Asianet Suvarna News Asianet Suvarna News

ರಾಜ್ಯ ಸರ್ಕಾರದಿಂದ ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್ ! ಮನೆಗೆ ಹಣ

ಪಿಂಚಣಿದಾರರಿಗೆ ಇಲ್ಲಿದೆ ಗುಡ್ ನ್ಯೂಸ್.. ರಾಜ್ಯ ಸರ್ಕಾರವು ಇದೀಗ ಮಹತ್ವದ ಯೋಜನೆಯೊಂದನ್ನು ರೂಪಿಸಿದ್ದು ಇನ್ಮುಂದೆ ಪರದಾಡಬೇಕಾದ ಅವಶ್ಯಕತೆ ಇಲ್ಲ. 

Pensioners can get Money at doorstep in Karnataka snr
Author
Bengaluru, First Published Jan 28, 2021, 8:41 AM IST

 ಬೆಂಗಳೂರು (ಜ.28):  ಸರ್ಕಾರದ ಸಂಧ್ಯಾ ​ಸುರಕ್ಷಾ, ವೃದ್ಧಾಪ್ಯ ವೇತನಕ್ಕೆ ಅರ್ಹರಾದವರು ಇನ್ಮುಂದೆ ಅರ್ಜಿ ಹಿಡಿದು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾಗಿಲ್ಲ. ಯೋಜನೆಗೆ ಅರ್ಹರಾದವರ ಮನೆ ಬಾಗಿಲಿಗೇ ಸರ್ಕಾರ ಅಧಿಕಾರಿಗಳನ್ನು ಕಳುಹಿಸಿ ಪಿಂಚಣಿ ಮಂಜೂರು ಮಾಡಲಿದೆ. ಇದಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ನಮ್ಮ ಸರ್ಕಾರ ‘ಮನೆ ಬಾಗಿಲಿಗೆ ಮಾಸಾಶನ’ ಅಭಿಯಾನ ಆರಂಭಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಅಲ್ಲದೆ, ಸಾಮಾಜಿಕ ಭದ್ರತೆ ಯೋಜನೆಗಳಡಿ ಜಾರಿಗೊಳಿಸಿರುವ ಸರ್ಕಾರದ ಈ ಕಾರ್ಯಕ್ರಮಗಳು ಹೆಚ್ಚು ಮಂದಿಗೆ ಸಿಗಲೆಂದು ಇದುವರೆಗೆ ಇದ್ದ 12 ಸಾವಿರ ರು. ವಾರ್ಷಿಕ ಆದಾಯ ಮಿತಿಯನ್ನು 35 ಸಾವಿರ ರು.ಗಳಿಗೆ ಹೆಚ್ಚಿಸಲಾಗಿದೆ. 60 ವರ್ಷ ಮೀರಿದ ವಾರ್ಷಿಕ 35 ಸಾವಿರಕ್ಕಿಂತ ಕಡಿಮೆ ಆದಾಯ ಮಿತಿ ಹೊಂದಿರುವ ಪ್ರತಿಯೊಬ್ಬ ಫಲಾನುಭವಿಯ ಮನೆ ಬಾಗಿಲಿಗೇ ಬಂದು ಸರ್ಕಾರ ಪಿಂಚಿಣಿ ಮಂಜೂರು ಮಾಡಿಕೊಡಲಿದೆ ಎಂದು ಹೇಳಿದರು.

'ಪಿಂಚಣಿ ಹಣ ಮನೆ ಬಾಗಿಲಿಗೆ' ..

ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ‘ಮನೆ ಬಾಗಿಲಿಗೆ ಮಾಸಾಶನ’ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಹಾಗೂ ಅಭಿಯಾನಕ್ಕೆ ಸಂಬಂಧಿಸಿದ ‘ನವೋದಯ’ ಆ್ಯಪ್‌- ತಂತ್ರಾಂಶ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಆರ್ಥಿಕವಾಗಿ ಹಿಂದುಳಿದ ಹಿರಿಯ ನಾಗರಿಕರು, ವಿಧವೆಯರು, ಅಂಗವಿಕಲರು ಸೇರಿದಂತೆ ಇತರರಿಗೆ ಆರ್ಥಿಕ, ಸಾಮಾಜಿಕ ಭದ್ರತೆ ಕಲ್ಪಿಸಲು ವೃದ್ಧಾಪ್ಯ ವೇತನ ಸೇರಿದಂತೆ ನಾನಾ ಯೋಜನೆಗಳಡಿ ಮಾಸಾಶನ ನೀಡಲಾಗುತ್ತಿದೆ. ಯೋಜನೆಗಳಿಗೆ ಅರ್ಹರಾದವರು ಅರ್ಜಿ ಸಲ್ಲಿಕೆ, ದಾಖಲೆಗಳ ಸಲ್ಲಿಕೆಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದು, ಅವುಗಳಿಗೆ ಅನುಮೋದನೆ ಸಿಗುವುದು ತಡವಾಗುವ ಆರೋಪಗಳಿದ್ದವು. ಜೊತೆಗೆ ಯೋಜನೆಗೆ ಒಳಪಟ್ಟವರಿಗೆ ಸರ್ಕಾರ ಸಮಯಕ್ಕೆ ಸರಿಯಾಗಿ ಮಾಸಾಶನ ಬಿಡುಗಡೆ ಮಾಡಿದರೂ ಮಧ್ಯವರ್ತಿಗಳು ಫಲಾನುಭವಿಗಳಿಗೆ ಪಿಂಚಣಿ ಹಣ ತಲುಪಿಸಲು ಸತಾಯಿಸುತ್ತಿದ್ದರು.

ಇದಕ್ಕೆಲ್ಲಾ ಕಡಿವಾಣ ಹಾಕಲು ಮೊದಲ ಹಂತದಲ್ಲಿ ‘ವೃದ್ಧಾಪ್ಯ ವೇತನ ಮತ್ತು ಸಂದ್ಯಾಸುರಕ್ಷಾ ಯೋಜನೆ’ಗಳಿಗೆ ‘ಮನೆಬಾಗಿಲಿಗೇ ಮಾಸಾಶನ’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಉಡುಪಿ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿರುವ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ. ನಂತರದ ದಿನಗಳಲ್ಲಿ ಹಂತ ಹಂತವಾಗಿ ವಿಧವಾ ವೇತನ, ಅಂಗವಿಕಲರ ಮಾಸಾಶನ ಯೋಜನೆಗಳಿಗೂ ವಿಸ್ತರಿಸಲಾಗುವುದು ಎಂದರು.

ಮೃತರ ಹೆಸರಲ್ಲಿ ಕೋಟಿ ಕೋಟಿ ಪಿಂಚಣಿ ಸಂದಾಯ ...

ಕಂದಾಯ ಸಚಿವ ಆರ್‌.ಅಶೋಕ್‌ ಮಾತನಾಡಿ, ಮನೆ ಬಾಗಿಲಿಗೆ ಮಾಸಾಶನ ಅಭಿಯಾನದಿಂದ ಫಲಾನುಭವಿಗಳಿಗೆ ಮಧ್ಯವರ್ತಿಗಳ ಹಾವಳಿಗೆ ತಡೆ ಹಾಗೂ ಅನರ್ಹರ ಪತ್ತೆಯಿಂದ ಸರ್ಕಾರಕ್ಕೂ 400ರಿಂದ 500 ಕೋಟಿ ರು. ಉಳಿತಾಯವಾಗಲಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಗಳಲ್ಲಿ ಮಧ್ಯವರ್ತಿಗಳು 35-40 ಮಂದಿಯ ದಾಖಲೆಗಳನ್ನಿಟ್ಟುಕೊಂಡು ಅವರ ಹೆಸರಿನಲ್ಲಿ ಪಿಂಚಣಿ ಪಡೆದು ವಂಚಿಸುವುದು. ಮೃತಪಟ್ಟವರ ಹೆಸರಿನಲ್ಲಿ ಪಿಂಚಣಿ ಪಡೆಯುವುದು ನಡೆದಿತ್ತು. ಪ್ರಕರಣವೊಂದರಲ್ಲಿ ಫಲಾನುಭವಿ ಮೃತಪಟ್ಟು ಅವರ ಖಾತೆಯಲ್ಲಿ 16,000 ರು. ಹಣವಿರುವುದು ಪತ್ತೆಯಾಗಿದೆ. ಹೊಸ ತಂತ್ರಾಂಶದಿಂದ ಇದಕ್ಕೆಲ್ಲಾ ಕಡಿವಾಣ ಬೀಳಲಿದ್ದು, ವಾರ್ಷಿಕ 400- 500 ಕೋಟಿ ರು. ಉಳಿತಾಯವಾಗಲಿದೆ ಎಂದು ಹೇಳಿದರು.

ಕಂದಾಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಮಾತನಾಡಿ, ಪಿಂಚಣಿದಾರರ ಆಧಾರ್‌ ಮಾಹಿತಿಯನ್ನು ಭೌತಿಕ ಪರಿಶೀಲನೆ ಮೂಲಕ ಸಂಗ್ರಹಿಸಲಾಗುತ್ತಿದ್ದು, 3.02 ಲಕ್ಷ ಮರಣ ಪ್ರಕರಣ ಹಾಗೂ 1.17 ಲಕ್ಷ ಅನರ್ಹ ಪಿಂಚಣಿದಾರ ರದ್ಧತಿಯಿಂದ ವಾರ್ಷಿಕ 504 ಕೋಟಿ ರೂ. ಉಳಿತಾಯವಾಗಿದೆ ಎಂದು ಮಾಹಿತಿ ನೀಡಿದರು.

ಸಮಾರಂಭದಲ್ಲಿ ಸಾಂಕೇತಿಕವಾಗಿ ಕೆಲ ಫಲಾನುಭವಿಗಳಿಗೆ ಬಿ.ಎಸ್‌.ಯಡಿಯೂರಪ್ಪ ಮಾಸಾಶನ ಪತ್ರ ವಿತರಿಸಿದರು. ವಿಧಾನ ಪರಿಷತ್‌ ಸದಸ್ಯ ರಮೇಶ್‌ಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್‌. ಜೀವರಾಜ್‌, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮರಿಸ್ವಾಮಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ನಿರ್ದೇಶಕ ಜಿ.ಪ್ರಭು ಉಪಸ್ಥಿತರಿದ್ದರು.

Follow Us:
Download App:
  • android
  • ios