Asianet Suvarna News Asianet Suvarna News

ಸಾವಿನಲ್ಲಿ ರಾಜಕೀಯ ಮಾಡಬಾರದು: ಮಾಜಿ ಸಿಎಂ ಸಿದ್ಧರಾಮಯ್ಯ

ಪರೇಶ್‌ ಮೆಸ್ತಾ ವಿಚಾರದಲ್ಲಿ ಸಿಬಿಐ ಬಿ ರಿಪೋರ್ಟ್‌ ಸಲ್ಲಿಕೆ ಮಾಡಿದ ವಿಚಾರವಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಬಿಜೆಪಿ ಈಗಲಾದರೂ ಸಾವಿನಲ್ಲಿ ರಾಜಕೀಯ ಮಾಡೋದನ್ನ ಬಿಡಬೇಕು ಎಂದು ಹೇಳಿದ್ದಾರೆ.
 

Paresh Mesta case Death should not be politicized says Former CM Siddaramaiah san
Author
First Published Oct 5, 2022, 5:34 PM IST

ಬೆಂಗಳೂರು (ಅ. 5): ಹೊನ್ನಾವರದಲ್ಲಿ ಪರೇಶ್‌ ಮೆಸ್ತಾ ಸಾವಿನ ಪ್ರಕರಣದಲ್ಲಿ ಸಿಬಿಐ ತನ್ನ ಬಿ ರಿಪೋರ್ಟ್‌ಅನ್ನು ಹೊನ್ನಾವರ ಕೋರ್ಟ್‌ಗೆ ಸಲ್ಲಿಕೆ ಮಾಡಿದ ಬೆನ್ನಲ್ಲಿಯೇ ರಾಜಕೀಯ ವಾಗ್ದಾಳಿಗಳು ಆರಂಭವಾಗಿದೆ. ಸಿಬಿಐ ತನ್ನ ಬಿ ರಿಪೋರ್ಟ್‌ನಲ್ಲಿ ಪರೇಶ್‌ ಮೆಸ್ತಾ ಸಾವನ್ನು ಆಕಸ್ಮಿಕ ಎಂದು ಹೇಳಿದೆ. ಇದರ ಬೆನ್ನಲ್ಲಿಯೇ ಬಿಜೆಪಿ ಈ ವರದಿಗೆ ವಿರೋಧ ವ್ಯಕ್ತಪಡಿಸಿದ್ದರೆ, ಕಾಂಗ್ರೆಸ್‌ ಪಕ್ಷ ಮಾತ್ರ, ಪರೇಶ್‌ ಮೆಸ್ತಾ ಸಾವಿನ ಪ್ರಕರಣದಲ್ಲಿ ಬೀದಿ ರಂಪಾಟ ಮಾಡಿದ್ದ ಬಿಜೆಪಿ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ. ಇದರ ನಡುವೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾವಿನಲ್ಲಿ ರಾಜಕೀಯ ಮಾಡೋದನ್ನ ಬಿಜೆಪಿ ಬಿಡಬೇಕು. ಪರೇಶ್‌ ಮೆಸ್ತಾ ವಿಚಾರದಲ್ಲಿ ಬಿಜೆಪಿ ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆದಿದೆ. ಹಾಗಾಗಿ ಅವರು ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಹೊನ್ನಾವರದಲ್ಲಿ ಪರೇಶ್‌ ಮೆಸ್ತಾ ಸಾವಾಗಿತ್ತು. 2017ರಲ್ಲಿ ಹೊನ್ನಾವರದಲ್ಲಿ ಕೋಮು ಗಲಭೆ ನಡೆದಿತ್ತು. ಅದಾದ ಎರಡು ದಿನಗಳ ಬಳಿಕ ಪರೇಶ್‌ ಮೆಸ್ತಾ ಸಾವು ಕಂಡಿದ್ದರು. ಇದನ್ನು ಬಿಜೆಪಿ, ಕೋಮು ದ್ವೇಷಕ್ಕಾಗಿ ಪರೇಶ್‌ ಮೆಸ್ತಾ ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಿತ್ತು. 

Paresh Mesta ಸಾವು ಕೊಲೆಯಲ್ಲ, ಸಹಜ ಸಾವು : ಸಿಬಿಐ ವರದಿ

ಈ ಕುರಿತಾಗಿ ಮಾತನಾಡಿರುವ ಸಿದ್ಧರಾಮಯ್ಯ (Siddaramaiah ),  ನಾನು ಸುಮಾರು ಎಂಟು ಕೇಸ್ ಗಳನ್ನು ಸಿಬಿಐ ಗೆ (CBI) ಕೊಟ್ಟಿದ್ದೇನೆ. ಅದರಲ್ಲಿ ಪರೇಶ್ ಮೆಸ್ತಾ ಕೇಸ್ ಕೂಡಾ ಒಂದು. ಪರೇಶ್‌ (Paresh Mesta) ಸಾವಾದಾಗ ಬಿಜೆಪಿಯವರು (BJP) ಬಹಳ ದೊಡ್ಡ ಗಲಾಟೆ ಮಾಡಿದ್ದರು. ಕೆಲವರು ಇದು ಕೊಲೆ ಅಂತಾ ಹೇಳಿದ್ದರು. ಆರ್‌ಎಸ್ ‌ಎಸ್ ಭಜರಂಗದಳ ಎಲ್ಲಾ ಪ್ರತಿಭಟನೆಗಳನ್ನು ಮಾಡಿತ್ತು. ಹೀಗಾಗಿ ಈ ಕೇಸ್‌ಅನ್ನು ಸಿಬಿಐ ತನಿಖೆಗೆ ಕೊಟ್ಟಿದ್ದೆ ಎಂದು ಹೇಳಿದ್ದಾರೆ.

ಪರೇಶ ಮೇಸ್ತ ಪ್ರಕರಣ: ಸಿಬಿಐ ತನಿಖೆ ಆರಂಭ

ಈಗ ಸಿಬಿಐ ಬಿ ರಿಪೋರ್ಟ್ ಹಾಕಿದೆ. ಬಿಜೆಪಿಯವರು ಮಾಡಿದ್ದ ಆರೋಪ ಸುಳ್ಳು ಎನ್ನುವುದು ಸಾಬೀತಾಗಿದೆ. ಬಿಜೆಪಿಯವರು ಈಗ ಕ್ಷಮೆ ಕೇಳಬೇಕು. ಸಾವಿನಲ್ಲಿ ರಾಜಕೀಯ ಮಾಡಲು ಹೋಗಬಾರದು ಎಂದು ಹೇಳಿದ್ದಾರೆ.

Follow Us:
Download App:
  • android
  • ios