ಉಡುಪಿ[ಜ.14]: ‘ಪಕ್ಕೆಲುಬು’ ಎಂದು ಉಚ್ಚರಿಸಲು ಬಾರದ ವಿದ್ಯಾರ್ಥಿಯೊಬ್ಬನನ್ನು ಶಿಕ್ಷಕಕನೊಬ್ಬ ಥಳಿಸಿದ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರು ಮೊಬೈಲ್‌ ಬಳಸುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ರಾಜ್ಯದ ಎಲ್ಲ ಜಿಲ್ಲೆಗಳ ಶಿಕ್ಷಣಾಧಿಕಾರಿಗಳಿಗೂ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಪಕ್ಕೆಲುಬು’ ವಿಡಿಯೋ ಹರಿಬಿಟ್ಟ ಶಿಕ್ಷಕನ ವಿರುದ್ಧ ಕ್ರಮ

ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಕಾರ್ಯಕರ್ತರ ಸಂವಾದದಲ್ಲಿ ಅವರು ಈ ಮಾಹಿತಿ ನೀಡಿದರು. ಇತ್ತೀಚೆಗೆ ಶಾಲೆಯೊಂದರಲ್ಲಿ ಮಗುವೊಂದು ‘ಪಕ್ಕೆಲುಬು’ ಎಂದು ಉಚ್ಚರಿಸಲಾಗಿದೆ ಕಷ್ಟಪಡುತ್ತಿದ್ದ ಬಗ್ಗೆ ಶಿಕ್ಷಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಮೂಲಕ ಆ ಮಗುವಿಗೆ ಅವಮಾನ ಮಾಡಿದ್ದರು. ಆ ವಿಡಿಯೋದಲ್ಲಿ ಮಗುವಿನ ಮುಖದಲ್ಲಿದ್ದ ಆತಂಕ ಕಂಡಾಗ ನನಗೇ ಬಹಳ ಸಂಕಟವಾಯಿತು. ಇನ್ನು ಮಗುವಿನ ಹೆತ್ತವರಿಗೆ ಹೇಗಾಗಬೇಡ? ಈ ಸಂಬಂಧ ತಪ್ಪಿತಸ್ಥ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಆದರೆ ದುರಂತ ಎಂದರೆ ಆ ಜಿಲ್ಲೆಯಲ್ಲಿ ಶಿಕ್ಷಕನ ಅಮಾನತು ರದ್ದುಗೊಳಿಸಬೇಕು ಎಂದು ಪ್ರತಿಭಟನೆಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

‘ಪಕ್ಕೆಲುಬು’ ಶಿಕ್ಷಕ ಕೊನೆಗೂ ಪತ್ತೆ; ಸೇವೆಯಿಂದ ಅಮಾನತು!

ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಮರುಕಳಿಸಬಾರದು. ಹಾಗಾಗಿ ಶಿಕ್ಷಕರು ಶಾಲೆಯಲ್ಲಿ ಮೊಬೈಲ್‌ಗಳನ್ನು ಕಡ್ಡಾಯವಾಗಿ ಬಳಸದಂತೆ ಆದೇಶಿಸಲಾಗಿದೆ. ಶಾಲೆಯ ಯಾವುದೇ ಮಗುವಿನ ನ್ಯೂನತೆಯನ್ನು ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದು ಅಕ್ಷಮ್ಯ ಅಪರಾಧ. ಇಂಥದ್ದಕ್ಕೆಲ್ಲ ಯಾವುದೇ ಕಾರಣಕ್ಕೂ ನಾನು ಅವಕಾಶ ಕೊಡುವುದಿಲ್ಲ ಎಂದು ಸುರೇಶ್‌ ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.