ಬೆಂಗಳೂರು(ಆ.10): ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದ ವ್ಯಕ್ತಿಯ ಮೃತದೇಹವನ್ನು ನೀಡಲು ಚಿಕಿತ್ಸಾ ವೆಚ್ಚ ಒಂಬತ್ತು ಲಕ್ಷ ರು. ಪಾವತಿಸುವಂತೆ ನಗರದ ಖಾಸಗಿ ಆಸ್ಪತ್ರೆಯೊಂದು ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದೆ.

ನಗರದ ಆರ್‌ಪಿಸಿ ಲೇಔಟ್‌ನ ನಿವಾಸಿಯೊಬ್ಬರಿಗೆ ಜ್ವರ ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜು.19ರಂದು ಪರೀಕ್ಷೆಗಾಗಿ ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಸಾಗರ್‌ ಆಸ್ಪತ್ರೆ ದಾಖಲಾಗಿದ್ದರು. ಪರೀಕ್ಷೆ ನಡೆಸಿದ್ದ ಆಸ್ಪತ್ರೆಯ ವೈದ್ಯರು ಮೂತ್ರಪಿಂಡ ಮತ್ತು ಶ್ವಾಸಕೋಶದ ಸಮಸ್ಯೆಯಿದೆ ಎಂದು ಚಿಕಿತ್ಸೆ ಮುಂದುವರೆಸಿದ್ದರು.

ಬೆಂಗಳೂರಲ್ಲಿ ಮಹಾಮಾರಿ ಕೊರೋನಾ ಸಾವಿನ ಪ್ರಮಾಣ ಇಳಿಮುಖ!

ಈ ಮಧ್ಯರೋಗಿಯ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಿಳಿಸಿದ್ದ ವೈದ್ಯರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆ.7ರಂದು ರೋಗಿಯು ಸಾವನ್ನಪ್ಪಿದ್ದರು. ಈ ವೇಳೆ ಆಸ್ಪತ್ರೆ ಸಿಬ್ಬಂದಿ, ರೋಗಿಗೆ ಈವರೆಗೂ ಚಿಕಿತ್ಸೆ ನೀಡಿರುವುದಕ್ಕೆ ವೆಚ್ಚವಾಗಿರುವ 9 ಲಕ್ಷ ರು.ಗಳನ್ನು ಪಾವತಿ ಮಾಡಿದಲ್ಲಿ ಮಾತ್ರ ಮೃತದೇಹ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ಮೃತ ದೇಹಕ್ಕಾಗಿ ಆಸ್ಪತ್ರೆ ಮುಂದೆ ಕಾಯುತ್ತಿದ್ದೇವೆ ಎಂದು ಸಂಬಂಧಿಕರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಮೃತದೇಹ ಹಸ್ತಾಂತರಕ್ಕೆ ಕ್ರಮ

ಕುಮಾರಸ್ವಾಮಿ ಲೇಔಟ್‌ನ ಸಾಗರ್‌ ಆಸ್ಪತ್ರೆಯಲ್ಲಿ ಮೃತಪಟ್ಟರೋಗಿಯ ದೇಹ ಹಸ್ತಾಂತರಿಸಲು 9 ಲಕ್ಷ ರು. ಬಿಲ್‌ ಪಾವತಿಸುವಂತೆ ಕುಟುಂಬದವರಿಗೆ ಹಿಂಸೆ ಮಾಡುತ್ತಿರುವುದು ಖಂಡನೀಯ. ಆಸ್ಪತ್ರೆ ಮುಖ್ಯಸ್ಥರ ಜೊತೆ ಮಾತನಾಡಿ ಮೃತದೇಹ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳುವುದಾಗಿ ಸಚಿವ ಡಾ. ಕೆ.ಸುಧಾಕರ್‌ ಹೇಳಿದ್ದಾರೆ. ಕೊರೋನಾ ಸಂಕಷ್ಟದ ಕಾಲದಲ್ಲಿ ಹಣ ಗಳಿಸುವುದು ಖಾಸಗಿ ಆಸ್ಪತ್ರೆಗಳಿಗೆ ಮಾನದಂಡವಾಗಬಾರದು. ಆಸ್ಪತ್ರೆ ಮುಖ್ಯಸ್ಥರೊಂದಿಗೆ ಮಾತನಾಡಿ, ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇನೆ ಎಂದು ಟ್ವೀಟ್‌ನಲ್ಲಿ ಭರವಸೆ ನೀಡಿದ್ದಾರೆ.