ನವದೆಹಲಿ[ಜ.21]: ಪರೀಕ್ಷೆ ಬಂತೆಂದರೆ ಆತಂಕಕ್ಕೆ ದೂಡಲ್ಪಡುವ ಹಾಗೂ ಒತ್ತಡಕ್ಕೆ ಸಿಲುಕುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲು ಪ್ರಧಾನಿ ನರೇಂದ್ರ ಮೋದಿ ಅವರು ‘ಪರೀಕ್ಷಾ ಪೇ ಚರ್ಚಾ’ ಮೂಲಕ ಪ್ರಯತ್ನ ನಡೆಸಿದ್ದಾರೆ. ಪರೀಕ್ಷೆ ಎಂದರೆ ಎಲ್ಲವೂ ಅಲ್ಲ ಎಂದು ಸುಮಾರು 2000 ಮಕ್ಕಳಿಗೆ ವಿವರಿಸಿದ ಅವರು, ಖ್ಯಾತ ಕ್ರಿಕೆಟಿಗರಾದ ರಾಹುಲ್‌ ದ್ರಾವಿಡ್‌, ವಿವಿಎಸ್‌ ಲಕ್ಷ್ಮಣ್‌ ಹಾಗೂ ಅನಿಲ್‌ ಕುಂಬ್ಳೆ ಅವರ ಕತೆಗಳನ್ನು ಹೇಳಿ ಮಕ್ಕಳಲ್ಲಿ ಉತ್ಸಾಹ ತುಂಬಲು ಯತ್ನಿಸಿದ್ದಾರೆ.

ಪರೀಕ್ಷಾ ಪೇ ಚರ್ಚಾ: ಮಕ್ಕಳಿಗೆ ದ್ರಾವಿಡ್-ಕುಂಬ್ಳೆ ಸ್ಫೂರ್ತಿ ಎಂದ ಪ್ರಧಾನಿ ಮೋದಿ!

ದೆಹಲಿಯ ತಾಲ್‌ಕಟೋರಾ ಕ್ರೀಡಾಂಗಣದಲ್ಲಿ 3ನೇ ವರ್ಷದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವನ್ನುದ್ದೇಶಿಸಿ ಸೋಮವಾರ ಮಾತನಾಡಿದ ಮೋದಿ ಅವರು, ತಾತ್ಕಾಲಿಕ ಹಿನ್ನಡೆಯಾದಾಗ ನಿರುತ್ಸಾಹಕ್ಕೆ ಒಳಗಾಗಬಾರದು. ತಮ್ಮ ಹಾದಿಗೆ ಆ ವೈಫಲ್ಯವನ್ನು ಒಯ್ಯಬಾರದು. ತಾತ್ಕಾಲಿಕ ಹಿನ್ನಡೆ ಆಗಿದೆ ಎಂದಾಕ್ಷಣ ಯಶಸ್ಸು ಕಾಯುತ್ತಿಲ್ಲ ಎಂದು ಅರ್ಥವಲ್ಲ. ವಾಸ್ತವವಾಗಿ, ಹಿನ್ನಡೆಯಾದರೆ ಅತ್ಯುತ್ತಮವಾದುದು ಬರುತ್ತಿದೆ ಎಂದರ್ಥ ಎಂದು ಹುರಿದುಂಬಿಸಿದರು.

ಧನಾತ್ಮಕ ಚಿಂತನೆಗೆ 2001ರಲ್ಲಿ ನಡೆದ ಭಾರತ- ಆಸ್ಪ್ರೇಲಿಯಾ ಟೆಸ್ಟ್‌ ಪಂದ್ಯವನ್ನು ಮೋದಿ ಅವರು ಉದಾಹರಣೆಯಾಗಿ ನೀಡಿದರು. ನಮ್ಮ ಕ್ರಿಕೆಟ್‌ ತಂಡಕ್ಕೆ ಆ ಪಂದ್ಯದಲ್ಲಿ ಭಾರಿ ಹಿನ್ನಡೆಯಾಗುತ್ತಿತ್ತು. ಒಳ್ಳೆಯ ಭಾವನೆ ಇರಲಿಲ್ಲ. ಆದರೆ ಆ ಸಂದರ್ಭದಲ್ಲಿ ರಾಹುಲ್‌ ದ್ರಾವಿಡ್‌ ಹಾಗೂ ವಿವಿಎಸ್‌ ಲಕ್ಷ್ಮಣ್‌ ಆಡಿದ್ದನ್ನು ಮರೆಯಲು ಉಂಟೆ? ಅವರು ಪಂದ್ಯದ ಗತಿಯನ್ನೇ ಬದಲಿಸಿದರು. ಅದೇ ರೀತಿ ಗಾಯಗೊಂಡಿದ್ದರೂ ಬೌಲಿಂಗ್‌ ಮಾಡಿದ ಅನಿಲ್‌ ಕುಂಬ್ಳೆಯವರನ್ನು ಯಾರು ತಾನೆ ಮರೆತಾರು? ಪ್ರೇರಣೆ ಹಾಗೂ ಧನಾತ್ಮಕ ಚಿಂತನೆಯ ಶಕ್ತಿಯೇ ಇದು ಎಂದು ಹೇಳಿದರು.

ಚಂದ್ರಯಾನ ಸಂದರ್ಭದಲ್ಲಿ ಇಸ್ರೋ ಕಚೇರಿಗೆ ಭೇಟಿ ನೀಡಿದ್ದನ್ನು ಸ್ಮರಿಸಿದ ಮೋದಿ ಅವರು, ಚಂದ್ರಯಾನಕ್ಕೆ ಯಶಸ್ಸು ಸಿಗುವ ಖಾತ್ರಿ ಇಲ್ಲ. ಹೀಗಾಗಿ ಅಲ್ಲಿಗೆ ಬರುವುದು ಬೇಕಿಲ್ಲ ಎಂಬ ಮಾಹಿತಿ ಬಂತು. ಆದರೂ ನಾನು ಅಲ್ಲಿಗೆ ಹೋದೆ ಎಂದು ವಿವರಿಸಿದರು.

ಪ್ರಧಾನಿ ಮೋದಿಯೊಂದಿಗೆ ವಿದ್ಯಾರ್ಥಿಗಳ ಪರೀಕ್ಷಾ ಪೇ ಚರ್ಚಾ

ಪ್ರತಿಯೊಬ್ಬರು ತಂತ್ರಜ್ಞಾನದ ಜತೆ ಸಾಗಬೇಕು. ಆದರೆ ಅದು ನಮ್ಮ ಜೀವನವನ್ನೇ ಆಳಲು ಬಿಡಬಾರದು. ತಂತ್ರಜ್ಞಾನದ ಬಗ್ಗೆ ಆತಂಕ ಒಳ್ಳೆಯದಲ್ಲ. ತಂತ್ರಜ್ಞಾನ ಎಂಬುದು ಸ್ನೇಹಿತ ಇದ್ದಂತೆ. ಆದರೆ ಅದಕ್ಕೆ ಗುಲಾಮರಾಗಬಾರದು. ತಂತ್ರಜ್ಞಾನವನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯ ನಮಗಿರಬೇಕು. ನಮ್ಮ ಸಮಯವನ್ನು ಅದು ವ್ಯರ್ಥ ಮಾಡಲು ಬಿಡಬಾರದು. ನಮ್ಮ ಮನೆಯಲ್ಲಿ ಒಂದು ಕೋಣೆಯನ್ನು ತಂತ್ರಜ್ಞಾನ ಮುಕ್ತವಾಗಿಸಬೇಕು. ಅಲ್ಲಿಗೆ ಹೋಗುವಾಗ ಯಾವುದೇ ತಾಂತ್ರಿಕ ಉಪಕರಣ ಒಯ್ಯಬಾರದು ಎಂದು ಸಲಹೆ ಮಾಡಿದರು.

ಮೋದಿ ಸಲಹೆಗಳು

- ಯಾವುದೇ ಒತ್ತಡ ಇಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗಬೇಡಿ

- ಬೇರೆಯವರು ಏನು ಮಾಡುತ್ತಿದ್ದಾರೆ ಎಂಬ ಚಿಂತೆ ಮಾಡಬೇಡಿ

- ನಿಮ್ಮಲ್ಲಿ ಹಾಗೂ ನೀವು ನಡೆಸಿದ ತಯಾರಿಯಲ್ಲಿ ವಿಶ್ವಾಸವಿಡಿ

- ವಿದ್ಯಾರ್ಥಿಗಳು ಹಿರಿಯರ ಜತೆ ಸಮಯ ಕಳೆಯಬೇಕು

- ಮಕ್ಕಳು ಯಾವ ಪಠ್ಯೇತರ ಚಟುವಟಿಕೆ ಇಷ್ಟಪಡುತ್ತಾರೆ ಎಂಬುದನ್ನು ಪೋಷಕರು ಅರಿಯಬೇಕು

- ಗ್ಲಾಮರಸ್‌ ಚಟುವಟಿಕೆಗಳಿಗೆ ವಿದ್ಯಾರ್ಥಿಗಳನ್ನು ಪೋಷಕರು ದೂಡಬಾರದು

- ಪಠ್ಯೇತರ ಚಟುವಟಿಕೆ ಕೈಗೊಳ್ಳದ ವ್ಯಕ್ತಿ ರೊಬೋಟ್‌ ರೀತಿ ಆಗಿಬಿಡುತ್ತಾನೆ

ಓದೋಕೆ ಯಾವ ಟೈಮ್‌ ಬೆಸ್ಟ್‌?: ಪ್ರಧಾನಿಗೆ ಪ್ರಶ್ನೆ

ನವದೆಹಲಿ: ಪರೀಕ್ಷಾ ಪೇ ಚರ್ಚಾ ವೇಳೆ ವಿದ್ಯಾರ್ಥಿಯೊಬ್ಬ ‘ಓದಲಿಕ್ಕೆ ಯಾವ ಸಮಯ ಉತ್ತಮ?’ ಎಂಬ ಪ್ರಶ್ನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಳಿದ. ಇದಕ್ಕೆ ಉತ್ತರಿಸಿದ ಪ್ರಧಾನಿ, ಮಳೆಯಾದ ಬಳಿಕ ಆಗಸ ಯಾವ ರೀತಿ ಇರುತ್ತದೋ ಅದೇ ರೀತಿ ಬೆಳಗ್ಗೆ ಹೊತ್ತು ಮನಸ್ಸು ಕೂಡ ಶುಭ್ರವಾಗಿರುತ್ತದೆ. ಏನೇ ಓದಿದರೂ ಮನಸ್ಸಿನಲ್ಲಿ ಉಳಿಯುತ್ತದೆ. ನನ್ನ ಅನುಭವ ಹಾಗೂ ಸಾಮಾನ್ಯ ನಂಬಿಕೆಯ ಪ್ರಕಾರ, ಬೆಳಗ್ಗೆ ಹೊತ್ತು ಓದುವುದೇ ಉತ್ತಮ. ಆದರೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭ್ಯಾಸ ಇರುತ್ತದೆ. ಯಾರಿಗೆ ಯಾವುದು ಅನುಕೂಲವೋ ಅದನ್ನೇ ಮಾಡುವುದು ಉತ್ತಮ ಎಂದು ಹೇಳಿದರು.