ಟನ್‌ ಕಬ್ಬಿಗೆ ₹50 ಹೆಚ್ಚುವರಿ ದರ ಪಾವತಿಗೆ ಆದೇಶ

ಕಬ್ಬು ಬೆಳೆಗಾರರು ಹೋರಾಟ ತೀವ್ರಗೊಳಿಸಿರುವ ಬೆನ್ನಲ್ಲೇ ಎಥೆನಾಲ್‌ ಉತ್ಪಾದಿಸುವ ಕಾರ್ಖಾನೆಗಳು ಎಫ್‌ಆರ್‌ಪಿಗಿಂತ ಹೆಚ್ಚುವರಿಯಾಗಿ ಪ್ರತಿ ಟನ್‌ಗೆ 50 ರು. ಪಾವತಿಸುವಂತೆ ಕಬ್ಬು ನಿಯಂತ್ರಣ ಮಂಡಳಿ ಆದೇಶಿಸಿದೆ.

Ordered to pay an additional rate of Rs 50 per ton of sugarcane gvd

ಬೆಂಗಳೂರು (ಡಿ.08): ಕಬ್ಬು ಬೆಳೆಗಾರರು ಹೋರಾಟ ತೀವ್ರಗೊಳಿಸಿರುವ ಬೆನ್ನಲ್ಲೇ ಎಥೆನಾಲ್‌ ಉತ್ಪಾದಿಸುವ ಕಾರ್ಖಾನೆಗಳು ಎಫ್‌ಆರ್‌ಪಿಗಿಂತ ಹೆಚ್ಚುವರಿಯಾಗಿ ಪ್ರತಿ ಟನ್‌ಗೆ 50 ರು. ಪಾವತಿಸುವಂತೆ ಕಬ್ಬು ನಿಯಂತ್ರಣ ಮಂಡಳಿ ಆದೇಶಿಸಿದೆ. ಕಬ್ಬಿಗೆ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಪ್ರತಿ ಟನ್‌ಗೆ 3050 ರುಪಾಯಿ ಇದೆ. ಆದರೆ ಕಾರ್ಖಾನೆಗಳು ಉಪ ಉತ್ಪನ್ನಗಳಿಂದ ಹೆಚ್ಚು ಲಾಭ ಮಾಡುತ್ತಿದ್ದು, ಲಾಭಾಂಶದಲ್ಲಿ ರೈತರಿಗೆ ಪಾಲು ನೀಡುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಎಥೆನಾಲ್‌ ಉತ್ಪಾದಿಸುವ ಕಾರ್ಖಾನೆಗಳು ಹೆಚ್ಚುವರಿಯಾಗಿ ಪ್ರತಿ ಟನ್‌ಗೆ 50 ರು. ಪಾವತಿಸುವಂತೆ ಆದೇಶ ಹೊರಡಿಸಲಾಗಿದೆ.

ಎಫ್‌ಆರ್‌ಪಿ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಹದಿನೈದು ದಿನದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಮಂಡಳಿ, ಸದ್ಯಕ್ಕೆ ಎಥೆನಾಲ್‌ ಉತ್ಪಾದಿಸುವ ಕಾರ್ಖಾನೆಗಳು ಎಫ್‌ಆರ್‌ಪಿ ಜೊತೆಗೆ ಟನ್‌ಗೆ 50 ರು. ಹೆಚ್ಚುವರಿಯಾಗಿ ಪಾವತಿಸಬೇಕು. ಕಬ್ಬು ನುರಿಯುವ ಹಂಗಾಮು ಮುಗಿದ ಬಳಿಕ ಸಕ್ಕರೆ, ಎಥೆನಾಲ್‌ ಮತ್ತು ಇತರೆ ಉಪ ಉತ್ಪನ್ನಗಳ ಮಾರಾಟದಿಂದ ಕಾರ್ಖಾನೆಗಳಿಗೆ ಬರುವ ಆದಾಯವನ್ನು ಪರಿಗಣಿಸಿ ಅಂತಿಮವಾಗಿ ಕಬ್ಬಿನ ದರ ನಿರ್ಧರಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

ಮತ್ತೆ ಬಡ್ಡಿ ಏರಿಕೆ ಬರೆ: ಸತತ 5ನೇ ಬಾರಿ ರೆಪೋ ದರ ಹೆಚ್ಚಳ

ರಾಜ್ಯ ಸರ್ಕಾರಗಳು ಎಫ್‌ಆರ್‌ಪಿ ಜೊತೆಗೆ ಹೆಚ್ಚುವರಿ ದರ ಘೋಷಿಸಬೇಕು. ಪಂಜಾಬ್‌ನಲ್ಲಿ ಪ್ರತಿ ಟನ್‌ಗೆ 3800 ರು., ಉತ್ತರ ಪ್ರದೇಶದಲ್ಲಿ 3500, ಗುಜರಾತ್‌ನಲ್ಲಿ 4400 ರು. ನಿಗದಿ ಮಾಡಲಾಗಿದೆ. ರಸಗೊಬ್ಬರ, ಕಟಾವು ಕೂಲಿ, ಸಾಗಾಣಿಕೆ ವೆಚ್ಚ ಹೆಚ್ಚಾಗಿರುವುದರಿಂದ ಕಬ್ಬಿನ ದರ ಪರಿಷ್ಕರಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದ್ದರಿಂದ ಆದಾಯದ ಲೆಕ್ಕಾಚಾರ ಮಾಡಲು ನ.9 ರಂದು ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಸಮಿತಿ ನೀಡಿದ ವರದಿ ಆಧರಿಸಿ ಈ ಆದೇಶ ಹೊರಡಿಸಲಾಗಿದೆ.

ಕಬ್ಬಿನ ಎಫ್‌ಆರ್‌ಪಿ ಹೆಚ್ಚಳ ರೈತರಿಗೆ ಕೊಡಿಸಿ: ಕಬ್ಬಿನ ಎಫ್‌ಆರ್‌ಪಿ (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ಪ್ರಸಕ್ತ ವರ್ಷ 150 ರು. ಹೆಚ್ಚಳವಾದರೂ ಸಕ್ಕರೆ ಕಾರ್ಖಾನೆಗಳು ಅದನ್ನು ರೈತರಿಗೆ ನೀಡುತ್ತಿಲ್ಲ. ಸರ್ಕಾರ ಈ ಹಣವನ್ನು ಬೆಳೆಗಾರರಿಗೆ ಕೊಡಿಸಬೇಕು ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್‌ ಆಗ್ರಹಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕಳೆದ ವರ್ಷ ಕೇಂದ್ರ ಸರ್ಕಾರ ಟನ್‌ ಕಬ್ಬಿಗೆ 2900 ರು. ಎಫ್‌ಆರ್‌ಪಿ ನಿಗದಿ ಮಾಡಿತ್ತು. ಈಗ ಅದು 3050 ರು. ಇದೆ. ಹಾಗಾದರೆ ಹೆಚ್ಚಳವಾಗಿರುವ ಹಣವನ್ನು ಎಲ್ಲ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಸರ್ಕಾರ ಕೊಡಿಸಬೇಕು. 

ಏಕೆಂದರೆ ಸಕ್ಕರೆ ಕಾರ್ಖಾನೆಗಳು ಕಳೆದ ವರ್ಷಕ್ಕಿಂತ ಕಡಿಮೆ ಹಣ ಪಾವತಿಸುತ್ತಿವೆ ಎಂದು ಸವಾಲು ಹಾಕಿದರು. ಕಬ್ಬಿನ ಕಟಾವು, ಸಾಗಾಣಿಕೆ ವೆಚ್ಚ ಎಂದು ಕಳೆದ ವರ್ಷಕ್ಕಿಂತ ಪ್ರತಿ ಟನ್‌ಗೆ 200 ರಿಂದ 300 ರು. ಹೆಚ್ಚುವರಿಯಾಗಿ ಸಕ್ಕರೆ ಕಾರ್ಖಾನೆಗಳು ಮುರಿದುಕೊಳ್ಳುತ್ತಿದ್ದು, ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಸಕ್ಕರೆ ಇಳುವರಿ ಕಡಿಮೆ ಬಂದಿದೆ ಎಂದು ಕಾರ್ಖಾನೆ ಮಾಲಿಕರೇ ವರದಿ ನೀಡಿ ರೈತರನ್ನು ವಂಚಿಸುತ್ತಿದ್ದಾರೆ. ಕಾರ್ಖಾನೆಗಳು ಸಕ್ಕರೆ ತೂಕಕ್ಕೆ ಒಂದು ಯಂತ್ರ, ಕಬ್ಬು ತೂಕ ಮಾಡಲು ಇನ್ನೊಂದು ಯಂತ್ರ ಇಟ್ಟುಕೊಂಡಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಕಬ್ಬಿನಿಂದ ಬರುವ ಇತರೆ ಉತ್ಪನ್ನಗಳ ಲಾಭಾಂಶವನ್ನು ಕೆಲವೇ ಕಾರ್ಖಾನೆಗಳು ಮಾತ್ರ ರೈತರಿಗೆ ನೀಡುತ್ತಿವೆ. ಬೇರೆ ಕಾರ್ಖಾನೆಗಳು ಏಕೆ ನೀಡುತ್ತಿಲ್ಲ. ಕಳೆದ ವರ್ಷ ಕಬ್ಬಿನಿಂದ ಬಂದ ಸಕ್ಕರೆ ಇಳುವರಿಯನ್ನು ಪ್ರಸಕ್ತ ಸಾಲಿನಲ್ಲಿ ಲೆಕ್ಕ ಹಾಕಿ ಈಗ ಸರಬರಾಜು ಮಾಡಿದ ರೈತರಿಗೆ ನೀಡುತ್ತಿದ್ದಾರೆ. ಆಯಾ ವರ್ಷ ಕಬ್ಬು ಸರಬರಾಜು ಮಾಡಿದ ರೈತರಿಗೆ ಆಯಾ ವರ್ಷವೇ ಸಕ್ಕರೆ ಇಳುವರಿ ಆಧಾರದಂತೆ ಹಣ ನೀಡುವುದು ಎಲ್ಲರಿಗೂ ಒಳ್ಳೆಯದಲ್ಲವೆ ಎಂದು ಸಲಹೆ ನೀಡಿದ್ದಾರೆ.

Ticket Fight: ಬೀದರ್‌ ಶಾಸಕರಿಗೆ ಹೊಸ ಸ್ಪರ್ಧಿಗಳ ಸವಾಲ್‌

ಆದೇಶ ಸುಟ್ಟು ಪ್ರತಿಭಟನೆ: ಕಬ್ಬಿನ ಎಫ್‌ಆರ್‌ಪಿ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಡಿ.8 ಕ್ಕೆ 17ನೇ ದಿನಕ್ಕೆ ಕಾಲಿಡಲಿದೆ. ಸರ್ಕಾರ ಪ್ರತಿ ಟನ್‌ ಕಬ್ಬಿಗೆ ಕೇವಲ 50 ರು. ಹೆಚ್ಚಳ ಮಾಡಿರುವುದನ್ನು ಖಂಡಿಸಿ ಗುರುವಾರ ಆದೇಶದ ಪ್ರತಿ ಸುಟ್ಟು ಹೋರಾಟ ನಡೆಸಲು ರೈತರು ತೀರ್ಮಾನಿಸಿದ್ದಾರೆ.

Latest Videos
Follow Us:
Download App:
  • android
  • ios