ಅನಂತ ಸ್ಮೃತಿ ನಡಿಗೆ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಅನಂತ ಪರಿಶ್ರಮ ಮರೆಯಲಾಗದು
ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಐದನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಭಾನುವಾರ ‘ಅನಂತ ಸ್ಮೃತಿ’ ನಡಿಗೆ ಮತ್ತು ಪಂಜಿನ ಮೆರವಣಿಗೆ ನಡೆಯಿತು.

ಬೆಂಗಳೂರು (ನ.13) : ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಐದನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಭಾನುವಾರ ‘ಅನಂತ ಸ್ಮೃತಿ’ ನಡಿಗೆ ಮತ್ತು ಪಂಜಿನ ಮೆರವಣಿಗೆ ನಡೆಯಿತು.
ಲಾಲ್‌ಬಾಗ್ ವೆಸ್ಟ್ ಗೇಟ್‌ನಲ್ಲಿ ಸೇರಿದ ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತ್‌ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಗಣ್ಯರು ಅನಂತ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದರು. ಬಳಿಕ ನೂರಾರು ಸ್ವಯಂಸೇವಕರು, ಅನಂತ್ ಅಭಿಮಾನಿಗಳ ಜತೆಗೂಡಿ ಪಂಜು ಹಿಡಿದು ಅದಮ್ಯಚೇತನದವರೆಗೆ ಸಾಗಿದರು. ಈ ವೇಳೆ ಅವರ ಸಾಧನೆ, ದೂರದೃಷ್ಟಿತ್ವ, ಕನಸುಗಳ ಕುರಿತು ಸ್ಮರಿಸಿಕೊಳ್ಳಲಾಯಿತು.
ಎಡಿಜಿಪಿ ಹರಿಶೇಖರನ್ ಹೆಸರಿನಲ್ಲಿನಕಲಿ ಖಾತೆ ತೆರೆದು ಹಣಕ್ಕೆ ಬೇಡಿಕೆ!
ತೇಜಸ್ವಿನಿ ಅನಂತ್ ಕುಮಾರ್ ಮಾತನಾಡಿ, ಅನಂತ್ ಕುಮಾರ್ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಆಯ್ಕೆಯಾಗಿ ಬೆಂಗಳೂರಿಗೆ ಹೊಸ ಸ್ವರೂಪ, ಅಭಿವೃದ್ಧಿಗೆ ಹೊಸ ಬೆಳಕು ನೀಡಿದ್ದರು. ಅನಂತ ಕುಮಾರ್ ಅವರ ನೇತೃತ್ವ, ಅವರ ಕತೃತ್ವವನ್ನು ಸ್ಮರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ನಗರದ ಅಭಿವೃದ್ಧಿಯ ಅವರ ಸಾಕಷ್ಟು ಕನಸುಗಳು ನನಸಾಗಬೇಕಿದೆ ಎಂದರು.
ವಿಜಯೇಂದ್ರ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಹಿರಿಯ ರಾಜಕೀಯ ಮುತ್ಸದ್ದಿ ಅನಂತ್ ಕುಮಾರ್. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅನಂತ್ ಕುಮಾರ್ ಅವರ ಪರಿಶ್ರಮವನ್ನು ಮರೆಯಲು ಸಾಧ್ಯವಿಲ್ಲ. ಇಬ್ಬರು ನಾಯಕರು ಹಗಲಿರುಳು ಪಕ್ಷದ ಬೆಳವಣಿಗೆಯನ್ನೇ ಧ್ಯಾನಿಸುತ್ತಿದ್ದರು ಎಂದರು.
ತೇಜಸ್ವಿನಿ ಅನಂತ್ ಕುಮಾರ್ ಅವರ ಕ್ರಿಯಾಶೀಲತೆ ಮಾದರಿಯಾಗಿದ್ದು, ರಾಜಕಾರಣಿಗಳು ಪ್ರತಿಯೊಂದು ಸೇವೆಯಲ್ಲಿ ರಾಜಕೀಯ ಲಾಭ ನೋಡುತ್ತಾರೆ. ಆದರೆ ತೇಜಸ್ವಿನಿ ಅನಂತ್‌ಕುಮಾರ್ ಅವರು ರಾಜಕೀಯ ಪ್ರತಿಫಲಾಪೇಕ್ಷೆಯಿಲ್ಲದೇ, ತನ್ನ ಸೇವೆ ಮೂಲಕ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.
ವೃದ್ಧ ಪೋಷಕರ ಆರೈಕೆ ಮಾಡುವ ಜವಾಬ್ದಾರಿ ಮಕ್ಕಳದು: ಹೈಕೋರ್ಟ್
‘ಅನಂತ ಸ್ಮೃತಿ’ ನಡಿಗೆಯಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಕೆ.ಸಿ. ರಾಮಮೂರ್ತಿ, ರವಿ ಸುಬ್ರಹ್ಮಣ್ಯ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಪಿ.ವಿ.ಕೃಷ್ಣ ಭಟ್ ಮತ್ತಿರರರು ಪಾಲ್ಗೊಂಡಿದ್ದರು.