ಶಾಲೆಗಳ ಆರಂಭಕ್ಕೆ ತರಾತುರಿ ಇಲ್ಲ: ಸರ್ಕಾರ | ‘2 ಶಿಫ್ಟ್‌’ನಲ್ಲಿ ಶಾಲೆ ನಡೆಸುವ ಪ್ರಸ್ತಾವನೆ | ಜನರ ವಿರೋಧ: 1 ಹೆಜ್ಜೆ ಹಿಂದೆ ಸರಿದ ಸರ್ಕಾರ

ಬೆಂಗಳೂರು (ಮೇ. 17): ಪಾಳಿ ವ್ಯವಸ್ಥೆ ಅಡಿಯಲ್ಲಿ ಶಾಲೆ ಆರಂಭಿಸುವ ಕುರಿತು ಶಿಕ್ಷಣ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆ ರಾಜ್ಯ ಸರ್ಕಾರವನ್ನು ದೊಡ್ಡ ಇಕ್ಕಟ್ಟಿಗೆ ಸಿಲುಕಿಸಿದೆ. ಒಂದು ಕಡೆ ಶಾಲೆ ಆರಂಭಕ್ಕೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಲಾಬಿ ತೀವ್ರಗೊಂಡಿದ್ದರೆ ಮತ್ತೊಂದು ಕಡೆ ಪೋಷಕರು ಹಾಗೂ ಸಾರ್ವಜನಿಕರಿಂದ ತೀವ್ರ ಪ್ರತಿರೋಧ ಎದುರಾಗಿದೆ.

ಹೀಗಾಗಿ ಶಾಲಾ ಆರಂಭಿಸುವ ವಿಚಾರದಲ್ಲಿ ಒಂದು ಹೆಜ್ಜೆ ಹಿಂದಿಕ್ಕಿರುವ ರಾಜ್ಯ ಸರ್ಕಾರ ತರಾತುರಿಯಲ್ಲಿ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದಿರಲು ನಿರ್ಧರಿಸಿದೆ.

ಈ ಕುರಿತು ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌, ‘ರಾಜ್ಯದಲ್ಲಿ ಶಾಲೆಗಳನ್ನು ತರಾತುರಿಯಲ್ಲಿ ತೆರೆಯುವುದಿಲ್ಲ. ಮಕ್ಕಳ ಹಿತವನ್ನು ಕಾಪಾಡುವ ಜವಾಬ್ದಾರಿ ಸರ್ಕಾರದ ಮೇಲಿರುವುದರಿಂದ ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ಹೇಳಿದ್ದಾರೆ.

ಹೊಸ ರೀತಿಯಲ್ಲಿ ಶಾಲೆಗಳು ಆರಂಭದ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆದ ಶಿಕ್ಷಣ ಇಲಾಖೆ

‘ಶಾಲೆಗಳನ್ನು ಯಾವಾಗ ಆರಂಭಿಸಬೇಕು, ಶೈಕ್ಷಣಿಕ ವರ್ಷದಲ್ಲಿ ಎಷ್ಟುದಿನಗಳು ಕಡಿಮೆಯಾಗಲಿವೆ ಎಂಬುದರ ಬಗ್ಗೆ ಇಲಾಖೆ ಅಧ್ಯಯನ ಮಾಡುತ್ತಿದೆ. ಅದೇ ರೀತಿ ತರಗತಿಗಳನ್ನು ಪಾಳಿ ಪದ್ಧತಿಯಲ್ಲಿ ನಡೆಸಬೇಕೇ ಅಥವಾ ಪರ್ಯಾಯ ವ್ಯವಸ್ಥೆ ಮಾಡಬಹುದಾ ಎಂಬುದರ ಬಗ್ಗೆಯೂ ಚರ್ಚೆಯಾಗುತ್ತಿದೆ. ಕೇಂದ್ರ ಸರ್ಕಾರ ನೀಡುವ ಮಾರ್ಗಸೂಚಿ ಆಧರಿಸಿ ರಾಜ್ಯದಲ್ಲಿಯೂ ನಿರ್ಧಾರ ಕೈಗೊಳ್ಳಲಾಗುತ್ತದೆ. ಒಟ್ಟಾರೆ ಈ ಬಗ್ಗೆ ಸೋಮವಾರದ (ಮೇ 18) ವೇಳೆಗೆ ಸ್ಪಷ್ಟಚಿತ್ರಣ ಸಿಗಲಿದೆ’ ಎಂದು ತಿಳಿಸಿದರು.

‘ಪೂರ್ವ ಪ್ರಾಥಮಿಕ ತರಗತಿಗಳನ್ನು ಯಾವಾಗ ಆರಂಭಿಸಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಅದು ತೀರ್ಮಾನವಾಗಿಲ್ಲ’ ಎಂದರು.

ಎಲ್‌ಕೆಜಿ, ಯುಕೆಜಿಗೆ ಆನ್‌ಲೈನ್‌: ಸಚಿವರ ಎಚ್ಚರಿಕೆ

ಬೆಂಗಳೂರು: ‘ಕೆಲವು ಖಾಸಗಿ ಶಾಲೆಗಳು ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಆನ್‌ಲೈನ್‌ ತರಗತಿಗಳನ್ನು ನಡೆಸುವುದಾಗಿ ಹೇಳಿರುವುದು ಹಾಸ್ಯಾಸ್ಪದವಾಗಿದೆ. ಸಣ್ಣ ವಯಸ್ಸಿನ ಮಕ್ಕಳಿಗೆ ಆನ್‌ಲೈನ್‌ ಬೋಧನೆ ಕ್ರೂರ ವ್ಯವಸ್ಥೆಯಾಗಿದೆ. ಇಂತಹ ವ್ಯವಸ್ಥೆಗಳಿಗೆ ಕಡಿವಾಣ ಹಾಕುವಂತೆಯೂ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೂನ್‌ ಮೊದಲ ವಾರದಲ್ಲಿ ಶಾಲೆ ಪುನರಾರಂಭವಾಗುವ ಸಾಧ್ಯತೆಗಳು ಕಡಿಮೆ’ ಎಂದು ಸಚಿವ ಸುರೇಶ್‌ಕುಮಾರ್‌ ಹೇಳಿದರು.

ಮಕ್ಕಳನ್ನ ಅಡ್ಮಿಷನ್‌ ಮಾಡಿಕೊಳ್ಳಲು ಶಾಲೆಗಳಿಗೆ ಅನುಮತಿ: ತರಗತಿ ಪ್ರಾರಂಭ ಯಾವಾಗ..?

ಸರ್ಕಾರಕ್ಕಿರುವ ಸವಾಲುಗಳು

- ಶಾಲೆಗಳಲ್ಲಿ ಮಕ್ಕಳ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು

- ಸಾಮಾಜಿಕ ಅಂತರ ಕಾಯ್ದುಕೊಂಡು ತರಗತಿಗಳನ್ನು ನಡೆಸಿದರೆ ಕೊಠಡಿಗಳ ಸಮಸ್ಯೆ

- 2 ಪಾಳಿಯಲ್ಲಿ ಕಾರ್ಯ ನಿರ್ವಹಿಸಲು ಬೋಧನ ಸಿಬ್ಬಂದಿ ಸಮಸ್ಯೆ ಕಾಡಲಿದೆ

- ನಿಗದಿತ ವೇಳೆಗೆ ಶಾಲೆ ಆರಂಭವಾಗದಿದ್ದರೆ ಶೈಕ್ಷಣಿಕ ವರ್ಷದ ವೇಳಾಪಟ್ಟಿಏರು ಪೇರು

- ತಡವಾಗಿ ಶಾಲೆ ಆರಂಭಿಸಿದರೆ ಪಾಠ ಪ್ರವಚನ ಪೂರ್ಣಗೊಳಿಸಲು ಸಮಯದ ಅಭಾವ

ತರಾತುರಿಯಲ್ಲಿ ರಾಜ್ಯದ ಶಾಲೆಗಳನ್ನು ತೆರೆಯುವುದಿಲ್ಲ. ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿರುವುದರಿಂದ ಇಲ್ಲಿಯವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

- ಎಸ್‌. ಸುರೇಶ್‌ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ