Asianet Suvarna News Asianet Suvarna News

Bengaluru patholes: ಮಾಗಡಿ ರೋಡ್‌ ರಸ್ತೆಗುಂಡಿ ಅವಾಂತರಕ್ಕೆ ಮಹಿಳೆ ಬಲಿ!

ಪತಿ ಜತೆಗೆ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಸ್ಕಿಡ್‌ ಆಗಿ ರಸ್ತೆ ಬಿದ್ದ ಮಹಿಳೆ ತಲೆ ಮೇಲೆ ಖಾಸಗಿ ವಾಹನದ ಚಕ್ರ ಹರಿದು ಪತಿಯ ಎದುರೇ ಆಕೆ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಬಳಿ ಗುರುವಾರ ಜರುಗಿದೆ.

Patholes woman dies in Magadi Road road accident at bengaluru rav
Author
First Published Aug 18, 2023, 5:04 AM IST

ಪೀಣ್ಯದಾಸರಹಳ್ಳಿ (ಆ.18) :  ಪತಿ ಜತೆಗೆ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಸ್ಕಿಡ್‌ ಆಗಿ ರಸ್ತೆ ಬಿದ್ದ ಮಹಿಳೆ ತಲೆ ಮೇಲೆ ಖಾಸಗಿ ವಾಹನದ ಚಕ್ರ ಹರಿದು ಪತಿಯ ಎದುರೇ ಆಕೆ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಬಳಿ ಗುರುವಾರ ಜರುಗಿದೆ.

ಅಂಜನಪ್ಪ ಲೇಔಟ್‌ ನಿವಾಸಿ ಸುಮಂಗಲ (60) ಮೃತರು. ಪತಿ ಶರಣಪ್ಪ ಜತೆಗೆ ಮನೆಯಿಂದ ನಗರದ ಕಡೆಗೆ ಬರುವಾಗ ಮಾರ್ಗಮಧ್ಯೆ ಈ ಘಟನೆ ನಡೆದಿದೆ. ದಾವಣಗೆರೆ ಮೂಲದ ಶರಣಪ್ಪ ಹಾಗೂ ಸಂಜನಾ ಚಿಕ್ಕಗೊಲ್ಲರಹಟ್ಟಿಸಮೀಪದ ಅಂಜನಪ್ಪ ಲೇಔಟ್‌ನ ಅಪಾರ್ಚ್‌ಮೆಂಟ್‌ನಲ್ಲಿ ನೆಲೆಸಿದ್ದಾರೆ. ಗುರುವಾರ ಮಧ್ಯಾಹ್ನ 2.30ರ ಸುಮಾರಿಗೆ ದಂಪತಿ ಮನೆಯಿಂದ ನಗರದ ಕಡೆಗೆ ಬರುತ್ತಿದ್ದರು.

Road patholes: ವರ್ಷದ ಮೊದಲ ದಿನಕ್ಕೆ ‘ಗುಂಡಿ ಮುಕ್ತ ರಸ್ತೆ’ ಪಾಲಿಕೆ ಟಾಸ್ಕ್ ಠುಸ್

ಈ ವೇಳೆ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಬಳಿ ದ್ವಿಚಕ್ರ ವಾಹನದ ಮುಂದಿನ ಚಕ್ರಕ್ಕೆ ಕಲ್ಲು ಸಿಲುಕಿ ಸ್ಕಿಡ್‌ ಆದ ಪರಿಣಾಮ ದಂಪತಿ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಹಿಂಬದಿ ಬರುತ್ತಿದ್ದ ಖಾಸಗಿ ಶಾಲೆಯ ವಾಹನದ ಚಕ್ರ ಸುಮಂಗಲ ಅವರ ತಲೆ ಮೇಲೆ ಉರುಳಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸವಾರ ಶರಣಪ್ಪ ಎಡಕ್ಕೆ ಬಿದ್ದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಸ್ಥಳೀಯರ ನೆರವಿನಿಂದ ಸುಮಂಗಲ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದರು. ಅಪಘಾತದ ಘಟನೆ ಬಳಿಕ ಶಾಲಾ ವಾಹನದ ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ವಾಹನವನ್ನು ಜಪ್ತಿ ಮಾಡಿದ್ದು, ಚಾಲಕನ ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಅಮೆಗತಿ ಕಾಮಗಾರಿ: ಸ್ಥಳೀಯರ ಆಕ್ರೋಶ

ಮಾಗಡಿ ರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿರುವ ಪರಿಣಾಮ ರಸ್ತೆಯಲ್ಲಿ ಕಲ್ಲುಗಳು ಕಿತ್ತು ಬಂದಿವೆ. ಬೆಳಗ್ಗೆ ಮತ್ತು ಸಂಜೆ ಹೆಚ್ಚಿನ ವಾಹನಗಳು ಸಂಚರಿಸುವ ಪರಿಣಾಮ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಈ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರ ದುಸ್ತರವಾಗಿದೆ. ಆಮೆಗತಿಯ ಕಾಮಗಾರಿಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಬಹಳ ಕಿರಿಕಿರಿ ಅನುಭವಿಸುವಂತಾಗಿದೆ. ಕಳೆದ ಶನಿವಾರವಷ್ಟೇ ಈ ರಸ್ತೆಯಲ್ಲೇ ಲಾರಿಗೆ ಸಿಲುಕಿ ಯುವಕನೊಬ್ಬ ಮೃತಪಟ್ಟಿದ್ದ. ಈ ಘಟನೆ ಹಸಿರಾಗಿರುವಾಗಲೇ ಖಾಸಗಿ ಶಾಲಾ ವಾಹನಕ್ಕೆ ಮಹಿಳೆ ಬಲಿಯಾಗಿದ್ದಾರೆ. ಕೂಡಲೇ ಸಂಬಂಧಪಟ್ಟವರು ಈ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಆಕ್ರೋಶದಿಂದ ಆಗ್ರಹಿಸಿದರು.

Road Patholes: ಹೊಸ ವರ್ಷಕ್ಕೆ Bengaluru city ಗುಂಡಿ ಮುಕ್ತ!

ಪತ್ನಿಯ ಶವದ ಎದುರು ಪತಿಯ ಗೋಳಾಟ:

ಅಪಘಾತದ ವೇಳೆ ಕಣ್ಣೆದುರೇ ಖಾಸಗಿ ಶಾಲಾ ವಾಹನದ ಚಕ್ರ ಹರಿದು ಪತ್ನಿಯ ತಲೆ ಛಿದ್ರವಾದ ದೃಶ್ಯಕಂಡು ಪತಿ ಶರಣಪ್ಪ ಚೀರಾಡಿದರು. ಪತ್ನಿಯ ಮೃತದೇಹದ ಎದುರು ಕುಳಿತು ಗೋಳಾಡುವ ದೃಶ್ಯ ನೋಡುಗರ ಕಣ್ಣಾಲಿಗಳು ಹನಿಗೂಡುವಂತೆ ಮಾಡಿತು. ಪೊಲೀಸರು ಸ್ಥಳಕ್ಕೆ ಬಂದು ಮೃತದೇಹವನ್ನು ಮುಂದಿನ ಪ್ರಕ್ರಿಯೆಗೆ ಸಾಗಿಸಲು ಮುಂದಾದಾಗ ಶರಣಪ್ಪ ಅವರು ಪತ್ನಿಯ ಮೃತದೇಹ ಹಿಡಿದು ಕಣ್ಣೀರು ಸುರಿಸಿದರು. ಈ ವೇಳೆ ಸ್ಥಳೀಯರು ಶರಣಪ್ಪ ಅವರನ್ನು ಹಿಡಿದು ಸಮಾಧಾನಪಡಿಸಲು ಪ್ರಯತ್ನಿಸಿದರು.

ಕಾರಿಗೆ ಬೈಕ್‌ ಡಿಕ್ಕಿ: ರಸ್ತೆಗೆ ಬಿದ್ದ ಗಾರ್ಡ್‌ ಹರಿದ ಬಿಎಂಟಿಸಿ

ಬೆಂಗಳೂರು: ರಸ್ತೆ ಬದಿ ನಿಂತಿದ್ದ ಕಾರಿಗೆ ಹಿಂದಿನಿಂದ ದ್ವಿಚಕ್ರ ವಾಹನ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಸವಾರನ ಮೇಲೆ ಬಿಎಂಟಿಸಿ ಬಸ್‌ ಚಕ್ರ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪೀಣ್ಯ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಾಗಲಗುಂಟೆ ನಿವಾಸಿ ದಾಸಪ್ಪ(44) ಮೃತ ಸವಾರ. ದ್ವಿಚಕ್ರ ವಾಹನದಲ್ಲಿ ಗುರುವಾರ ಮಧ್ಯಾಹ್ನ 2.45ರ ಸುಮಾರಿಗೆ 8ನೇ ಮೈಲಿ ಕಡೆಯಿಂದ ಸರ್ವಿಸ್‌ ರಸ್ತೆಯಲ್ಲಿ ಬಾಗಲಗುಂಟೆಗೆ ಕಡೆಗೆ ತೆರಳುವಾಗ ಮಾರ್ಗಮಧ್ಯೆ ಮಲ್ನಾಡ್‌ ಹೋಟೆಲ್‌ ಎದುರು ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಮೃತ ದಾಸಪ್ಪ ಕೆಲ ವರ್ಷಗಳಿಂದ ಕುಟುಂಬದೊಂದಿಗೆ ಬಾಗಲಗುಂಟೆಯಲ್ಲಿ ನೆಲೆಸಿದ್ದರು. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಕರ್ತವ್ಯ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರುಳುವಾಗ ಈ ದುರ್ಘಟನೆ ನಡೆದಿದೆ. 8ನೇ ಮೈಲಿ ಬಳಿ ಸರ್ವಿಸ್‌ ರಸ್ತೆಯ ಎಡಭಾಗದಲ್ಲಿ ಕಾರೊಂದನ್ನು ನಿಲುಗಡೆ ಮಾಡಲಾಗಿತ್ತು. ಈ ವೇಳೆ ಹಿಂದಿ ನಿಂದ ದ್ವಿಚಕ್ರ ವಾಹನದಲ್ಲಿ ಬಂದ ದಾಸಪ್ಪ ಕಾರನ್ನು ಗಮನಿಸದೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬಿಎಂಟಿಸಿ ಬಸ್‌ನ ಹಿಂದಿನ ಎಡಚಕ್ರ ದಾಸಪ್ಪ ಮೇಲೆ ಉರುಳಿದೆ. ಈ ವೇಳೆ ದಾಸಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Road pathole: ರಸ್ತೆ ಗುಂಡಿ ಬಗ್ಗೆ ದೂರು ಬಂದರೆ ಕೇಸ್‌ ಹಾಕಿ: ಹೈಕೋರ್ಟ್

ಸರ್ವಿಸ್‌ ರಸ್ತೆಯಲ್ಲಿ ಯಾವುದೇ ಸೂಚನೆ ಇಲ್ಲದೆ ಕಾರು ನಿಲುಗಡೆ ಮಾಡಿದ್ದು, ದಾಸಪ್ಪ ಕಾರು ನಿಂತಿರುವುದನ್ನು ಗಮನಿಸದಿರುವುದು, ಬಿಎಂಟಿಸಿ ಬಸ್‌ ಚಾಲಕ ವೇಗವಾಗಿ ಬಸ್‌ ಚಾಲನೆ ಮಾಡಿದ್ದು ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬಸ್‌ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂಬಂಧ ಪೀಣ್ಯ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios