Asianet Suvarna News Asianet Suvarna News

ಲೋಕಸಭಾ ಚುನಾವಣೆಯೊಳಗೆ ಮೀಸಲಾತಿ ನೀಡಿ ಇಲ್ಲವೇ ಹೋರಾಟ ಎದುರಿಸಿ; ಜಯಮೃತ್ಯುಂಜಯ ಸ್ವಾಮೀಜಿ ವಾರ್ನಿಂಗ್!

ಲಿಂಗಾಯತ ಸಮುದಾಯಕ್ಕೆ ಹಿಂದಿನ ಸರ್ಕಾರ ನೀಡಿದ್ದ 2ಡಿ ಮೀಸಲಾತಿಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸದೇ ಇದ್ದರೆ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿ ಹೇಳಿದ್ದಾರೆ.

Panchamasali reservation issue jayamrityunjaya swamiji warn to karnataka govt rav
Author
First Published Oct 25, 2023, 12:44 AM IST

ಬೆಂಗಳೂರು (ಅ.25) :  ಲಿಂಗಾಯತ ಸಮುದಾಯಕ್ಕೆ ಹಿಂದಿನ ಸರ್ಕಾರ ನೀಡಿದ್ದ 2ಡಿ ಮೀಸಲಾತಿಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸದೇ ಇದ್ದರೆ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿ ಹೇಳಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮರ 245ನೇ ಜನ್ಮದಿನಾಚರಣೆ ಅಂಗವಾಗಿ ಅವರು ನಗರದ ಟೌನ್‌ಹಾಲ್ ಬಳಿಯ ಚೆನ್ನಮ್ಮನ ಪ್ರತಿಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಪುಷ್ಪಾರ್ಚನೆ ಮಾಡಿ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಮತ್ತೆ ಶುರುವಾಯ್ತು ಪಂಚಮಸಾಲಿ ಮೀಸಲಾತಿ ಕಿಚ್ಚು: ಲೋಕಸಭೆ ಚುನಾವಣೆ ಹೊತ್ತಲ್ಲಿ ‘ಬಸವ’ ಶ್ರೀ ರಣಕಹಳೆ

 

ಲಿಂಗಾಯತ ಸಮುದಾಯದ ನ್ಯಾಯಯುತ ಮೀಸಲಾತಿಗಾಗಿ 3 ವರ್ಷ ಹೋರಾಡಿದ್ದೇವೆ. ಚಳುವಳಿ ಒಂದು ಹಂತಕ್ಕೆ ತಲುಪಿದೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಕುಳಿತಾಗ ಪ್ರಧಾನಮಂತ್ರಿಗಳ ಮಧ್ಯಸ್ಥಿಕೆಯಿಂದ ಹಿಂದಿನ ಸರ್ಕಾರ ಹೊಸದಾಗಿ 2ಡಿ ಎಂದು ಹೊಸ ಮೀಸಲಾತಿ ಘೋಷಿಸಿತು. ಚುನಾವಣೆ ನೀತಿ ಸಂಹಿತೆ ಕಾರಣ ವಿಳಂಬವಾಗಿತ್ತು. ನಂತರ ಸರ್ಕಾರ ಬದಲಾಯಿತು. ಸಮುದಾಯದ ಶಾಸಕರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗ ಈ ಕುರಿತು ಒಂದು ಸಭೆ ಕರೆಯುತ್ತೇವೆ. ಕಾನೂನು ತಜ್ಞರೊಂದಿಗೆ ಚರ್ಚಿಸುತ್ತೇವೆ ಎಂದಿದ್ದರು. ಆದರೆ, ಸಭೆಯಾಗಿ ಮೂರ್ನಾಲ್ಕು ತಿಂಗಳಾದರೂ ಏನೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗಾವಿ: ಜನಪ್ರತಿನಿಧಿಗಳ ಅನುಪಸ್ಥಿತಿ ಮಧ್ಯೆ ಕಿತ್ತೂರು ಉತ್ಸವಕ್ಕೆ ಅದ್ಧೂರಿ ತೆರೆ..!

ಮೀಸಲಾತಿಗಾಗಿ ಈ ಸರ್ಕಾರಕ್ಕೆ ಮತ್ತೊಮ್ಮೆ ಹಕ್ಕೊತ್ತಾಯ ಮಾಡುತ್ತಿದ್ದೇವೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆಯ ಮೂಲಕ ಹೋರಾಟ ಆರಂಭಿಸಿದ್ದೇವೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಧಾರವಾಡದಲ್ಲಿ ಮಾಡಿದ್ದೇವೆ. ಎಲ್ಲ 31 ಜಿಲ್ಲೆಗಳಲ್ಲೂ ಹೋರಾಟ ಮಾಡುತ್ತೇವೆ. ಹೋರಾಟ ಮುಗಿಯುವುದರೊಳಗೆ ಸರ್ಕಾರ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಸಮಾಜದ ಬಾಂಧವರೆಲ್ಲ ಸೇರಿ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿಯಲ್ಲಿ ಸಮುದಾಯ ಶಕ್ತಿ ಪ್ರದರ್ಶನ ಮಾಡುತ್ತೇವೆ. ಹೋರಾಟ ತೀವ್ರಗೊಳ್ಳುತ್ತದೆ. ಲೋಕಸಭೆ ಚುನಾವಣೆಯೊಳಗೆ ಸಮಾಜಕ್ಕೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.

ಹಿಂದಿನ ಸರ್ಕಾರಕ್ಕೆ ನಿರಂತರ ಮನವಿ ಮಾಡಿದರೂ ಸ್ಪಂದಿಸದ ಕಾರಣ ಉಗ್ರ ಹೋರಾಟ ನಡೆಸಬೇಕಾಯಿತು. ಹೊಸ ಸರ್ಕಾರ ಟೇಕಾಫ್ ಆಗುತ್ತಿದೆ ಎನ್ನುವ ಕಾರಣಕ್ಕೆ ಸುಮ್ಮನಿದ್ದೆವು. ಈಗ ಶಾಂತಿಯುತ ಹೋರಾಟ ಮಾಡುತ್ತಿದ್ದೇವೆ. ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಸರ್ಕಾರಗಳು ಚುನಾವಣೆ ಸಂದರ್ಭಗಳಲ್ಲಿ ಮಾತ್ರ ಸಮುದಾಯಗಳ ಜನರ ಮಾತು ಕೇಳುತ್ತವೆ. ಬೇರೆ ಸಂದರ್ಭದಲ್ಲಿ ಯಾರೂ ನಮ್ಮನ್ನು ಮಾತನಾಡಿಸುವುದಿಲ್ಲ ಎಂದು ಸ್ವಾಮೀಜಿ ಹೇಳಿದರು.

ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಶಾಸಕ ಶಾಮನೂರು ಶಿವಶಂಕರಪ್ಪನವರ ಹೇಳಿಕೆ ಕುರಿತು, ‘ಧರ್ಮಗುರುಗಳಾಗಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು. ಈಗಾಗಲೇ ಸಮಾಜದ ಮುಖಂಡರು ಧ್ವನಿ ಎತ್ತಿದ್ದಾರೆ. ಈ ಬಗ್ಗೆ ಚರ್ಚಿಸುವುದಾಗಿಯು ಸಿಎಂ ಹೇಳಿದ್ದಾರೆ. ಬರೀ ಲಿಂಗಾಯತರು ಮಾತ್ರವಲ್ಲ. ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಉತ್ತಮ ಸ್ಥಾನಮಾನ ನೀಡಬೇಕು’ ಎಂದು ಹೇಳಿದರು.

ಒಬಿಸಿಗೆ ಸೇರಿಸಲು ಶಿಫಾರಸು ಮಾಡಿ

ಕೇಂದ್ರದ ಒಬಿಸಿ ಪಟ್ಟಿಗೆ ಲಿಂಗಾಯತ ಉಪಜಾತಿಗಳನ್ನು ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಈ ಸರ್ಕಾರದಲ್ಲೇ ಬೇರೆ ಜಾತಿಗಳನ್ನು ವಿವಿಧ ವರ್ಗಗಳಲ್ಲಿ ಮೀಸಲಾತಿಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಅದೇ ರೀತಿ ಲಿಂಗಾಯತ ಉಪಜಾತಿಗಳನ್ನು ಒಬಿಸಿಗೆ ಸೇರಿಸಲು ಶಿಫಾರಸು ಮಾಡಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.

ಇಂದಿನಿಂದ 3 ದಿನಗಳ ಐತಿಹಾಸಿಕ ಕಿತ್ತೂರು ಉತ್ಸವ; ಮೌಡ್ಯಕ್ಕೆ ಹೆದರಿ ಸಿಎಂ ಗೈರು?

ಚೆನ್ನಮ್ಮನ ದಾಖಲೆಗಳು, ಖಡ್ಗ ತರಿಸಬೇಕು

ಕಿತ್ತೂರು ರಾಣಿ ಚೆನ್ನಮ್ಮ ದೇಶದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ. ಝಾನ್ಸಿರಾಣಿ ಲಕ್ಷ್ಮೀಬಾಯಿಗಿಂತ 32 ವರ್ಷಗಳ ಮೊದಲೇ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಆದರೆ, ಸಿಗಬೇಕಾದಷ್ಟು ಗೌರವ ಸಿಕ್ಕಿಲ್ಲ. ಇತಿಹಾಸವನ್ನು ಸರಿಪಡಿಸುವ ನಿಟ್ಟಿನಲ್ಲಿ ಪುಣೆಯ ಪತ್ರಾಗಾರದಲ್ಲಿರುವ ಸುಮಾರು 32 ಸಾವಿರ ದಾಖಲೆಗಳನ್ನು ಕರ್ನಾಟಕಕ್ಕೆ ತರಬೇಕಿದೆ. ಅವರ ಹೋರಾಟದ ಬಗೆಗಿನ ವಿವರವಾದ ಸಂಶೋಧನೆಯಾಗಬೇಕು. ಕಿತ್ತೂರನ್ನು ಅಭಿವೃದ್ಧಿಪಡಿಸಬೇಕು. ಬ್ರಿಟಿಷ್ ಮ್ಯೂಸಿಯಂನಲ್ಲಿರುವ ಚೆನ್ನಮ್ಮಾಜಿಯ ಖಡ್ಗವನ್ನು ಭಾರತಕ್ಕೆ ತರಿಸಿಕೊಳ್ಳುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.

Follow Us:
Download App:
  • android
  • ios