ಮನೆ ಬಾಗಿಲಿಗೆ ಮಾಸಾಶನ ಸ್ಥಗಿತದಿಂದ ಜನರ ಪರದಾಟ: ಅಂಗವಿಕಲರು, ವೃದ್ಧರಿಗೆ ಹೆಚ್ಚು ತೊಂದರೆ
ವಿಕಲಚೇತನರು, ವಿಧವೆಯರು, ವೃದ್ಧರು ಇತ್ಯಾದಿ ದುರ್ಬಲ ವರ್ಗಗಳಿಗೆ ಸರ್ಕಾರದಿಂದ ದೊರೆಯುವ ಸಾಮಾಜಿಕ ಭದ್ರತಾ ಪಿಂಚಣಿ (ಮಾಸಾಶನ) ಈಗ ಮನೆ ಬಾಗಿಲಿಗೆ ಬಾರದೆ ರಾಜ್ಯದ ಸಾವಿರಾರು ಮಂದಿ ಬಡವರು ಸಂಕಷ್ಟಕ್ಕೆ ತಳ್ಳಲ್ಪಟ್ಟಿದ್ದಾರೆ.
ಸಂದೀಪ್ ವಾಗ್ಲೆ
ಮಂಗಳೂರು (ಜ.22): ವಿಕಲಚೇತನರು, ವಿಧವೆಯರು, ವೃದ್ಧರು ಇತ್ಯಾದಿ ದುರ್ಬಲ ವರ್ಗಗಳಿಗೆ ಸರ್ಕಾರದಿಂದ ದೊರೆಯುವ ಸಾಮಾಜಿಕ ಭದ್ರತಾ ಪಿಂಚಣಿ (ಮಾಸಾಶನ) ಈಗ ಮನೆ ಬಾಗಿಲಿಗೆ ಬಾರದೆ ರಾಜ್ಯದ ಸಾವಿರಾರು ಮಂದಿ ಬಡವರು ಸಂಕಷ್ಟಕ್ಕೆ ತಳ್ಳಲ್ಪಟ್ಟಿದ್ದಾರೆ. ಮಾಸಾಶನ ಪಡೆಯಲು ಬ್ಯಾಂಕ್, ಅಂಚೆ ಕಚೇರಿಗೆ ಹೋಗಲು ಸಾಧ್ಯವಾಗದೆ ತೀರಾ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ದಶಕಗಳಿಂದ ಮಾಸಾಶನವನ್ನು ಪೋಸ್ಟ್ ಮ್ಯಾನ್ ಆಯಾ ಫಲಾನುಭವಿಯ ಮನೆ ಬಾಗಿಲಿಗೇ ತಂದು ಕೊಡುತ್ತಿದ್ದರು. ಆದರೆ ನಾಲ್ಕೈದು ವರ್ಷಗಳಿಂದ ಈ ಪದ್ಧತಿ ನಿಂತಿದೆ. ಬಹಳಷ್ಟು ಜನರಿಗೆ ಹಣ ಬ್ಯಾಂಕಲ್ಲಿದ್ದರೂ ಜೀವನ ನಿರ್ವಹಣೆಗೆ ಸಿಗದೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ಯಾಕೆ ಈ ಕಷ್ಟ?: ಕೇಂದ್ರ ಸರ್ಕಾರವು ಕೆಲ ವರ್ಷಗಳ ಹಿಂದೆ ನೇರ ನಗದು ವರ್ಗಾವಣೆ ಪದ್ಧತಿಯನ್ನು ನಿಲ್ಲಿಸಿದ ಬಳಿಕ ಮನೆ ಬಾಗಿಲಿಗೆ ಹಣ ತಂದು ಕೊಡುವ ಮನಿ ಆರ್ಡರ್ ಪದ್ಧತಿ ಸ್ಥಗಿತಗೊಂಡಿದೆ. ಹಾಗಾಗಿ ಮಾಸಾಶನ ನೇರವಾಗಿ ಫಲಾನುಭವಿಗಳ ಹೆಸರಿನಲ್ಲಿರುವ ಅಂಚೆ ಅಥವಾ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. ಅದನ್ನು ಪಡೆಯಬೇಕಾದರೆ ಖುದ್ದು ಅಂಚೆ ಕಚೇರಿ ಅಥವಾ ಬ್ಯಾಂಕ್‌ಗೇ ಹೋಗಬೇಕಾದ ಪರಿಸ್ಥಿತಿ.
Prajadwani Bus Yatra: ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ
ತಲುಪುತ್ತಿಲ್ಲ ಸೌಕರ್ಯ: ಸಾಮಾಜಿಕ ಭದ್ರತಾ ಪಿಂಚಣಿ ಅಡಿ 9 ವಿಧದ ದುರ್ಬಲ ವರ್ಗಗಳಿಗೆ ಸರ್ಕಾರದಿಂದ ಪ್ರತಿ ತಿಂಗಳು ಪಿಂಚಣಿ ಸಂದಾಯವಾಗುತ್ತಿದೆ. ಮಾಸಾಶನ ಪಡೆಯುವವರಲ್ಲಿ ಹೆಚ್ಚಿನವರು ವೃದ್ಧರು, ಅನಕ್ಷರಸ್ಥರು, ಮನೆಯಿಂದ ಹೊರಹೋಗಲಾಗದ ಅಂಗವಿಕಲರೇ ಇದ್ದಾರೆ. ಅವರಲ್ಲಿ ಅನೇಕರು ಹಾಸಿಗೆ ಹಿಡಿದಿದ್ದರೆ, ಬಹಳಷ್ಟುಮಂದಿ ವೀಲ್ ಚೇರ್‌ನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮಕ್ಕಳಿಲ್ಲದೆ ಒಂಟಿಯಾಗಿರುವ ವೃದ್ಧರು, ಮಕ್ಕಳಿಂದ ನಿರ್ಲಕ್ಷ್ಯಕ್ಕೊಳಗಾಗಿರುವವರು ಸಾಕಷ್ಟುಸಂಖ್ಯೆಯಲ್ಲಿದ್ದು, ಅವರಿಗೆ ಅಂಚೆ ಕಚೇರಿಗೆ ಹೋಗಲು ಸಾಧ್ಯವಾಗದೆ, ಪಿಂಚಣಿಯನ್ನು ತಂದು ಕೊಡುವವರೂ ಇಲ್ಲದೆ ಸಮಸ್ಯೆಯಾಗಿದೆ.
ಹಳ್ಳಿಗಳಲ್ಲಿ ಅಂಚೆ ಕಚೇರಿಗೆ ಹೋಗಬೇಕಾದರೆ 2-3 ಕಿ.ಮೀ. ಕೆಲವೊಮ್ಮೆ ಐದಾರು ಕಿ.ಮೀ. ನಡೆಯಬೇಕು. ಬ್ಯಾಂಕ್‌ಗೆ ಹೋಗಲು ಇನ್ನೂ ದೂರ. ಆದರೂ ಮೈಯಲ್ಲಿ ಅಲ್ಪಸ್ವಲ್ಪ ಕಸುವು ಇರುವವರು ರಿಕ್ಷಾದಲ್ಲಿ ನೂರಾರು ರು. ಖರ್ಚು ಮಾಡಿ ಮಾಸಾಶನ ಪಡೆಯುತ್ತಿದ್ದಾರೆ. ಇನ್ನೂ ಕೆಲವರು ನೇರ ನಗದು ಪಾವತಿ ನಿಂತ ಬಳಿಕ ಪಿಂಚಣಿಯೇ ಸ್ಥಗಿತವಾಗಿದೆ ಎಂದು ಭಾವಿಸಿ ತಿಳುವಳಿಕೆ ಇಲ್ಲದೆ ಉಳಿದಿದ್ದಾರೆ.
ಅಂಚೆಯಣ್ಣನಿಗೇ ಲಂಚ!: ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಆರಂಭವಾದ ಬಳಿಕ ಮಾಸಾಶನವನ್ನು ಮನೆಗೆ ತಂದು ಕೊಡಲು ಪೋಸ್ಟ್‌ಮ್ಯಾನ್ 300- 400 ರು. ಲಂಚ ಕೇಳುವ ವಿದ್ಯಮಾನಗಳು ಅಲ್ಲಲ್ಲಿ ನಡೆಯುತ್ತಿವೆ. ಸಿಗೋದೆ ಸಾವಿರ ರು. ಆಸುಪಾಸಿನ ಪಿಂಚಣಿ, ಅದರಲ್ಲಿ ಲಂಚ ನೀಡಿಯಾದರೂ ಇದ್ದಷ್ಟುಹಣ ಸಿಗಲಿ ಎನ್ನುವ ಪರಿಸ್ಥಿತಿಯಲ್ಲಿ ಅನೇಕ ಫಲಾನುಭವಿಗಳಿದ್ದಾರೆ. ‘ಪೋಸ್ಟ್ ಮ್ಯಾನ್ ಲಂಚ ಕೇಳುವ ಘಟನೆ ನಡೆದರೆ ಅಂಚೆ ಇಲಾಖೆಗೆ ದೂರು ನೀಡಿ. ಈ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮಂಗಳೂರು ವಲಯ ಅಂಚೆ ಅಧೀಕ್ಷಕ ಶ್ರೀಹರ್ಷ ತಿಳಿಸಿದ್ದಾರೆ.
Namma Metro ಪಿಲ್ಲರ್ ದುರಂತ: ಮೆಟ್ರೋ ಎಂಡಿ ಅಜುಂ ಪರ್ವೇಜ್‌ಗೆ ಪೊಲೀಸರ ಗ್ರಿಲ್
ಮಂಗಳೂರು ವಿಭಾಗದಲ್ಲಿ ಮಾತ್ರ ಮನೆ ಬಾಗಿಲಿಗೆ: ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುವವರ ಕಷ್ಟಮನಗಂಡು ಅಂಚೆ ಇಲಾಖೆಯ ಮಂಗಳೂರು ವಲಯದಲ್ಲಿ ಮನೆ ಬಾಗಿಲಿಗೆ ಮಾಸಾಶನ ತಲುಪಿಸುವ ಯೋಜನೆಗೆ ಮರು ಚಾಲನೆ ನೀಡಲಾಗಿದೆ. ಇಡೀ ರಾಜ್ಯದಲ್ಲಿ ಬೇರೆಲ್ಲೂ ಈ ಪದ್ಧತಿ ಶುರುವಾಗಿಲ್ಲ. ಇದರ ಪ್ರಯೋಜನ ಪಡೆಯಲು ಫಲಾನುಭವಿಗಳು ಅಂಚೆ ಕಚೇರಿಗೆ ಹೋಗಿ ಖಾತೆಗೆ ಸಂದಾಯವಾಗುವ ಹಣವನ್ನು ಮನಿ ಆರ್ಡರ್ ಮೂಲಕ ಮನೆಗೆ ತಲುಪಿಸುವಂತೆ ಅರ್ಜಿ ನೀಡಬೇಕು. ಈ ಸೇವೆ ನೀಡಲು 20 ರು.ಗೆ 1 ರು.ನಂತೆ ಅಂಚೆ ಇಲಾಖೆಗೆ ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ (ಅಂದರೆ ಒಂದು ಸಾವಿರ ರು.ಗೆ ಕೇವಲ 50 ರುಪಾಯಿ). ಇಷ್ಟುಮಾಡಿದರೆ ಮೊದಲಿಂತೆ ಪೋಸ್ಟ್ ಮ್ಯಾನ್ ಮನೆ ಬಾಗಿಲಿಗೇ ಪಿಂಚಣಿ ತಂದುಕೊಡುತ್ತಾರೆ ಎಂದು ಶ್ರೀಹರ್ಷ ಹೇಳುತ್ತಾರೆ. ಈ ಮಾದರಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಬೇಡಿಕೆ ಹೆಚ್ಚಿದೆ.