Asianet Suvarna News Asianet Suvarna News

ರಸ್ತೆಯಲ್ಲೇ ಅನಾಥವಾದ ಡಾ| ರಾಜ್‌ಕುಮಾರ್‌ ಶಿಲಾನ್ಯಾಸ

  • ರಸ್ತೆಯಲ್ಲೇ ಅನಾಥವಾದ ಡಾ ರಾಜ್‌ಕುಮಾರ್‌ ಶಿಲಾನ್ಯಾಸ
  • -ನಿರ್ಲಕ್ಷ್ಯದ ಪರಮಾವಧಿ ಮಾಗಡಿ ರಸ್ತೆಯ ಪ್ರಸನ್ನ ಚಿತ್ರ ಮಂದಿರ ಜಂಕ್ಷನ್‌ನಲ್ಲಿದ್ದ ಶಿಲಾನ್ಯಾಸ
  • ಕಾಮಗಾರಿಗಾಗಿ ತೆಗೆದಿಟ್ಟು ಹಾಗೇ ಬಿಟ್ಟು ಬಿಬಿಎಂಪಿ

 

Orphaned on the road Rajkumar Stone Foundation at magadi bengaluru
Author
Bengaluru, First Published Aug 17, 2022, 5:54 AM IST

ಬೆಂಗಳೂರು (ಆ.17) : ಬಿಬಿಎಂಪಿಯು ಕಾಮಗಾರಿ ವೇಳೆ ಮೇರು ನಟ ಡಾ ರಾಜ್‌ಕುಮಾರ್‌ ರಸ್ತೆ ನಾಮಕರಣದ ಸಂದರ್ಭದಲ್ಲಿ ಅಳವಡಿಸಿದ್ದ ಶಿಲಾನ್ಯಾಸವನ್ನು ಕಿತ್ತಿಟ್ಟು ವರ್ಷಗಳೇ ಕಳೆದ್ದು, ಮರು ಸ್ಥಾಪಿಸದೇ ದಿವ್ಯ ನಿರ್ಲಕ್ಷ್ಯ ತೋರಿರುವುದು ರಾಜ್‌ಕುಮಾರ್‌ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ಕರ್ನಾಟಕದ ಹೆಮ್ಮೆ, ಕನ್ನಡ ಚಿತ್ರರಂಗ ಕಂಡ ಧೀಮಂತ ನಟ ರಾಜಕುಮಾರ್‌ ಅವರ ಹೆಸರನ್ನು ಪ್ರಸನ್ನ ಚಿತ್ರ ಮಂದಿರ ಜಂಕ್ಷನ್‌ನಿಂದ ಮೈಸೂರು ಸ್ಯಾಂಡಲ್‌ ಸೋಪ್‌ ಫ್ಯಾಕ್ಟರಿ ವರೆಗಿನ ಸುಮಾರು 5 ಕಿ.ಮೀ ಉದ್ದದ ರಸ್ತೆಗೆ 1994ರಲ್ಲಿ ಅವರಿಗೆ ಗೌರವ ಸೂಚಕವಾಗಿ ಅಂದಿನ ಬೆಂಗಳೂರು ಮಹಾನಗರ ಪಾಲಿಕೆಯು ನಾಮಕರಣ ಮಾಡಿತ್ತು.

Karnataka News Live Updates: ಲಾಲ್ ಫ್ಲವರ್ ಶೋ, ಡಾ. ರಾಜ್ ಕುಟುಂಬ್ ಭಾಗಿ

ಇದೀಗ ಬಿಬಿಎಂಪಿ(BBMP)ಯೇ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರ ಜಂಕ್ಷನ್‌ನಲ್ಲಿದ್ದ ಶಿಲಾನ್ಯಾಸವನ್ನು ಕಿತ್ತು ಬೇಕಾಬಿಟ್ಟಿಪಾದಚಾರಿ ಮಾರ್ಗದ ಪಕ್ಕದ ಗೋಡೆಗೆ ಒರಗಿಸಿ ನಿಲ್ಲಿಸಲಾಗಿದೆ. ಹೀಗೆ ನಿಲ್ಲಿಸಿ ಬರೋಬ್ಬರಿ ಒಂದು ವರ್ಷ ಕಳೆದರೂ ಸರಿಪಡಿಸದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅನಾಥವಾಗಿ ನಿಂತಿರುವ ಶಿಲಾನ್ಯಾಸವನ್ನು ಮರು ಅಳವಡಿಸುವಂತೆ ಸ್ಥಳೀಯರು, ಕನ್ನಡಪರ ಹೋರಾಟಗಾರರು ಪಾಲಿಕೆ ಅಧಿಕಾರಿಗಳಿಂದ ಹಿಡಿದು ಸ್ಥಳೀಯ ಜನಪ್ರತಿನಿಧಿಗಳ ವರೆಗೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಿ ಸಾಕಷ್ಟುಟೀಕೆ ಮಾಡಿದರೂ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಕನ್ನಡಪರ ಹೋರಾಟಗಾರ ಗೋಮೂರ್ತಿ ಯಾದವ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಅಭಿಮಾನದ ಭಾರೀ ಮೆರವಣಿಗೆ 

ಬೆಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಅಂದಿನ ಮೇಯರ್‌ ಹುಚ್ಚಪ್ಪ ಡಾ ರಾಜಕುಮಾರ್‌ ರಸ್ತೆ (Dr.Rajkumar Road)ನಾಮಕರಣ ವಿಷಯ ಮಂಡಿಸಿದ್ದರು. ಆಗ ರಾಜಾಜಿ ನಗರದ 80 ಅಡಿ ರಸ್ತೆಗೆ ಡಾ.ರಾಜ್‌ಕುಮಾರ್‌ ರಸ್ತೆ ಎಂದು ನಾಮಕರಣಕ್ಕೆ ಸರ್ವಾನುಮತದಿಂದ ನಿರ್ಣಯಿಸಲಾಗಿತ್ತು. ಅದರಂತೆ 1994ರ ಜನವರಿ 24ರಂದು ಯಶವಂತಪುರದ ಮೈಸೂರು ಸ್ಯಾಂಡಲ್‌ ಸೋಪ್‌ ಫ್ಯಾಕ್ಟರಿಯಿಂದ ಪ್ರಸನ್ನ ಚಿತ್ರಮಂದಿರದ ವರೆಗೆ ಕನ್ನಡಪರ ಹೋರಾಟಗಾರರು, ಕನ್ನಡಾಭಿಮಾನಿಗಳು, ಕಲಾವಿದರು ಬೃಹತ್‌ ಮೆರವಣಿಗೆ ನಡೆಸಿದ್ದರು. ರಸ್ತೆ ಉದ್ದಕ್ಕೂ ಹೂ, ತಳಿರು ತೋರಣದಿಂದ ಅಲಂಕಾರ ಮಾಡಲಾಗಿತ್ತು. ರಾಜಾಜಿ ನಗರದ ವಿವೇಕಾನಂದ ಕಾಲೇಜು ಮೈದಾನದಲ್ಲಿ ಆಯೋಜಿಸಿ ಡಾ ರಾಜ್‌ಕುಮಾರ್‌ ರಸ್ತೆ ನಾಮಕರಣ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಡಾ ವೀರಪ್ಪ ಮೊಯ್ಲಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಭಾಗವಹಿಸಿದ್ದರು. ಈ ಸ್ಮರಣಾರ್ಥ ಪ್ರಸನ್ನ ಚಿತ್ರಮಂದಿರ ಜಂಕ್ಷನ್‌ನಲ್ಲಿ ಶಿಲಾನ್ಯಾನ ಸ್ಥಾಪಿಸಲಾಗಿತ್ತು.

ಅಣ್ಣಾವ್ರ 'ಬಂಗಾರದ ಮನುಷ್ಯ' ಚಿತ್ರಕ್ಕೆ 50 ವರ್ಷಗಳ ಸಂಭ್ರಮ..!

ಡಾ. ರಾಜ್‌ಕುಮಾರ್‌ ಅವರ ಮೇಲಿನ ಅಭಿಮಾನದಿಂದ ರಾಜಾಜಿನಗರದ 80 ಅಡಿ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿತ್ತು. ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯದಿಂದ ಈ ರೀತಿ ಆಗಿದೆ. ಈ ಕುರಿತು ಸ್ಥಳೀಯ ಶಾಸಕರಾದ ವಿ.ಸೋಮಣ್ಣ ಮತ್ತು ಸುರೇಶ್‌ ಕುಮಾರ್‌ ಅವರೊಂದಿಗೆ ಮಾತನಾಡಿ ಕೂಡಲೇ ಸರಿಪಡಿಸುವ ಕೆಲಸ ಮಾಡಲಾಗುವುದು.

-ಹುಚ್ಚಪ್ಪ, ಮಾಜಿ ಮೇಯರ್‌.

ಗುರುಸ್ವಾಮಿಗೂ ಅಪಮಾನ: ಕಾವೇರಿ ವಿವಾದ ತಾರಕ್ಕೇರಿದ 2002ರಲ್ಲಿ ಕನ್ನಡಪರ ಹೋರಾಟಗಾರ ಗುರುಸ್ವಾಮಿ ಎಂಬುವವರು ಕಪಿಲಾ ನದಿಗೆ ಹಾರಿ ಪ್ರಾಣ ತ್ಯಾಗ ಮಾಡಿದ್ದರು. ಗುರುಸ್ವಾಮಿ ಅವರ ಸ್ಮರಣಾರ್ಥ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರಸನ್ನ ಚಿತ್ರಮಂದಿರ ಜಂಕ್ಷನ್‌ನಲ್ಲಿ ಫಲಕ ಅಳವಡಿಸಲಾಗಿತ್ತು. ಮೆಟ್ರೋ ಕಾಮಗಾರಿ ವೇಳೆ ಈ ಫಲಕವನ್ನು ಕಿತ್ತು ಹಾಕಲಾಗಿದೆ. ಪುನರ್‌ ಸ್ಥಾಪಿಸುವ ಕೆಲಸ ಮಾಡಿಲ್ಲ. ಈ ಕುರಿತು ಮೆಟ್ರೋ ಅಧಿಕಾರಿಗಳ ಕಚೇರಿಗೆ ಅಲೆದು ಸಾಕಾಗಿದೆ ಎಂದು ಗೋಮೂರ್ತಿ ಯಾದವ್‌ ಆರೋಪಿಸಿದ್ದಾರೆ.

Follow Us:
Download App:
  • android
  • ios