ರಾಜಕೀಯದಿಂದ ಕೋವಿಡ್‌ ಬಗ್ಗೆ ಮೈಮರೆತ ಕರ್ನಾಟಕ: ಅನ್‌ಲಾಕ್‌ ಮುನ್ನವೇ ಜನಜಾತ್ರೆ!

* ಅನ್‌ಲಾಕ್‌ಗೆ ಮುನ್ನವೇ ಬೆಂಗಳೂರು ಸೇರಿ ಎಲ್ಲೆಡೆ ಜನಜಾತ್ರೆ

* ರಾಜ್ಯದಲ್ಲಿ ನಾಯಕತ್ವ ಚರ್ಚೆ ಮುನ್ನೆಲೆಗೆ, ಲಾಭ-ನಷ್ಟದ ಲೆಕ್ಕಾಚಾರದಲ್ಲಿ ವಿಪಕ್ಷ

* ಬಿಗಿ ಕಳೆದುಕೊಂಡ ಕೋವಿಡ್‌ ನಿಯಂತ್ರಣ, ಜನರಿಂದಲೂ ಉಡಾಫೆಯ ವರ್ತನೆ

People Forgot Covid Amid Of Political Developments in Karnataka No One Following Guidlines pod

ಬೆಂಗಳೂರು(ಜೂ.09): ಕರುನಾಡಿನಲ್ಲಿ ಉಲ್ಬಣಿಸಿ ಕೈಮೀರಿ ಹೋದ ಕೊರೋನಾ 2ನೇ ಅಲೆಯ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿಯಲ್ಲಿದ್ದರೂ, ಅದರ ಅವಧಿ ಮುಗಿಯಲು ಇನ್ನೂ ಐದಾರು ದಿನಗಳು ಬಾಕಿ ಇದ್ದರೂ, ಸಾವಿರಾರು ಸಂಖ್ಯೆಯಲ್ಲಿ ದೈನಂದಿನ ಸೋಂಕು ಪ್ರಕರಣಗಳು, ನೂರಾರು ಸಾವುಗಳು ಸಂಭವಿಸುತ್ತಲೇ ಇದ್ದರೂ, ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ವೈರಸ್‌ ಕತೆ ಮುಗಿದೇ ಹೋಗಿದೆಯೇನೋ ಎಂಬಂಥ ಚಿತ್ರಣ ಕಂಡುಬರುತ್ತಿದೆ.

ಒಂದೆಡೆ, ಆಡಳಿತಾರೂಢ ಬಿಜೆಪಿಯಲ್ಲಿ ನಾಯಕತ್ವ ಚರ್ಚೆ, ಪ್ರತಿಪಕ್ಷದಲ್ಲಿ (ಪ್ರಮುಖವಾಗಿ ಕಾಂಗ್ರೆಸ್‌) ಲಾಭ-ನಷ್ಟದ ಲೆಕ್ಕಾಚಾರಗಳಿಂದಾಗಿ ರಾಜಕೀಯದತ್ತ ತಿರುಗಿದ ವ್ಯವಸ್ಥೆಯ ಗಮನ. ಮತ್ತೊಂದೆಡೆ, ಸೋಂಕು-ಸಾವಿನ ಸಂಖ್ಯೆ ಇಳಿಮುಖ; ಆಕ್ಸಿಜನ್‌, ರೆಮ್‌ಡೆಸಿವಿರ್‌ ಬೇಡಿಕೆ ಕುಸಿತ; ಐಸಿಯು ಬೆಡ್‌, ಆಸ್ಪತ್ರೆಗಳ ಮೇಲಿನ ಒತ್ತಡವೂ ಕ್ಷೀಣ. ಇನ್ನೊಂದೆಡೆ, ಅನ್‌ಲಾಕ್‌ ನಿರೀಕ್ಷೆಯಲ್ಲಿರುವ ರಾಜ್ಯದ ಜನತೆ ಅದಕ್ಕೂ ಮುನ್ನವೇ ಬಿಡುಬೀಸಾಗಿ ಓಡಾಡುತ್ತಿರುವುದು... ಒಟ್ಟಾರೆಯಾಗಿ ಕೊರೋನಾ ನಿಯಂತ್ರಣಕ್ಕಾಗಿ ಜಾರಿಯಾದ ಲಾಕ್‌ಡೌನ್‌ ಬಿಗು ಕಳೆದುಕೊಂಡಿದೆ. ದಿಢೀರ್‌ ಮುನ್ನೆಲೆಗೆ ಬಂದ ರಾಜಕೀಯದಿಂದಾಗಿ ಇಡೀ ರಾಜ್ಯ ಮೈಮರೆತು ಕುಳಿತಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುಭಾಗಗಳಲ್ಲಿ ಜನರು ಮತ್ತೆ ನಿರ್ಲಕ್ಷ್ಯದ ಪರಮಾವಧಿ ತಲುಪಿದ್ದಾರೆ. ನಿಯಮ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಯಲ್ಲಿ ಸಂಚರಿಸುವುದು, ಜಿಲ್ಲಾಡಳಿತಗಳು ಜನರಿಗೆ ಅಗತ್ಯ ವಸ್ತು ಖರೀದಿಗೆ ನೀಡಿರುವ ಅವಕಾಶವನ್ನೇ ದುರುಪಯೋಗ ಪಡಿಸಿಕೊಂಡು ಗುಂಪು ಗೂಡುವುದು ಮುಂದುವರಿದಿದೆ. ಮಾರುಕಟ್ಟೆಯಲ್ಲಿ ವಸ್ತು ಖರೀದಿ ವೇಳೆ ಸಾಮಾಜಿಕ ಅಂತರಕ್ಕೆ ಜನರು ತಿಲಾಂಜಲಿ ನೀಡಿದ್ದಾರೆ. ಈ ನಡುವೆ ಕೆಲವು ವ್ಯಾಪಾರಿಗಳು ಕೂಡ ಕೊರೋನಾ ನಿಯಮ ಮೀರಿ ಹಿಂಬಾಗಿಲಿನಿಂದ ವ್ಯವಹರಿಸುವುದು ಕಂಡು ಬಂದಿದೆ. ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಕೆಲವರು ಪೊಲೀಸರಿಗೇ ನಾಲಿಗೆ ಹರಿಬಿಟ್ಟಘಟನೆಗಳೂ ಕೂಡ ರಾಜ್ಯದಲ್ಲಿ ನಡೆದಿವೆ.

ಮಾರುಕಟ್ಟೆಯಲ್ಲಿ ವಿಪರೀತ ರಶ್‌:

ಬೆಳಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ನೀಡಿದ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಬೆಂಗಳೂರು, ಧಾರವಾಡ, ಹುಬ್ಬಳ್ಳಿ, ಹಾವೇರಿ, ಗದಗ, ಕೊಪ್ಪಳ, ಬಳ್ಳಾರಿ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲಾ ಕೇಂದ್ರ ಸೇರಿದಂತೆ ಬಹುತೇಕ ತಾಲೂಕು, ಹೋಬಳಿಗಳಲ್ಲೂ ಜನ ಗುಂಪುಗುಂಪಾಗಿ ಸಂಚರಿಸುತ್ತಿದ್ದರು. ಬಹುತೇಕ ಮಾರುಕಟ್ಟೆಪ್ರದೇಶ, ಮುಖ್ಯ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ನಂತಹ ಸನ್ನಿವೇಶ ಕಂಡು ಬಂತು. ಅದರಲ್ಲೂ ತರಕಾರಿ ಮಾರುಕಟ್ಟೆಮತ್ತು ದಿನಸಿ ಅಂಗಡಿಗಳಲ್ಲಿ ಹಾಗೂ ಎಪಿಎಂಸಿಗಳಲ್ಲಿ ಜನಜಂಗುಳಿಯೇ ಸೇರಿತ್ತು. ಮಾಸ್ಕ್‌ ಧರಿಸಿದ್ದರಾದರೂ ಸಾಮಾಜಿಕ ಅಂತರವೇ ಇರಲಿಲ್ಲ. ಪೊಲೀಸರು ಸಹ ಅಸಹಾಯಕರಾಗಿ ನೋಡುತ್ತಿದ್ದರಲ್ಲದೆ, ವಾಹನ ಜಪ್ತಿ, ದಂಡ ವಿಧಿಸುವ ಪ್ರಕ್ರಿಯೆಯೂ ಇಳಿಮುಖವಾಗಿತ್ತು.

ಆದರೆ ಮೈಸೂರಿನಲ್ಲಿ ಮಾತ್ರ ಸಂಪೂರ್ಣ ಲಾಕ್‌ಡೌನ್‌ ತೆರವಿನಿಂದ ಅಗತ್ಯ ವಸ್ತುಗಳ ಅಂಗಡಿಗಳು ಇರುವ ಪ್ರದೇಶಗಳಲ್ಲಿ ಮಂಗಳವಾರ ಅಷ್ಟೇನೂ ಜನ ಸಂದಣಿ ಇರಲಿಲ್ಲ. ಆದರೆ ಅನಗತ್ಯವಾಗಿ ಸಂಚರಿಸುತ್ತಿದ್ದ 190 ಮಂದಿಯ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios