Asianet Suvarna News Asianet Suvarna News

ಕರುನಾಡಲ್ಲಿ ಭಾರೀ ಮಳೆ: ಉಕ್ಕಿ ಹರಿಯುತ್ತಿರುವ ನದಿಗಳು

ಕಾವೇರಿ, ಕಬಿನಿ, ತುಂಗಾ, ಶರಾವತಿಗೆ ಭಾರಿ ನೀರು, ಭಟ್ಕಳದಲ್ಲಿ ಗುಡ್ಡ ಕುಸಿತ

Overflowing Rivers Due to Heavy Rain in Karnataka grg
Author
Bengaluru, First Published Aug 7, 2022, 2:30 AM IST

ಬೆಂಗಳೂರು(ಆ.07):  ಉತ್ತರ ಕರ್ನಾಟಕ ಮತ್ತು ಹಳೇ ಮೈಸೂರು ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಬಿರುಸಾಗಿದ್ದ ಮಳೆ ಇಳಿಮುಖವಾಗಿದ್ದರೂ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ನಿರಂತರ ಮಳೆ ಮುಂದುವರಿದಿದೆ. ಭಟ್ಕಳದ ಮುಟ್ಟಳ್ಳಿಯಲ್ಲಿ ಈಚೆಗೆ ಮನೆ ಕುಸಿದು ನಾಲ್ವರು ಅಸುನೀಗಿದ ಜಾಗದಲ್ಲೇ ಮತ್ತೆ ಗುಡ್ಡ ಕುಸಿತ ಉಂಟಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ಕಳೆದ ಕೆಲವು ದಿನಗಳಿಂದ ಸುರಿದ ಉತ್ತಮ ಮಳೆಗೆ ಕಾವೇರಿ, ಕಬಿನಿ, ತುಂಗಾ, ಶರಾವತಿ ಸೇರಿದಂತೆ ಹಲವು ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿದ್ದರೆ, ರಾಮನಗರ ಜಿಲ್ಲೆಯಲ್ಲಿ ಮತ್ತಷ್ಟುಕೆರೆಗಳು ತುಂಬಿ ಕೋಡಿ ಹರಿದಿವೆ. ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಯಾದಗಿರಿ, ಗದಗ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದರೆ, ಹಾಸನ, ಶಿವಮೊಗ್ಗ, ಹಾವೇರಿ, ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿದಿದೆ.

ಭಟ್ಳದಲ್ಲಿ ಮತ್ತೆ ಗುಡ್ಡಕುಸಿತ:

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುಟ್ಟಳ್ಳಿಯಲ್ಲಿ ಗುಡ್ಡ ಮನೆಯ ಮೇಲೆ ಕುಸಿದು ನಾಲ್ವರು ಅಸುನೀಗಿದ ಘಟನೆ ನಡೆದ ಪ್ರದೇಶದಲ್ಲೇ ಮತ್ತೆ ಗುಡ್ಡ ಕುಸಿದಿದ್ದು ಅಲ್ಲಿದ್ದ 10 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಹೊನ್ನಾವರದ ಅಪ್ಸರಕೊಂಡದಲ್ಲೂ ಗುಡ್ಡ ಕುಸಿತದ ಭೀತಿ ಎದುರಾಗಿದ್ದು ಅಲ್ಲಿನ 60ಕ್ಕೂ ಅಧಿಕ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಶರಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ, ಲಿಂಗನಮಕ್ಕಿ ಅಣೆಕಟ್ಟಿಗೆ ಹೆಚ್ಚಿನ ನೀರು ಹರಿದುಬಂದಿರುವುದರಿಂದ ನದಿದಡದ ತಗ್ಗು ಪ್ರದೇಶದ ಜನರಿಗೆ ಸುರಕ್ಷಿತ ಸ್ಥಳಕ್ಕೆ ಹೋಗಲು ಸೂಚನೆ ನೀಡಲಾಗಿದೆ.

ಕೊಡಗು- ಮಡಿಕೇರಿಯಲ್ಲಿ ಕಂಡು ಕೇಳರಿಯದ ಮೇಘಸ್ಪೋಟ, ಭೂಕುಸಿತ ಕಂಟಕ

ಕೊಡಗು ಜಿಲ್ಲೆಯಲ್ಲಿ ಬಿಡುವು ನೀಡದೆ ಮಳೆ ಸುರಿಯುತ್ತಿದ್ದು, ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಮತ್ತೆ ಭರ್ತಿಯಾಗಿದೆ. ಮಡಿಕೇರಿ ತಾಲೂಕಿನ ಹೊದವಾಡ- ಕೊಟ್ಟಮುಡಿಯಿಂದ ನಾಪೋಕ್ಲುವಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಅರ್ಧ ಭಾಗ ಕುಸಿದಿದ್ದು, ವಾಹನ ಸಂಚಾರ ವ್ಯತ್ಯಯ ಉಂಟಾಗಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕೋಟಯ್ಯನ ಕೊಪ್ಪಲು ಹಾಗೂ ಆನೆಕಟ್ಟೆಹಡಲು ಸಂಪರ್ಕ ಕಲ್ಪಿಸುವ ರಸ್ತೆ ಬಳಿ ಭೂಕುಸಿತ ಉಂಟಾಗಿ ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಇನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ ತಾಲೂಕುಗಳಲ್ಲಿ ಭಾರೀ ಮಳೆಯಿಂದಾಗಿ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಅಪಾಯಮಟ್ಟಮೀರಿ ಹರಿಯುತ್ತಿವೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆ ಶನಿವಾರವೂ ಮುಂದುವರಿದಿದೆ. ತೀವ್ರ ಮಳೆಯಾಗುತ್ತಿರುವ ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ 47 ಮಂದಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಭಾನುವಾರ ಮಳೆ ಇನ್ನಷ್ಟುಬಿರುಸಾಗುವ ಸಾಧ್ಯತೆಯಿದ್ದು, ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಆ.8ರಿಂದ 11ರವರೆಗೆ ನಾಲ್ಕು ದಿನಗಳ ಕಾಲ ಆರೇಂಜ್‌ ಅಲರ್ಚ್‌ ಪ್ರಕಟಿಸಲಾಗಿದೆ.
 

Follow Us:
Download App:
  • android
  • ios