ಬೆಂಗಳೂರು [ಜ.31]:  ಮೂರು ವರ್ಷಗಳ ನಂತರ ನಂದಿನಿ ಹಾಲು ಮತ್ತು ಮೊಸರಿನ ದರ ಪ್ರತಿ ಲೀಟರ್‌ಗೆ ತಲಾ 2 ರು. ಏರಿಕೆ ಮಾಡಲು ಸರ್ಕಾರ ಒಪ್ಪಿಗೆ ನೀಡಿದ್ದು, ಪರಿಷ್ಕೃತ ದರ ಫೆ.1ರಿಂದ ಜಾರಿಗೆ ಬರಲಿದೆ.

ಕರ್ನಾಟಕ ಹಾಲು ಮಹಾಮಂಡಳಿ ಪ್ರತಿ ಲೀಟರ್‌ ಹಾಲಿನ ದರವನ್ನು ಎರಡು ಅಥವಾ ಮೂರು ರು. ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ರಾಜ್ಯ ಸರ್ಕಾರ ಪ್ರತಿ ಲೀಟರ್‌ಗೆ ಎರಡು ರು. ದರ ಹೆಚ್ಚಿಸಲು ಹಸಿರು ನಿಶಾನೆ ತೋರಿಸಿದೆ.

2016ರಲ್ಲಿ ಹಾಲಿನ ದರವನ್ನು 2 ರು. ಹೆಚ್ಚಿಸಲಾಗಿತ್ತು. ಆನಂತರ ಇಲ್ಲಿಯವರೆಗೂ ಹಾಲಿನ ದರ ಏರಿಕೆ ಮಾಡಿರಲಿಲ್ಲ. ಹೀಗಾಗಿ ಹಾಲು ಒಕ್ಕೂಟಗಳ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿದ್ದರಿಂದ ಹಾಲಿನ ದರ ಹೆಚ್ಚಳ ಮಾಡುವಂತೆ ಕೆಎಂಎಫ್‌ಗೆ ಪ್ರಸ್ತಾವನೆ ಸಲ್ಲಿಸಿದ್ದವು. ಜ.17ರಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಲಿನ ದರ ಹೆಚ್ಚಳಕ್ಕೆ ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ನಿರ್ಧಾರ ಕೈಗೊಂಡಿತ್ತು. ಪ್ರತಿ ಲೀಟರ್‌ ಹಾಲಿಗೆ 2ರಿಂದ 3 ರು. ಹೆಚ್ಚಳ ಮಾಡುವಂತೆ ಕೆಎಂಎಫ್‌ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಹಾಲು, ಮೊಸರಿನ ದರ ಏರಿಕೆ: ರೈತರ ಹೆಸರಲ್ಲಿ ಗ್ರಾಹರಿಗೆ ಬರೆ..!

ಆದರೆ, ಸರ್ಕಾರ ಎರಡು ರು. ದರ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಈ ದರ ಏರಿಕೆಯಿಂದ ದೊರೆಯುವ ಎರಡು ರು. ಮೊತ್ತದಲ್ಲಿ ಶೇ.50ರಷ್ಟುಅರ್ಥಾತ್‌ ಒಂದು ರುಪಾಯಿಯನ್ನು ಜಿಲ್ಲಾ ಹಾಲು ಒಕ್ಕೂಟಗಳ ಆರ್ಥಿಕತೆಗೆ ಅನುಗುಣವಾಗಿ ಹಾಲು ಉತ್ಪಾದಕರಿಗೆ ಪಾವತಿಸಲು ತೀರ್ಮಾನಿಸಲಾಗಿದೆ. ಮಹಾಮಂಡಳದ ಈ ನಿರ್ಧಾರದಿಂದ ರಾಜ್ಯ ಸರ್ಕಾರ ಪ್ರತಿ ಲೀಟರ್‌ ಹಾಲಿಗೆ ಕೊಡುತ್ತಿರುವ 5 ರು. ಪ್ರೋತ್ಸಾಹಧನಕ್ಕೆ ಮಂಡಲವು ಹೆಚ್ಚುವರಿಯಾಗಿ ಒಂದು ರು. ಸೇರಿಸಿ ಒಟ್ಟು ಆರು ರು.ಗಳನ್ನು ಪ್ರತಿ ಲೀಟರ್‌ ಹಾಲಿಗೆ ಪ್ರೋತ್ಸಾಹಧನವಾಗಿ ರೈತರಿಗೆ ನೀಡಲಿದೆ.

ರಾಸುಗಳಿಗೆ 50 ಸಾವಿರ ರು. ವಿಮೆ:

ಬೆಲೆಯೇರಿಕೆಯ ಪೈಕಿ ಉಳಿದ ಒಂದು ರು.ನಲ್ಲಿ 40 ಪೈಸೆ ಮೊತ್ತವನ್ನು ಜಾನುವಾರಗಳ ವಿಮಾ ಯೋಜನೆಗೆ ನೀಡಲು ಮಹಾಮಂಡಲ ತೀರ್ಮಾನಿಸಿದೆ. ಪ್ರಸ್ತುತ ರಾಜ್ಯದಲ್ಲಿ 9 ಲಕ್ಷ ರೈತರು ಸಹಕಾರ ಸಂಘಗಳಿಗೆ ಹಾಲು ಪೂರೈಸುತ್ತಿದ್ದು, ಅಂದಾಜು 12 ಲಕ್ಷ ಉತ್ತಮ ತಳಿಯ ಹಸುಗಳು, ಎಮ್ಮೆಗಳು ಈ ವ್ಯವಸ್ಥೆಯಲ್ಲಿವೆ. ರೈತರ ಜೀವನಕ್ಕೆ ಆಸರೆಯಾದ ಈ ಜಾನುವಾರುಗಳು ಆಕಸ್ಮಿಕ ಮರಣಕ್ಕೆ ಒಳಗಾದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ರೈತರನ್ನು ಇಂತಹ ಸ್ಥಿತಿಯಿಂದ ಪಾರು ಮಾಡಲು ಮಹಾಮಂಡಲ ವಿಮಾ ಯೋಜನೆ ಹೊಂದಿದೆ. ಈ ವಿಮಾ ಯೋಜನೆ ಅನ್ವಯ ಪ್ರಸ್ತುತ ಪ್ರತಿ ಹಸು ಅಥವಾ ಎಮ್ಮೆ ಆಕಸ್ಮಿಕ ಮರಣಕ್ಕೆ ಒಳಗಾದರೆ ರೈತರಿಗೆ 50 ಸಾವಿರ ರು. ಲಭ್ಯವಾಗುವಂತೆ ಮಾಡಲಾಗಿದೆ. ಈ ವಿಮಾ ಮೊತ್ತದ ಶೇ.75ರಷ್ಟುಭಾಗವನ್ನು ಭರಿಸಲು ಒಕ್ಕೂಟಗಳಿಗೆ 40 ಪೈಸೆಯನ್ನು ನೀಡಲು ಕೆಎಂಎಫ್‌ ತೀರ್ಮಾನಿಸಿದೆ.

ಉಳಿದಂತೆ ನಂದಿನಿ ಹಾಲು ಮಾರಾಟ ಮಾಡುವ ಬೂತ್‌ ಏಜೆಂಟ್‌ಗಳಿಗೆ ಪ್ರತಿ ಲೀಟರ್‌ ಹಾಲಿಗೆ 40 ಪೈಸೆ ಕಮಿಷನ್‌ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗೆ ಪ್ರತಿ ಲೀಟರ್‌ಗೆ 20 ಪೈಸೆಯಂತೆ ಪ್ರೋತ್ಸಾಹಧನ ನೀಡಲು ಕೆಎಂಎಫ್‌ ನಿರ್ಧರಿಸಿದೆ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ನಂದಿನಿ ಹಾಲು ಹಾಗೂ ಮೊಸರಿನ ಮಾದರಿ ಇಂದಿನ ದರ ಪರಿಷ್ಕೃತ ದರ

ಟೋನ್ ಹಾಲು 35 ರು. 37ರು

ಹೋಮೋಜಿನೈಸ್ಡ್‌ ಟೋನ್ಡ್ ಹಾಲು 36ರು. 38ರು.

ಡಬಲ್‌ ಟೋನ್‌್ಡ ಹಾಲು 34 ರು. 36ರು

ಹೋಮೋಜಿನೈಸ್ಡ್‌ ಹಸುವಿನ ಹಾಲು 39ರು. 41ರು.

ಶುಭಂ ಹಾಲು 41ರು. 43ರು.

ಸಮೃದ್ಧಿ ಹಾಲು 44ರು. 46ರು.

ಶುಭಂ ಗೋಲ್ಡ್‌ ಹಾಲು 41ರು. 43ರು.

ಮೊಸರು ಅರ್ಧ ಲೀಟರ್‌ಗೆ 21 ರು. 22ರು.

ಮೊಸರು ಒಂದು ಲೀಟರ್‌ಗೆ 41ರು. 43ರು.

ಹಾಲಿನ ದರ ಹೆಚ್ಚಳ ಅನಿವಾರ್ಯವಾಗಿತ್ತು. ಪ್ರತಿ ಲೀಟರ್‌ಗೆ ನಾಲ್ಕು ರು. ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇತ್ತು. ಆದರೆ, ಜನರ ಮೇಲೆ ಹೆಚ್ಚಿನ ಹೊರೆಯಾಗಬಾರದು ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎರಡು ರು.ಹೆಚ್ಚಿಸಲಾಗಿದೆ. ಫೆ.1ರಿಂದ ನೂತನ ದರ ಜಾರಿಗೆ ಬರಲಿದೆ.

- ಬಾಲಚಂದ್ರ ಜಾರಕಿಹೊಳಿ, ಅಧ್ಯಕ್ಷ, ಕೆಎಂಎಫ್‌

ಸದ್ಯಕ್ಕೆ ಪ್ಯಾಕೆಟ್‌ ಮೇಲೆ ಹಳೆ ದರ

ಒಕ್ಕೂಟಗಳಲ್ಲಿ ಹಳೆಯ ದರ ಮುದ್ರಿತವಾಗಿರುವ ಹಾಲಿನ ಪ್ಯಾಕೆಟ್‌ಗಳ ದಾಸ್ತಾನಿದ್ದು, ದಾಸ್ತಾನು ಖಾಲಿಯಾಗುವವರೆಗೂ ಹಳೆಯ ದರ ಮುದ್ರಿತ ಪ್ಯಾಕೆಟ್‌ಗಳಲ್ಲಿ ಹಾಲು ಸರಬರಾಜಾಗಲಿದೆ. ಗ್ರಾಹಕರು ಹೊಸ ದರದಲ್ಲಿ ಖರೀದಿಸಿ ಸಹಕರಿಸುವಂತೆ ಕೆಎಂಎಫ್‌ ಮನವಿ ಮಾಡಿದೆ.