Asianet Suvarna News Asianet Suvarna News

ಚುನಾವಣೆ ಹೊತ್ತಲ್ಲಿ ಮತ್ತೆ ಪಂಚಮಸಾಲಿ ಹೋರಾಟ ಕಿಚ್ಚು

ಕಳೆದ ವಿಧಾನಸಭೆ ಚುನಾವಣೆ ವೇಳೆ ತಾರಕಕ್ಕೇರಿದ್ದ ಪಂಚಮಸಾಲಿ ಮೀಸಲು ಹೋರಾಟ ಇದೀಗ ಲೋಕಸಭೆ ಚುನಾವಣೆ ವೇಳೆಯೂ ಭುಗಿಲೇಳುವ ಲಕ್ಷಣ ಗೋಚರಿಸುತ್ತಿದೆ. ಪಂಚಮಸಾಲಿ ಮುಖಂಡರು, ಮಠಾಧೀಶರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮೀಸಲಾತಿಗೆ ಆಗ್ರಹಿಸಿದರು. 

Panchamasali reservation issue during Lok Sabha elections gvd
Author
First Published Dec 13, 2023, 7:43 AM IST

ಸುವರ್ಣಸೌಧ (ಡಿ.13): ಕಳೆದ ವಿಧಾನಸಭೆ ಚುನಾವಣೆ ವೇಳೆ ತಾರಕಕ್ಕೇರಿದ್ದ ಪಂಚಮಸಾಲಿ ಮೀಸಲು ಹೋರಾಟ ಇದೀಗ ಲೋಕಸಭೆ ಚುನಾವಣೆ ವೇಳೆಯೂ ಭುಗಿಲೇಳುವ ಲಕ್ಷಣ ಗೋಚರಿಸುತ್ತಿದೆ. ಪಂಚಮಸಾಲಿ ಮುಖಂಡರು, ಮಠಾಧೀಶರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮೀಸಲಾತಿಗೆ ಆಗ್ರಹಿಸಿದರು. 

ಈ ವೇಳೆ ಪಂಚಮಸಾಲಿ ಸಮುದಾಯದಕ್ಕೆ 2ಎ ಮೀಸಲಾತಿ ಕಲ್ಪಿಸುವ ಕುರಿತು ಅಧಿವೇಶನ ಮುಗಿದ ಕೂಡಲೇ ಕಾನೂನು ತಜ್ಞರು, ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಮತ್ತು ಅಡ್ವೊಕೇಟ್‌ ಜನರಲ್‌ ಜೊತೆ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಈ ನಡುವೆ ಮುಖ್ಯಮಂತ್ರಿಗಳ ಭರವಸೆಯಂತೆ ಅಧಿವೇಶನ ಮುಗಿಯುವವರೆಗೆ ಕಾಯಬೇಕೇ ಅಥವಾ ನಿಗದಿಯಂತೆ ಬುಧವಾರದಿಂದ ಪ್ರತಿಭಟನೆ ಹೋರಾಟ ಆರಂಭಿಸಬೇಕೇ ಎಂಬ ಬಗ್ಗೆ ಸಮುದಾಯದ ಮುಖಂಡರಲ್ಲಿ ಗೊಂದಲ ಮೂಡಿತು. 

‘ಬಿಡಿಎ, ಬಿಬಿಎಂಪಿ ಜಾಗ ಒತ್ತುವರಿ ತೆರವು ಖಚಿತ’: ಡಿ.ಕೆ.ಶಿವಕುಮಾರ್‌

ಈ ವೇಳೆ ಮಾತನಾಡಿದ ಮೀಸಲು ಹೋರಾಟದ ನೇತೃತ್ವದ ವಹಿಸಿರುವ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಸ್ವಾಮೀಜಿ ಅವರು, ಕಳೆದ ಮೂರು ವರ್ಷಗಳಿಂದ ಪಕ್ಷಾತೀತವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಸಮುದಾಯದ ಹಿತದೃಷ್ಟಿಯಿಂದ ಮುಂದೆಯೂ ಅದೇ ರೀತಿ ಎಲ್ಲರೂ ಒಟ್ಟಾಗಿ ಹೋರಾಟ ನಡೆಸುವುದು ಎಲ್ಲರಿಗೂ ಗೌರವ. ಬುಧವಾರ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಆಯೋಜಿಸಿರುವ ಸಮುದಾಯದ ಮುಖಂಡರ ಸಭೆಯಲ್ಲಿ ಭಾಗಿಯಾಗಿ, ಸರ್ಕಾರದ ಭರವಸೆಯಂತೆ ಅಧಿವೇಶನ ಮುಗಿಯುವವರೆಗೆ ಕಾಯಬೇಕೇ ಇಲ್ಲವೇ ಪ್ರತಿಭಟನೆ ನಡೆಸಬೇಕೆ ಎಂಬ ಬಗ್ಗೆ ನಿರ್ಧರಿಸೋಣ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌, ಶಾಸಕರಾದ ವಿಜಯಾನಂದ ಕಾಶಪ್ಪನವರ್‌, ಅರವಿಂದ ಬೆಲ್ಲದ್‌, ಬಿ.ಆರ್‌.ಪಾಟೀಲ್‌, ಬಸನಗೌಡ ಪಾಟೀಲ್‌ ಯತ್ನಾಳ್‌, ವಿನಯ್‌ ಕುಲಕರ್ಣಿ, ಸಿ.ಸಿ.ಪಾಟೀಲ್‌ ಮತ್ತಿತರರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಕಳೆದ ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ನಮ್ಮ ಬೇಡಿಕೆ ಈಡೇರಿಸಿ ಈ ಅಧಿವೇಶನದಲ್ಲೇ ಘೋಷಣೆ ಮಾಡಬೇಕೆಂದು ಮನವಿ ಮಾಡಿದರು.

ನಾಳೆ ಹೋರಾಟ ಎಂದ ಬೆಲ್ಲದ್‌: ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್‌, ಹಿಂದಿನ ಸರ್ಕಾರ ಲಿಂಗಾಯಿತರಿಗೆ ಶೇ.7 ಮತ್ತು ಒಕ್ಕಲಿಗರಿಗೆ ಶೇ.6ರಷ್ಟು ಮೀಸಲಾತಿ ಘೋಷಿಸಿತ್ತು. ಅದರ ಅನುಸಾರ ಪಂಚಮಸಾಲಿಗಳು ಸೇರಿದಂತೆ ಲಿಂಗಾಯತರಿಗೆ 2ಸಿ ಮತ್ತು 2ಡಿ ಮೀಸಲಾತಿ ಜಾರಿ ಮಾಡಲು ಕೋರಿದ್ದೇವೆ. ಆದರೆ ಮುಖ್ಯಮಂತ್ರಿಗಳ ಸಭೆಯಲ್ಲಿ ಯಾವ ವಿಚಾರವೂ ಇತ್ಯರ್ಥ ಆಗಿಲ್ಲ. ಹಾಗಾಗಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸುತ್ತೇವೆ ಎಂದರು.

ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಏಕಾಏಕಿ ಡೆಂಘೀ ಕೇಸ್‌ ಹೆಚ್ಚಳ!

ಮತ್ತೊಂದೆಡೆ ಸ್ವಾಮೀಜಿ ಅವರ ಎದುರಲ್ಲೇ ಕಾಂಗ್ರೆಸ್‌ ಶಾಸಕ ವಿಜಯಾನಂದ ಕಾಶಪ್ಪನವರ್‌ ಮತ್ತು ಇತರೆ ಕೆಲ ಪದಾಧಿಕಾರಿಗಳು ಪ್ರತಿಭಟನೆ ಬೇಕು, ಬೇಡ ಎಂಬ ಬಗ್ಗೆ ವಾಗ್ವಾದ ನಡೆಸಿದ್ದಾರೆ. ಕೊನೆಗೆ ಸ್ವಾಮೀಜಿ ಅವರು ಬುಧವಾರ ಮುಖಂಡರ ಸಭೆ ನಡೆಸಿ ನಮ್ಮ ಮುಂದಿನ ತೀರ್ಮಾನ ಪ್ರಕಟಿಸೋಣ ಎಂದು ಹೇಳಿದ್ದಾರೆ.

Follow Us:
Download App:
  • android
  • ios