Asianet Suvarna News Asianet Suvarna News

ಮದ್ಯಕ್ಕೆ ಆರಂಭದ ಉತ್ಸಾಹ ಈಗಿಲ್ಲ: ಆದಾಯದಲ್ಲಿ ಭಾರೀ ಕುಸಿತ!

ಮದ್ಯಕ್ಕೆ ಆರಂಭದ ಉತ್ಸಾಹ ಈಗಿಲ್ಲ!| ಮೇ 4ರಂದು ತೋರಿದ ಆಸಕ್ತಿ ಜನರಿಗೆ ಉಳಿದಿಲ್ಲ| ಈವರೆಗೆ 1,221.96 ಕೋಟಿ ರು. ಮದ್ಯ ಮಾರಾಟ| ಕಳೆದ ವರ್ಷಕ್ಕಿಂತ ಆದಾಯ 314 ಕೋಟಿ ರು. ಕುಸಿತ

People Are not showing interest to buy alcohol like like may 4th
Author
Bangalore, First Published May 18, 2020, 7:38 AM IST

ಶ್ರೀಕಾಂತ್‌ ಎನ್‌.ಗೌಡಸಂದ್ರ

ಬೆಂಗಳೂರು(ಮೇ.18); ರಾಜ್ಯದಲ್ಲಿ ಮೇ 4 ರಿಂದ ಮದ್ಯದ ಮಾರಾಟಕ್ಕೆ ಅನುಮತಿ ದೊರೆತಿದ್ದರೂ ಕಳೆದ ಸಾಲಿಗೆ (2019-20) ಹೋಲಿಸಿದರೆ ಭಾರೀ ಪ್ರಮಾಣದಲ್ಲಿ ಮಾರಾಟ ಕುಸಿದಿದೆ. ಕಳೆದ ವರ್ಷದ ಮಾರಾಟಕ್ಕಿಂತ ಭಾರತೀಯ ಮದ್ಯ ಶೇ.86.34ರಷ್ಟುಹಾಗೂ ಬಿಯರ್‌ ಮಾರಾಟ ಶೇ.64.92ರಷ್ಟುಕುಸಿತ ಕಂಡಿದೆ.

ಮೇ 4ರಿಂದ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು, ಕಳೆದ ವರ್ಷದ ಮೇ ತಿಂಗಳ ಮದ್ಯ ಮಾರಾಟವನ್ನೇ (ಮೇ 15ರವರೆಗೆ) ಪರಿಗಣಿಸಿದರೂ ಇಂಡಿಯನ್‌ ಮೇಡ್‌ ಮದ್ಯ ಮಾರಾಟ ಶೇ. 0.32 ರಷ್ಟುಹಾಗೂ ಬಿಯರ್‌ ಮಾರಾಟ ಶೇ.63.89 ರಷ್ಟುಭಾರೀ ಕುಸಿತ ಉಂಟಾಗಿದೆ. ಮೇ 4ರಿಂದ 15 ರವರೆಗೆ 103.03 ಕೋಟಿ ರು. ಮೌಲ್ಯದ ಬಿಯರ್‌, 1,118.93 ಕೋಟಿ ರು. ಮೌಲ್ಯದ ದೇಶೀಯ ಮದ್ಯ ಸೇರಿ 1,221.96 ಕೋಟಿ ರು. ಮೌಲ್ಯದ ಮದ್ಯ ಮಾರಾಟವಾಗಿದೆ.

2019-20ನೇ ಸಾಲಿನಲ್ಲಿ ಮೇ 1 ರಿಂದ 15ರವರೆಗಿನ 979.35 ಕೋಟಿ ರು. ಅಬಕಾರಿ ಆದಾಯ ಸಂಗ್ರಹಿಸಲಾಗಿತ್ತು. ಆದರೆ, ಪ್ರಸಕ್ತ ವರ್ಷದಲ್ಲಿ ಮೇ 15ರವರೆಗೆ 664.73 ಕೋಟಿ ರು. ಮಾತ್ರ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ 314.62 ಕೋಟಿ ರು. (ಶೇ.32.13) ಆದಾಯ ಕುಸಿದಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

ಮದ್ಯ ಮಾರಾಟಕ್ಕೂ ಮೊಬೈಲ್‌ ವ್ಯಾನ್‌! ಮನೆ ಬಾಗಿಲಿಗೇ ಬಾಟಲ್

ಕಡಿಮೆಯಾಯ್ತು ಮದ್ಯ ಖರೀದಿ ಆಸಕ್ತಿ:

ಲಾಕ್‌ಡೌನ್‌ ಸಡಿಲಿಕೆ ಬಳಿಕ ಮೇ 4 ರಿಂದ ಮೇ 6ರವರೆಗೆ ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿತ್ತು. ಮೇ 4 ರಂದು 45 ಕೋಟಿ ರು., 5 ರಂದು 197 ಕೋಟಿ ರು. ಹಾಗೂ ಮೇ 6 ರಂದು ಬರೋಬ್ಬರಿ 214 ಕೋಟಿ ರು. ಮೌಲ್ಯದ ಮದ್ಯ ಮಾರಾಟವಾಗಿತ್ತು. ಮೇ 12ರ ವೇಳೆಗೆ 85.42 ಕೋಟಿ ರು.ಗೆ ಕುಸಿಯಿತು. ಮೇ 13ಕ್ಕೆ 80.29 ಕೋಟಿ ರು., ಮೇ 15 ರಂದು ಮತ್ತಷ್ಟುಕುಸಿದು ಕೇವಲ 62.14 ಕೋಟಿ ರು. ಮೌಲ್ಯದ ಮದ್ಯ ಮಾತ್ರ ಮಾರಾಟವಾಗಿದೆ.

ಆದಾಯ ಕುಸಿತ ಭೀತಿ:

ಕಳೆದ ವರ್ಷ ಅಬಕಾರಿ ಇಲಾಖೆಯಿಂದ ರಾಜ್ಯ ಸರ್ಕಾರ 20,950 ಕೋಟಿ ರು. ಆದಾಯ ಗಳಿಸಿದ್ದು, 2020-21 ನೇ ಸಾಲಿಗೆ 22,700 ಕೋಟಿ ರು. ಆದಾಯದ ನಿರೀಕ್ಷೆ ಇಟ್ಟುಕೊಂಡಿದೆ. 2019ರ ಏಪ್ರಿಲ್‌ 1 ರಿಂದ ಮೇ 15ರವರೆಗೆ 2,282 ಕೋಟಿ ರು. ಆದಾಯ ಗಳಿಸಿದ್ದರೆ, ಈ ವರ್ಷ ಕೇವಲ 664.73 ಕೋಟಿ ರು. ಮಾತ್ರ ಬಂದಿದ್ದು, ಸರ್ಕಾರದ ಪ್ರಮುಖ ಆದಾಯ ಮೂಲದಲ್ಲಿ ಒಂದಾಗಿರುವ ಅಬಕಾರಿ ಆದಾಯಕ್ಕೂ ಕೊರೋನಾ ಕೊಡಲಿ ಪೆಟ್ಟು ಬಿದ್ದಿದೆ.

ಪ್ರಸ್ತುತ ಅಬಕಾರಿ ತೆರಿಗೆ ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಿದ್ದರೂ, ಕಳೆದ ವರ್ಷದ ಮೊತ್ತದಷ್ಟುಆದಾಯ ಗಳಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮದ್ಯ ಖರೀದಿ ಕಡಿಮೆಯಾಗಿರುವುದೇ ಕಾರಣ ಎಂದು ತಿಳಿದುಬಂದಿದೆ.

ಎಣ್ಣೆ ಸಿಕ್ತು ಅಂತ ಬೇಕಾಬಿಟ್ಟಿ ಕುಡಿದು ತನ್ನ ಮನೆಗೇ ಬೆಂಕಿ ಇಟ್ಟ..!

ಬಿಯರ್‌ ಬಳಕೆ ತೀವ್ರ ಇಳಿಕೆ!

2019ರ ಮೇ 15 ರಂದು 1.74 ಲಕ್ಷ ಕೇಸ್‌ ಬಾಕ್ಸ್‌ ದೇಶಿಯ ಮದ್ಯ ಹಾಗೂ 1.14 ಲಕ್ಷ ಕೇಸ್‌ ಬಿಯರ್‌ ಮಾರಾಟವಾಗಿತ್ತು. ಆದರೆ, ಪ್ರಸಕ್ತ ವರ್ಷದ ಮೇ 15 ರಂದು ಬಿಯರ್‌ 30 ಸಾವಿರ ಕೇಸ್‌ನಷ್ಟುಮಾತ್ರ ಮಾರಾಟವಾಗಿದೆ. ಒಟ್ಟು ಮಾರಾಟದಲ್ಲೂ ಬಿಯರ್‌ ಮಾರಾಟ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಸಾರ್ವಜನಿಕರು ಮೊದಲ ಮೂರು ದಿನಗಳ ಕಾಲ ಮದ್ಯ ದಾಸ್ತಾನು ಮಾಡಿಕೊಂಡಿರುವುದರಿಂದ ಮತ್ತೆ ಹೆಚ್ಚಾಗಿ ಖರೀದಿಸುತ್ತಿಲ್ಲ. ಆದರೂ ಸರಾಸರಿ ನಿತ್ಯ 60 ಕೋಟಿ ರು. ವಹಿವಾಟು ನಡೆಯುತ್ತಿದೆ. ಬಾರ್‌ ಅಂಡ್‌ ರೆಸ್ಟೋರೆಂಟ್‌ ದಾಸ್ತಾನು ಸಂಪೂರ್ಣ ಖಾಲಿಯಾಗಿದೆ. ಸರ್ಕಾರ ಲಾಕ್‌ಡೌನ್‌ ಸಡಿಲಿಸಿ ಅವಕಾಶ ನೀಡಿದರೆ ಮತ್ತೆ ಅವರಿಗೆ ಡಿಪೋಗಳಿಂದ ಪೂರೈಸಲಾಗುವುದು.

- ಯಶ್ವಂತ್‌, ಅಬಕಾರಿ ಇಲಾಖೆ ಆಯುಕ್ತರು.

Follow Us:
Download App:
  • android
  • ios