ಪ್ರಚಾರದ ವೇಳೆ ಕೋವಿಡ್ ನಿಯಮ ಕೇಳೋರಿಲ್ಲ: ರಾಜಕೀಯ ಪಕ್ಷಗಳ ವಿರುದ್ಧ ಜನಾಕ್ರೋಶ
ಕೋವಿಡ್ ನಿಯಮಾವಳಿಗೆ ಜನಪ್ರತಿನಿಧಿಗಳಿಂದಲೇ ತಿಲಾಂಜಲಿ| ಜನಪ್ರತಿನಿಧಿಗಳಿಗಿಲ್ಲ, ಜನಸಾಮಾನ್ಯರಿಗಷ್ಟೇ ರೂಲ್ಸ್| ಸಾರ್ವಜನಿಕರ ಆಕ್ರೋಶ| ಉಪ ಚುನಾವಣೆ ಪ್ರಚಾರದ ವೇಳೆ ಪಾಲನೆಯಾಗದ ನಿಯಮಾವಳಿ|
ಬೆಂಗಳೂರು(ಏ.04): ಕೋವಿಡ್ 2ನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವಲ್ಲಿ ಜನಪ್ರತಿನಿಧಿಗಳೇ ಹಿಂದೆ ಬಿದ್ದಿದ್ದಾರೆ. ಅದರಲ್ಲೂ ಉಪ ಚುನಾವಣೆ ನಡೆಯುತ್ತಿರುವ ರಾಯಚೂರಿನ ಮಸ್ಕಿ ಮತ್ತು ಬೀದರ್‌ನ ಬಸವಕಲ್ಯಾಣ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ವೇಳೆ ಕೋವಿಡ್ ನಿಯಮಾವಳಿ ಸ್ಪಷ್ಟವಾಗಿ ಸ್ಪಷ್ಟವಾಗಿ ಉಲ್ಲಂಘನೆಯಾಗುತ್ತಿದೆ. ಮೂರೂ ಪ್ರಮುಖ ಪಕ್ಷಗಳಿಂದ ಕೋವಿಡ್ ನಿಯಮಾವಳಿ ಪಾಲನೆಯೇ ಆಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಕೋವಿಡ್ ನಿಯಮಾವಳಿಗಳು ಜನಸಾಮಾನ್ಯರಿಗೆ ಮಾತ್ರವೇ? ರಾಜಕಾರಣಿಗಳು, ಪುಡಾರಿಗಳಿಗೆ ಅನ್ವಯವಾಗುವುದಿಲ್ಲವೇ? ಜನ ಸೇರುತ್ತಾರೆನ್ನುವ ಕಾರಣಕ್ಕೆ ಮದುವೆ, ಸಭೆ, ಸಮಾರಂಭಗಳು, ಜಾತ್ರೆಗಳಿಗೆ ನಿರ್ಬಂಧ ಹೇರುವ ಜಿಲ್ಲಾಡಳಿತಗಳು ರಾಜಕೀಯ ಸಭೆ, ಸಮಾರಂಭಗಳಲ್ಲಿ ಸರ್ಕಾರದ ಮಾರ್ಗಸೂಚಿ ಸ್ಪಷ್ಟವಾಗಿ ಉಲ್ಲಂಘನೆಯಾಗುತ್ತಿದ್ದರೂ ಅದರಲ್ಲೂ ಸರ್ಕಾರದ ಪ್ರತಿನಿಧಿಗಳೇ ಈ ನಿಯಮಾವಳಿ ಉಲ್ಲಂಘಿಸುತ್ತಿದ್ದರೂ ಯಾಕೆ ಮೌನವಾಗಿದ್ದಾರೆಂದು ಜನ ಪ್ರಶ್ನಿಸಲಾರಂಭಿಸಿದ್ದಾರೆ.
ಕೊರೋನಾ ಬಗ್ಗೆ ಆಘಾತಕಾರಿ ಸುದ್ದಿ: ಎಚ್ಚೆತ್ತುಕೊಳ್ಳದಿದ್ರೆ ಕಾದಿದೆ ಗಂಡಾಂತರ..!
ಬೆಳಗಾವಿಯಲ್ಲಿ ಶನಿವಾರ ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಶಶಿಕಲಾ ಜೊಲ್ಲೆ, ಗೋವಿಂದ ಕಾರಜೋಳ, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮತಬೇಟೆ ನಡೆಸಿದರು. ವಿವಿಧೆಡೆ ಜನಸಾಮಾನ್ಯರೊಂದಿಗೆ ಬೆರೆತು ಪ್ರಚಾರ ನಡೆಸಿದರು. ಈ ವೇಳೆ ಸಾಮಾಜಿಕ ಅಂತರ ಮಾಯವಾಗಿತ್ತು. ನಾಯಕರು ಮಾಸ್ಕ್ ಹಾಕಿದ್ದರೂ ಬೆಂಬಲಿಗರಲ್ಲಿ ಬಹುತೇಕರು ಮಾಸ್ಕ್ ಇಲ್ಲದೆ ಓಡಾಡುತ್ತಿದ್ದರು. ಅಲ್ಲಲ್ಲಿ ಗುಂಪು ಸೇರುತ್ತಿದ್ದರು.
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಕಳೆದ ತಿಂಗಳು ಬೃಹತ್ ರಾರಯಲಿ ಆಯೋಜಿಸಲಾಗಿತ್ತು. ರಾರಯಲಿಯಲ್ಲಿ ಸಾಮಾಜಿಕ ಅಂತರ ಉಲ್ಲಂಘಿಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಈಗಾಗಲೇ ಎರಡೂ ಪಕ್ಷಗಳಿಗೆ ನೋಟಿಸ್ ನೀಡಿದ್ದಾರೆ. ಇಷ್ಟಾದರೂ ಶನಿವಾರವೂ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ವೇಳೆ ನಿಯಮಾವಳಿ ಉಲ್ಲಂಘಿಸಲಾಗಿತ್ತು. ಬಸವಕಲ್ಯಾಣದಲ್ಲೂ ಇದೇ ಪರಿಸ್ಥಿತಿ ಇತ್ತು.