ಬೆಂಗಳೂರು : ಇದ್ದ ಐದು ಎಕರೆ ಜಮೀನನ್ನು ಗಂಡ ಕುಡಿತಕ್ಕೇ ಮಾರಿ ಕಳೆದ, ಕುಡಿತ ಚಟದಿಂದ ಮದುವೆಯಾದ 13 ವರ್ಷಕ್ಕೆ ನಮ್ಮನ್ನು ತಬ್ಬಲಿ ಮಾಡಿ ಹೋದ. ಅಷ್ಟೊತ್ತಿಗೆ ನನಗಾಗಲೇ 3ರಿಂದ 12 ವರ್ಷದೊಳಗಿನ ಐದು ಮಕ್ಕಳಿದ್ದರು. ಊಟಕ್ಕೂ ಗತಿ ಇರಲಿಲ್ಲ, ಅನಾರೋಗ್ಯಕ್ಕೊಳಗಾದ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗದೆ ಒಬ್ಬೊಬ್ಬರೇ ಅಗಲಿ ಹೋದರು. ಈಗ ನಾನೂ ದಿನಾ ಸಾಯುತ್ತಿದ್ದೇನೆ....

ಇದು, ರಾಯಚೂರು ಜಿಲ್ಲೆ ಮಾಡ ಶಿರವರ ಗ್ರಾಮದ ವೃದ್ಧೆ ನೀಲಮ್ಮ ಅವರ ಕರುಳು ಕಿತ್ತು ಬರುವ ನೋವಿನ ಕತೆ. ನನಗೆ ಗಂಡ, ಮಕ್ಕಳು ಯಾರೂ ಇಲ್ಲ, ಆದರೆ, ಇದ್ದ ಒಬ್ಬ ತಂಗಿಯ ಮಗ ಮದ್ಯಪಾನಕ್ಕೆ ಹಣ ಕೊಡಲಿಲ್ಲ ಎಂದು ತನ್ನ ಹೆಂಡತಿ ಮತ್ತು ಮೂವರು ಮಕ್ಕಳನ್ನೇ ಬೆಂಕಿ ಇಟ್ಟು ಕೊಂದ. ಈಗ ನಾನು, ನನ್ನ ತಂಗಿ ಇಬ್ಬರೂ ತಬ್ಬಲಿ... ಇದು, ಮತ್ತೊಬ್ಬ ಮಹಿಳೆ ಹುಲಿಗಮ್ಮನ ಅಳಲು.

ನನ್ನ ಪತಿ ನಿತ್ಯವೂ ಮದ್ಯಪಾನ ಮಾಡಿಬಂದು ಚಿತ್ರಹಿಂಸೆ ನೀಡುತ್ತಿದ್ದಾನೆ. ಕುಡಿಯದೆ ಇದ್ದಾಗ ಚೆನ್ನಾಗಿಯೇ ಇರುತ್ತಾನೆ. ನನಗೆ ಅಪ್ಪ, ಅಮ್ಮ, ಸಂಬಂಧದವರು ಯಾರೂ ಇಲ್ಲ. ನನ್ನಂತವರ ಪಾಲಿಗೆ ಸರ್ಕಾರವೇ ನೆರವಾಗಬೇಕು ತಾನೇ... ಹೀಗೆ ತನ್ನ ವ್ಯಥೆ ಹೇಳಿಕೊಂಡಿದ್ದು ಬಳ್ಳಾರಿಯ ಅಂಬಿಕಾ.

ಇವು, ಉದಾಹರಣೆಯಷ್ಟೆ. ಮದ್ಯ ನಿಷೇಧಕ್ಕೆ ಆಗ್ರಹಿಸಿ 18 ದಿನಗಳ ಕಾಲ ಚಿತ್ರದುರ್ಗದಿಂದ ಪಾದಯಾತ್ರೆ ಮೂಲಕ ಬಂದು ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ಮಹಿಳೆಯರಲ್ಲಿ ಯಾರನ್ನು ಕೇಳಿದರೂ ಮದ್ಯಸೇವನೆಯಿಂದ ತಮ್ಮ ಗಂಡ, ಮಕ್ಕಳು ಅಥವಾ ಸಂಬಂಧಿಕರು ಸಾವನ್ನಪ್ಪಿದ, ಮನೆ ಮಠ ಮಾರಿ ಬೀದಿಪಾಲಾದ, ಹೊಡೆದು, ಬಡಿದು ಗಲಾಟೆ ಮಾಡಿಕೊಂಡು, ಕೊಲೆ, ಸುಲಿಗೆ ಮಾಡಿ ಜೈಲು ಸೇರಿದಂತೆ ಅನೇಕ ಕತೆಗಳನ್ನು ಹೇಳುತ್ತಿದ್ದರು.

ಪ್ರತಿಭಟನೆಯುದ್ದಕ್ಕೂ ತಾವು ಜೀವನದಲ್ಲಿ ಅನುಭವಿಸಿದ ನೋವಿನ ಕಥೆಗಳನ್ನು ಹೇಳಿಕೊಳ್ಳುತ್ತಿದ್ದರು. ಈ ವೇಳೆ ಅವರ ಕಣ್ಣುಗಳಲ್ಲಿ ಹರಿಯುತ್ತಿದ್ದ ನೀರು ನೆರೆದಿದ್ದ ಎಲ್ಲರ ಕಣ್ಣುಗಳನ್ನೂ ಒದ್ದೆಯಾಗಿಸುತ್ತಿತ್ತು.

ರಾಯಚೂರಿನ ನೀಲಮ್ಮ, ನನಗೆ ಬಂದಿರುವ ಕಷ್ಟಯಾರಿಗೂ ಬರುವುದು ಬೇಡ ಕುಮಾರಣ್ಣ (ಮುಖ್ಯಮಂತ್ರಿ ಕುಮಾರಸ್ವಾಮಿ), ಇದ್ದ ಐದು ಎಕರೆ ಜಮೀನನ್ನು ಮಾರಿ ಗಂಡ ಕುಡಿದೇ ಸತ್ತ. ಐದು ಮಕ್ಕಳಿಗೆ ಊಟ ಹಾಕಲು ನನಗೆ ಶಕ್ತಿ ಇಲ್ಲದೆ, ಕಾಯಿಲೆ ಬಿದ್ದಾಗ ಆಸ್ಪತ್ರೆಗೆ ಕರೆದೊಯ್ಯಲು ಹಣವಿಲ್ಲದೆ ಮಕ್ಕಳೂ ಸತ್ತು ಹೋದರು. ನಾನೊಬ್ಬಳು ಬದುಕಿದ್ದೇನೆ. ನನ್ನಂತಹ ಕಷ್ಟಬೇರೆ ಹೆಣ್ಣು ಮಕ್ಕಳಿಗೆ ಬರಬಾರದು. ಹಾಗಾಗಿ ಮದ್ಯ ನಿಷೇಧ ಮಾಡಿ ಎಂದು ಅಂಗಲಾಚಿದರು.

ರಾಯಚೂರಿನ ಜೀರ್ಗಲ್ಲು ಮಲ್ಲಾಪುರ ಅವಳಿ ಗ್ರಾಮದ ಹುಲಿಗಮ್ಮ, ನಿರ್ಮಲಾ, ಗಂಗಮ್ಮ ಮತ್ತಿತರರ ಮಹಿಳೆಯರು ನಮ್ಮ ಗ್ರಾಮಗಳಲ್ಲಿ ಎಂಟು ಹತ್ತು ವರ್ಷದ ಮಕ್ಕಳೆಲ್ಲರೂ ಮದ್ಯ ವ್ಯಸನ ಮಾಡಲಾರಂಭಿಸಿದ್ದಾರೆ. ನಿತ್ಯವೂ ಒಂದಿಲ್ಲೊಂದು ಹೊಡೆದಾಟ, ಬಡಿದಾಟ. ಜೀವನವೇ ಸಾಕಾಗಿ ಹೋಗಿದೆ.

ನನ್ನ ತಂಗಿಯ ಮಗ ನಟರಾಜ ವಿಪರೀತ ಮದ್ಯವ್ಯಸನಿಯಾಗಿದ್ದ, ಊರಲ್ಲಿ ಇದ್ದ ಜಮೀನನ್ನೆಲ್ಲಾ ಮಾರಿದ ಹಣವನ್ನೆಲ್ಲಾ ಕಳೆದ. ನಂತರ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬೆಂಗಳೂರಿಗೆ ಬಂದು ಗುಡಿಸಲ್ಲಿ ವಾಸವಿದ್ದ. ಇಲ್ಲಿ ಸಾಕಷ್ಟುದಿನ ಕೆಲಸ ಸಿಗದೆ, ಕುಡಿತಕ್ಕೆ ಹೆಂಡತಿಯನ್ನು ಹಣಕ್ಕಾಗಿ ಪೀಡಿಸಿ ಜಗಳವಾಡಿದ್ದಾನೆ. ಕೊಡದಿದ್ದಕ್ಕೆ ರಾತ್ರಿ ಮಲಗಿದ್ದಾಗ ಗುಡಿಸಿಲಿಗೆ ಬೆಂಕಿ ಹಚ್ಚಿ ಹೆಂಡತಿ ಮಕ್ಕಳನ್ನೇ ಸುಟ್ಟುಬಿಟ್ಟ. ಇದು ಕಳೆದ ತಿಂಗಳಷ್ಟೇ ನಡೆದ ಘಟನೆ. ಮದ್ಯ ನಿಷೇಧದಿಂದ ಇಂತಹ ಘಟನೆಗಳನ್ನು ಸರ್ಕಾರ ತಡೆಯಬಹುದು ಎಂದು ಮನವಿ ಮಾಡಿದರು.