ಸುರಕ್ಷಾ ಆ್ಯಪ್: 9 ನಿಮಿಷದಲ್ಲಿ ನೆರವು ನೀಡದ ಪೊಲೀಸರ ವಿರುದ್ಧ ಕ್ರಮ
‘ಸುರಕ್ಷಾ ಆ್ಯಪ್‌ನಲ್ಲಿ ಕೋರಿದರೂ ನೆರವು ಸಿಗದಿದ್ದರೆ ದೂರು ನೀಡಿ’| 9 ನಿಮಿಷದಲ್ಲಿ ಪೊಲೀಸರು ಬಾರದಿದ್ದರೆ ದೂರು ನೀಡಿ| ನೆರವು ನೀಡದ ಪೊಲೀಸರ ವಿರುದ್ಧ ಕಾನೂನು ಕ್ರಮ: ಭಾಸ್ಕರ್ ರಾವ್
ಬೆಂಗಳೂರು[ಡಿ.05]: ‘ಸುರಕ್ಷಾ ಆ್ಯಪ್’ನಲ್ಲಿ ರಕ್ಷಣೆಗೆ ಕೋರಿದರೂ ಪೊಲೀಸರ ನೆರವು ಸಿಗದ ನಾಗರಿಕರು ದೂರು ಸಲ್ಲಿಸಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ನಗರ ಆಯುಕ್ತ ಭಾಸ್ಕರ್ ರಾವ್ ಭರವಸೆ ನೀಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಆ್ಯಪ್ ಮೂಲಕ ನೆರವು ಕೋರಿದವರಿಗೆ 9 ನಿಮಿಷಗಳಲ್ಲಿ ಪೊಲೀಸರು ಅಭಯ ಹಸ್ತ ಚಾಚಬೇಕು. ಒಂದು ವೇಳೆ ಆ್ಯಪ್‌ನಲ್ಲಿ ರಕ್ಷಣೆ ಕೋರಿದರೂ ಸಹ ಪೊಲೀಸರು ನೆರವಿಗೆ ಧಾವಿಸದೆ ಹೋದರೆ ಸಹಿಸುವುದಿಲ್ಲ. ಈ ಬಗ್ಗೆ ನಾಗರಿಕರು ದೂರು ನೀಡಿದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದರು.
ಒಮ್ಮೆಗೆ ಜನರು ಆ್ಯಪ್ ಬಳಕೆ ಮುಂದಾದ ಕಾರಣ ಆ್ಯಪ್ ಡೌನ್‌ಲೋಡ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿದೆ. ಈಗಾಗಲೇ ಸಮಸ್ಯೆ ಸರಿಪಡಿಸುವಂತೆ ತಾಂತ್ರಿಕ ವರ್ಗದ ಸಿಬ್ಬಂದಿಗೆ ಸೂಚಿಸಿದ್ದೇನೆ. ಮಹಿಳೆ ಮತ್ತು ಮಕ್ಕಳ ರಕ್ಷಣೆಯೇ ಪೊಲೀಸರ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.
ಆ್ಯಪ್ ಕುರಿತು ನಗರ ಪೊಲೀಸರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಾಮಾಜಿಕ ಜಾಲ ತಾಣಗಳು ಹಾಗೂ ಶಾಲಾ-ಕಾಲೇಜು, ಗಾರ್ಮೆಂಟ್ಸ್, ಮಾಲ್‌ಗಳು, ಕೈಗಾರಿಕೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಆ್ಯಪ್ ಬಗ್ಗೆ ಪೊಲೀಸರು ಪ್ರಚಾರ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.