ಬೆಂಗಳೂರು[ಡಿ.03]: ‘ಕೆಲವರು ನಮ್ಮನ್ನು ಕೋಮುವಾದಿಗಳೆನ್ನುತ್ತಾರೆ. ಆದರೆ ನಾವು ಕೋಮುವಾದಿಗಳಲ್ಲ, ಪ್ರೇಮವಾದಿಗಳು ಮತ್ತು ರಾಮವಾದಿಗಳು’ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಭಾನುವಾರ ಬಸವನಗುಡಿ ನ್ಯಾಷನಲ್‌ ಕಾಲೇಜು ಆವರಣದಲ್ಲಿ ವಿಶ್ವ ಹಿಂದೂ ಪರಿಷದ್‌ ಹಮ್ಮಿಕೊಂಡಿದ್ದ ‘ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕಾಗಿ ಜನಾಗ್ರಹ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಮ ಜನ್ಮಭೂಮಿಯಲ್ಲೇ ರಾಮ ಮಂದಿರ ನಿರ್ಮಾಣ ಆಗಬೇಕು. ಶ್ರೀರಾಮ ರಾಷ್ಟ್ರದ ಸ್ವಾಭಿಮಾನದ ಪ್ರಶ್ನೆ. ನಾವೆಲ್ಲ ಕಟಿಬದ್ಧರಾಗಿ ಸಂಘಟತರಾಗಿ ಹೋರಾಡಬೇಕಾದ ಸಂದರ್ಭ ಬಂದಿದೆ. ಯಾವುದೇ ರಾಜಕೀಯ ಪಕ್ಷದ ಪರವಾಗಿ ಮಠಾಧೀಶರು, ಸಂತರು, ಸ್ವಾಮೀಜಿಗಳಿಲ್ಲ. ನಾವು ಜಾತ್ಯತೀತರು. ಬೀಜ ಎಲ್ಲ ಹಣ್ಣುಗಳ ಒಳಗೆ ಇರುತ್ತದೆ. ಗೇರು ಹಣ್ಣಿನಲ್ಲಿ ಮಾತ್ರ ಬೀಜ ಹೊರಗೆ ಇರುತ್ತದೆ. ಅಂತೆಯೇ ನಾವು ರಾಜಕೀಯದಿಂದ ಹೊರಗೆ ಇದ್ದೇವೆ ಎಂದರು.

ನಮ್ಮ ನ್ಯಾಯಾಧೀಶರು ಬೇರೆ ವಿಷಯಗಳಿಗೆ ಆದ್ಯತೆ ಕೊಡುತ್ತಾರೆ. ಆದರೆ ರಾಮಮಂದಿರಕ್ಕೆ ಮಾತ್ರ ಪ್ರಾಮುಖ್ಯತೆ ಕೊಡುತ್ತಿಲ್ಲ. ಇದು ರಾಮನಿಗೆ ಮಾಡಿದ ಅವಮಾನ. ಹಿಂದೂ ಜನಕ್ಕೆ ಮಾಡಿದ ಅಪಮಾನ. ಕೋಟಿ ಕೋಟಿ ಜನರು ರಾಮಮಂದಿರಕ್ಕಾಗಿ ಹೋರಾಟ, ತ್ಯಾಗ ಬಲಿದಾನ ಮಾಡಿದ್ದಾರೆ. ಮಂದಿರ ನಿರ್ಮಾಣದ ನಿರೀಕ್ಷೆಯಲ್ಲಿದ್ದಾರೆ. ಆದರೆ ನ್ಯಾಯಾಲಯ ಆದ್ಯತೆ ನೀಡುತ್ತಿಲ್ಲ. ಅಲ್ಲಿ ಪೂರ್ಣ ಪರಿವರ್ತನೆಯಾಗಬೇಕು. ವಿಳಂಬವಾಗದೆ ಬೇಗ ನ್ಯಾಯದಾನ ಸಿಗಬೇಕು ಎಂದು ಆಗ್ರಹಿಸಿದರು.

ರಾಮ ಭಾರತದ ಮಹಾಪುರುಷ. ಹಿಂದು, ಕ್ರೈಸ್ತ, ಮುಸ್ಲಿಮರು ಸಹ ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ಕೊಡಬೇಕು. ಮುಸ್ಲಿಂ ಬಾಂಧವರಿಗೆ ಒಳ್ಳೆಯ ಅವಕಾಶವಿದು. ಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಬೆಂಬಲ ಕೊಟ್ಟರೆ ದೇಶದಲ್ಲಿ ಸಾಮರಸ್ಯ ಇರುತ್ತದೆ. ಹನುಮಂತ ಉದಯಿಸಿದ ನಾಡು ಕರ್ನಾಟಕ. ನಾವು ಹನುಮಂತನಂತೆ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಕಾರ್ಯಗತ ಆಗುವವರೆಗೂ ಹೋರಾಟ ಮಾಡಬೇಕು. ರಾಮ ಕಾರ್ಯ ಆಗದೆ ನಮಗೆ ವಿಶ್ರಾಂತಿ ಇಲ್ಲ. ನಮ್ಮ ಹೋರಾಟಕ್ಕೆ ವಿರಾಮವಿಲ್ಲ ಎಂದು ಘೋಷಿಸಿದರು.

ಪ್ರಧಾನಿ ಬಳಿ ನಿಯೋಗಕ್ಕೆ ಸಲಹೆ

ರಾಮ ಮಂದಿರ ನಿರ್ಮಾಣಕ್ಕಾಗಿ ಸಂತರ, ಸ್ವಾಮೀಜಿಗಳ ನಿಯೋಗವೊಂದು ಪ್ರಧಾನಿಯನ್ನು ಭೇಟಿ ಮಾಡಬೇಕು ಎಂದು ಇದೇ ವೇಳೆ ಪೇಜಾವರ ಶ್ರೀಗಳು ಸಲಹೆ ನೀಡಿದರು.

ಇದುವರೆಗೂ ಯಾಕೆ ಸುಗ್ರೀವಾಜ್ಞೆ ಮಾಡಿಲ್ಲ ಎಂದು ಪ್ರಧಾನಿಯನ್ನು ಕೇಳಬೇಕು. ಶೀಘ್ರವೇ ರಾಮ ಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಬೇಕು ಎಂದು ನಿಯೋಗವು ಸರ್ಕಾರದ ಮೇಲೆ ಒತ್ತಡ ತರಬೇಕು. ಜತೆಗೆ ಈ ಕುರಿತು ಸಂಸತ್ತಿನಲ್ಲಿ ಗೊತ್ತುವಳಿ ಸ್ವೀಕರಿಸಬೇಕು. ಇಲ್ಲದಿದ್ದರೆ ಉಪವಾಸ ಮಾಡಲು ಕೂಡ ಸಿದ್ಧರಾಗಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಹೇಳಿದರು.