ಬೆಂಗಳೂರು (ಮೇ. 17): ರಾಜ್ಯದಲ್ಲಿ ಕೊರೋನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದರೂ ಖಾಸಗಿ ಶಾಲಾ ಕಾಲೇಜುಗಳ ಲಾಭಿಗೆ ಮಣಿದು ಮಕ್ಕಳ ಸುರಕ್ಷತೆ ಲೆಕ್ಕಿಸದೆ ತರಾತುರಿಯಲ್ಲಿ ಶಾಲಾ, ಕಾಲೇಜು ಆರಂಭದ ಚಿಂತನೆ ಹೊಂದಿರುವ ರಾಜ್ಯ ಸರ್ಕಾರದ ಧೋರಣೆಗೆ ಪೋಷಕರ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

"

ಖಾಸಗಿ ಶಾಲಾ ಆಡಳಿತ ಮಂಡಳಿಗಳ ಲಾಬಿಗೆ ಮಣಿದು ಶಾಲೆಗಳನ್ನು ಆರಂಭಿಸಿದರೂ ಕೊರೋನಾ ಪಿಡುಗು ನಿಯಂತ್ರಣಕ್ಕೆ ಬರುವವರೆಗೂ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದಿಲ್ಲ ಎಂದು ಹಲವು ಪೋಷಕರು ಎಚ್ಚರಿಸಿದ್ದಾರೆ.

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ರಾಜ್ಯ ಪೋಷಕರ ಸಂಘದ ಅಧ್ಯಕ್ಷ ಮುಳ್ಳಹಳ್ಳಿ ಸೂರಿ ಅವರು, ‘ಕೊರೋನಾ ಗಂಭೀರತೆ ತಿಳಿದ ವಯಸ್ಕರೇ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದರಲ್ಲಿ ಎಡವುತ್ತಿದ್ದಾರೆ.

ಶಾಲೆಗಳ ಆರಂಭಕ್ಕೆ ತರಾತುರಿ ಇಲ್ಲ: ಮಕ್ಕಳ ಸುರಕ್ಷತೆ ಗಮನಿಸಿ ನಂತರ ನಿರ್ಧಾರ

ಇನ್ನು, ತರಗತಿಯಲ್ಲಿ ಒಂದೆರಡು ನಿಮಿಷ ಶಿಕ್ಷಕರಿಲ್ಲದಿದ್ದರೆ ಸ್ವತಂತ್ರವಾಗಿ ಸ್ನೇಹಿತರೊಡನೆ ಆಟ, ಗಲಾಟೆ, ಚೇಷ್ಟೆಗಳಲ್ಲಿ ತೊಡಗುವ ಪ್ರಾಥಮಿಕ ಶಾಲಾ ಮಕ್ಕಳಿಗೆ ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಳ್ಳಬಹುದು, ನಿಯಂತ್ರಣ ಕ್ರಮಗಳನ್ನು ಪಾಲಿಸುವ ಪ್ರಶ್ನೆಯೇ ಇಲ್ಲ. ಖಾಸಗಿ ಶಾಲೆಗಳು ಕೇಳುತ್ತಿವೆ ಎಂದು ಅನುಮತಿ ನೀಡುವ ಮೊದಲು ಸರ್ಕಾರ ಇದನ್ನು ಅರ್ಥಮಾಡಿಕೊಳ್ಳಬೇಕು. ನಿರ್ಧಾರವನ್ನು ಕೈ ಬಿಡಬೇಕು’ ಎಂದು ಆಗ್ರಹಿಸುತ್ತಾರೆ.

ಬೆಂಗಳೂರಿನ ಲಗ್ಗೆರೆ ನಿವಾಸಿ ಚಂದ್ರಮೌಳೇಶ್ವರ ಅವರು, ‘ಶೈಕ್ಷಣಿಕ ವರ್ಷ ಆರಂಭ ಆಗಲೇ ಸಮಯವೇನೂ ಮೀರಿ ಹೋಗಿಲ್ಲ. ಕೆಲ ತಿಂಗಳ ನಂತರ ಆರಂಭಿಸಿದರೂ ಯಾವುದೇ ಸಮಸ್ಯೆ ಆಗುವುದಿಲ್ಲ. ಅಷ್ಟರಲ್ಲಿ ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು’ ಎನ್ನುತ್ತಾರೆ.

‘ಕೊರೋನಾ ನಿಯಂತ್ರಣಕ್ಕೆ ಬರುವವರೆಗೂ ಶಾಲೆಗಳ ಆರಂಭ ಬೇಡ ಎಂದು ನಾವು ಹೇಳುವುದಿಲ್ಲ. ಆದರೆ, ಮಕ್ಕಳ ಸುರಕ್ಷತೆಗೆ ಯಾವೆಲ್ಲಾ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣ ತಜ್ಞರು, ವೈದ್ಯರು, ಶಿಕ್ಷಕರು, ಪೋಷಕರು, ಶಾಲಾ ಆಡಳಿತ ಮಂಡಳಿಗಳು ಎಲ್ಲರೊಂದಿಗೂ ಸರ್ಕಾರ ವ್ಯಾಪಕ ಚರ್ಚೆ ನಡೆಸಿ ಸಲಹೆ ಸೂಚನೆಗಳನ್ನು ಪಡೆದು ಎಚ್ಚರಿಕೆಯ ಹೆಜ್ಜೆ ಇಡಬೇಕು. ಅದನ್ನು ಬಿಟ್ಟು ಶಾಸಗಿ ಶಾಲೆಗಳು ಒತ್ತಡ ಹಾಕುತ್ತಿವೆ ಎಂದು ಪೂರ್ವಾಪರ ಯೋಚಿಸದೆ ಶಾಲಾ, ಕಾಲೇಜು ಆರಂಭಿಸಬಾರದು’ ಎಂದು ಅವರು ಆಗ್ರಹಿಸುತ್ತಾರೆ.

ಹೊಸ ರೀತಿಯಲ್ಲಿ ಶಾಲೆಗಳು ಆರಂಭದ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆದ ಶಿಕ್ಷಣ ಇಲಾಖೆ

‘ಕೊರೋನಾ ಸೋಂಕಿಗೆ ಇದುವರೆಗೂ ಯಾವುದೇ ನಿರ್ದಿಷ್ಟಔಷಧವಾಗಲಿ, ಲಸಿಕೆಯಾಗಲಿ ಸಂಶೋಧನೆಯಾಗಿಲ್ಲ. ಲಾಕ್‌ಡೌನ್‌ ಸಡಿಲಗೊಳಿಸಿ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಿದ ಬಳಿಕ ಸೋಂಕು ಹೆಚ್ಚಾಗುತ್ತಿದ್ದು, ಸಮುದಾಯಕ್ಕೆ ಹರಡದಂತೆ ಇನ್ನಷ್ಟುಕಠಿಣ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕಾದ ದೊಡ್ಡ ಸವಾಲು ಸದ್ಯ ಸರ್ಕಾರದ ಮುಂದಿದೆ. ಇಂತಹ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಶಾಲೆಗಳಲ್ಲಿ ಕಟ್ಟುನಿಟ್ಟಾಗಿ ಆಗಬೇಕಿರುವ ಕ್ರಮಗಳ ಬಗ್ಗೆ ಸಮಗ್ರ ಚರ್ಚೆಯನ್ನೂ ನಡೆಸದೆ, ಶಾಲೆಗಳನ್ನು ಆರಂಭಿಸಲು ಹೊರಟಿರುವುದು ಸರಿಯಲ್ಲ’ ಎಂಬುದು ಅವರ ಆಕ್ಷೇಪ.

ಲಕ್ಷಾಂತರ ವಲಸಿಗರು ಊರು ಬಿಟ್ಟು ಊರು ಸೇರಿದ್ದಾರೆ. ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಿದ್ದರಿಂದ ಕೊರೋನಾ ನಿಯಂತ್ರಣ ಕ್ರಮಗಳತ್ತ ಜನರು ಲಕ್ಷ್ಯ ವಹಿಸುತ್ತಿಲ್ಲ. ತಕ್ಷಣಕ್ಕೆ ಶಾಲೆ ಆರಂಭಿಸಿದರೆÜ ಅಪಾಯವೇ ಹೆಚ್ಚು. ಒಂದೆರಡು ತಿಂಗಳು ತರಗತಿ ತಡವಾದರೂ ತೊಂದರೆಯೇನೂ ಆಗುವುದಿಲ್ಲ. ಮೊದಲು ಬಾಕಿ ಇರುವ ಪರೀಕ್ಷೆಗಳನ್ನು ಮಗಿಸಿ. ನಿಧಾನವಾಗಿ ಎಲ್ಲಾ ದಿಕ್ಕಿನಿಂದಲೂ ಯೋಚಿಸಿ ಸರ್ಕಾರ ನಿರ್ಧಾರ ಕೈಗೊಳ್ಳುವುದು ಒಳ್ಳೆಯದು.

- ಯೋಗಾನಂದ್‌, ಆರ್‌ಟಿಇ ಪೇರೆಂಟ್ಸ್‌ ಅಸೋಸಿಯೇಷನ್‌ ಅಧ್ಯಕ್ಷ