ ಪರಿಶೀಲಿಸಿ ಸಮಗ್ರ ಪ್ರಮಾಣ ಪತ್ರ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅದಕ್ಕೆ ಒಪ್ಪಿದ ನ್ಯಾಯಪೀಠ, ಅರ್ಜಿದಾರರಿಗೆ ಮೇ 23ರವರೆಗೆ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.
ಅಂತಿಮ ದಿನ ಬೆಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ಮೂವರು ನಾಮಪತ್ರ ಸಲ್ಲಿಕೆ
ರಾಜ್ಯದಲ್ಲಿ ಒಟ್ಟು 30762 ಗ್ರಾಮಗಳಿವೆ. ಅದರಲ್ಲಿ 2491 ಬೇಚರಕ್ (ಜನವಸತಿಯಿಲ್ಲದ) ಗ್ರಾಮಗಳಿವೆ. ಬೇಚರಕ್ ಗ್ರಾಮಗಳನ್ನು ಹೊರತುಪಡಿಸಿದ ಒಟ್ಟು 28,271 ಗ್ರಾಮಗಳ ಪೈಕಿ 28,260 ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದೆ ಎಂದು ಕಳೆದ ಫೆಬ್ರವರಿಯಲ್ಲಿ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿತ್ತು. ಸರ್ಕಾರ ಒದಗಿಸಿದ ಈ ಮಾಹಿತಿ ಸೂಕ್ತವಾಗಿಲ್ಲ ಎಂದು ಆಕ್ಷೇಪಿಸಿದ್ದ ಹೈಕೋರ್ಟ್, ಪತ್ರಿಕಾ ಪ್ರಕಟಣೆ ಹೊರಡಿಸಿ ಯಾವ ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲ ಎಂಬುದರ ಬಗ್ಗೆ ಜನರಿಂದ ಮಾಹಿತಿ ಪಡೆಯುವಂತೆ ಸೂಚಿಸಿತ್ತು.