ದಾವಣಗೆರೆ (ಜ.31):  ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆಗೆ ಹರಿಹರ ಪೀಠದ ಶ್ರೀವಚನಾನಂದ ಸ್ವಾಮೀಜಿ ಸಹ ಕೈಯಲ್ಲಿ ಬಾರ್‌ಕೋಲು ಬೀಸುತ್ತಾ ಪಂಚಲಕ್ಷ ಹೆಜ್ಜೆಗೆ ಹೆಜ್ಜೆ ಹಾಕುವ ಮೂಲಕ ಹೋರಾಟಕ್ಕೆ ಮತ್ತಷ್ಟುತೀವ್ರತೆ ತಂದರು. ಪಾದಯಾತ್ರೆಯ ವೇಳೆ ಪಂಚಮಸಾಲಿ ಸಮಾಜದವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿದರು.

ನಗರದ ವೀರ ರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ ಕೈಯಲ್ಲಿ ಬಾರ್‌ಕೋಲು ಹಿಡಿದು ಗಾಳಿಯಲ್ಲಿ ಬೀಸುವ ಮೂಲಕ ಪಾದಯಾತ್ರೆ ದಾವಣಗೆರೆ ಗಡಿ ದಾಟುವಷ್ಟರಲ್ಲಿ ಸಿಎಂ ಯಡಿಯೂರಪ್ಪ ನಮ್ಮ ಬೇಡಿಕೆ ಈಡೇರಿಸಲಿ ಎಂಬ ಸಂದೇಶ ರವಾನಿಸಿದರು.

ಒಂದಾದ ಕೂಡಲಸಂಗಮ, ಹರಿಹರ ಪಂಚಮಸಾಲಿ ಶ್ರೀಗಳು ...

ಈ ವೇಳೆ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಮಧ್ಯ ಕರ್ನಾಟಕ ದಾವಣಗೆರೆಯಿಂದ ಬಾರ್‌ಕೋಲು ಚಳವಳಿಯನ್ನು ವಚನಾನಂದ ಸ್ವಾಮೀಜಿ, ನಾವು ಆರಂಭಿಸಿದ್ದೇವೆ. ಚಿತ್ರದುರ್ಗದಿಂದ ಸಮಾಜದ ತಾಯಂದಿರು ಕುಡುಗೋಲು ಹಿಡಿದು ಹೋರಾಟಕ್ಕೆ ಮತ್ತಷ್ಟುತೀವ್ರತೆ ತರಲಿದ್ದಾರೆ. ಪಂಚಮಸಾಲಿ ಸಮಾಜದ ಬಲದಿಂದಲೇ ಮುಖ್ಯಮಂತ್ರಿ ಯಡಿಯೂರಪ್ಪ ಸಮಾಜದ ಋುಣ ತೀರಿಸುವ ಕೆಲಸ ಮಾಡಲಿ. ಕೂಡಲ ಸಂಗಮದಿಂದ ನಮ್ಮ ಹೋರಾಟ ಆರಂಭವಾದಾಗ ಒಬ್ಬಂಟಿಗನಾಗಿದ್ದೆವು. ಇಂದು ದಾವಣಗೆರೆಯಿಂದ ಜಂಟಿಯಾಗಿ ವಚನಾನಂದ ಸ್ವಾಮೀಜಿ ಸೇರಿ ಹೆಜ್ಜೆ ಹಾಕಲಿದ್ದಾರೆ ಎಂದರು.

ಹರಿಹರ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ದಾವಣಗೆರೆಯಲ್ಲಿ ಸಂಕಲ್ಪ ಮಾಡಿ ಆರಂಭಗೊಂಡ ಹೋರಾಟ, ಚಳವಳಿಗಳು ಯಶಸ್ವಿಯಾದ ಇತಿಹಾಸವಿದೆ. 2003ರಲ್ಲಿ ಮೀಸಲಾತಿ ಸಲುವಾಗಿ ಅಂದಿನ ಪ್ರಧಾನಿ ವಾಜಪೇಯಿ ಭೇಟಿಯಾದ ಸಮುದಾಯ ಇದೇ ಉದ್ದೇಶಕ್ಕೆ ಎರಡು ಪೀಠವಾಗಿತ್ತು. ಈಗ ಇದೇ ಸದುದ್ದೇಶಕ್ಕೆ ಎರಡೂ ಪೀಠ ಒಂದಾಗಿದ್ದು, ಸಮಾಜಕ್ಕೆ ಉತ್ಸಾಹ ಮೂಡಿಸಿದೆ ಎಂದರು.

ತಲೆ ತಿರುಕು ಹೇಳಿಕೆ ಬೇಡ

ಪಂಚಮಸಾಲಿ ಶ್ರೀಗಳು ಅನುದಾನ ಕೊಡುವವರ ಪರವಾಗಿ ಮಾತನಾಡುವುದನ್ನು ಬಿಡಲಿ. ಸ್ವಾಮೀಜಿಯಾದವರು ಸಮಾಜಮುಖಿ ಕೆಲಸ ಮಾಡಬೇಕು. ಅದು ಬಿಟ್ಟು ಮಂತ್ರಿ ಮಾಡದಿದ್ದರೆ ಹುಷಾರ್‌ ಎಂಬಂತಹ ತಲೆ ತಿರುಕು ಹೇಳಿಕೆಗಳನ್ನು ನೀಡಬಾರದು. ಇದು ಸ್ವಾಮೀಜಿಗಳಿಗೆ ಶೋಭೆ ತರುವುದಿಲ್ಲ.

- ಬಸನಗೌಡ ಪಾಟೀಲ್‌ ಯತ್ನಾಳ್‌, ಶಾಸಕ