ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಿರುವ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವದ್ದಾಗಿರುವ ರಾಜ್ಯ ಬಜೆಟ್‌ಗೆ ಇನ್ನು ಕೇವಲ 4 ದಿನಗಳಷ್ಟೇ ಬಾಕಿ ಇರುವಂತೆಯೇ, ಕಾಂಗ್ರೆಸ್‌ನಲ್ಲಿ ‘ಆಪರೇಷನ್ ಕಮಲ’ದ ಆತಂಕ ಹೆಚ್ಚಾಗಿರುವ ಲಕ್ಷಣಗಳು ಗೋಚರಿಸಿವೆ.

‘ನಮ್ಮ ಶಾಸಕರನ್ನು ಸೆಳೆಯುವ ಬಿಜೆಪಿ ಪ್ರಯತ್ನ ಇನ್ನೂ ನಿಂತಿಲ್ಲ. ಹಣ, ಅಧಿಕಾರದ ಆಮಿಷ ಒಡ್ಡುತ್ತಲೇ ಇದ್ದಾರೆ. ಪ್ರತಿ ಶಾಸಕನಿಗೆ 30 ರಿಂದ 40 ಕೋಟಿ ನೀಡುವ ಭರವಸೆ ನೀಡಲಾಗುತ್ತಿದೆ. ಶಾಸಕರ ಖರೀದಿಗೆ 200 ರಿಂದ 300  ಕೋಟಿ ಒಟ್ಟು ಮಾಡಿದ್ದಾರೆ ಎನ್ನಲಾಗುತ್ತಿದೆ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ. ಇದು ನಿಜವೇ ಆಗಿದ್ದಲ್ಲಿ, ಫೆ. 8 ರಂದು ಮಂಡನೆಯಾಗಬೇಕಿರುವ ರಾಜ್ಯ ಬಜೆಟ್‌ಗೆ ‘ಆಪರೇಷನ್ ಕರಿನೆರಳು’ ಬಿದ್ದಿರು ವುದು ಸ್ಪಷ್ಟವಾಗಿದೆ.

ಭಾನುವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ಬರೂ ಮುಖಂಡರು ಬಿಜೆಪಿ ವಿರುದ್ಧ ತೀವ್ರ ಹರಿಹಾಯ್ದರು. ಜತೆಗೆ, ನಮ್ಮ ಶಾಸಕರು ಬಿಜೆಪಿಯ ಇಂಥ ಆಮಿಷಗಳಿಗೆಲ್ಲ ಬಲಿಯಾಗಲ್ಲ ಎಂದು ಭರವಸೆ ವ್ಯಕ್ತಪಡಿಸಿದರು. 

ಹತಾಶೆಯಿಂದ ಈ ಕೃತ್ಯ: ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮಾತನಾಡಿ, ಬಿಜೆಪಿ ಈಗಲೂ ‘ಆಪರೇಶನ್ ಕಮಲ’ ನಡೆಸಲು ಯತ್ನಿಸುತ್ತಿದೆ. ಇದರಲ್ಲಿ ಯಾವುದೇ ಸಂಶಯ ಇಲ್ಲ. ಅವರು ನಮ್ಮ ಶಾಸಕರಿಗೆ ಹಣ, ಅಧಿಕಾರದ ಆಮಿಷ ಒಡ್ಡುತ್ತಲೇ ಇದ್ದಾರೆ. ಆದರೆ ನಮ್ಮ ಶಾಸಕರು ಇಂಥ ಆಮಿಷಕ್ಕೆ ಬಲಿಯಾಗುವುದಿಲ್ಲ ಎಂದರು. ಸರ್ಕಾರ ರಚನೆಯಾದಾಗಿನಿಂದಲೂ ಸರ್ಕಾರ ಉರುಳುವ ವದಂತಿಯನ್ನು ಬಿಜೆಪಿಯ ವರು ಹಬ್ಬಿಸುತ್ತಲೇ ಇದ್ದಾರೆ. ಯಡಿಯೂರಪ್ಪ ಸರ್ಕಾರವಿದ್ದಾಗ ಆರಂಭವಾಗಿದ್ದ ‘ಆಪರೇಶನ್ ಕಮಲ’ ಎನ್ನುವ ಸಂವಿಧಾನ ವಿರೋಧಿ ಚಟುವಟಿಕೆಯನ್ನು ಈಗಲೂ ಮುಂದುವರಿಸಿದ್ದಾರೆ. ಅವರಿಗೆ ಅಧಿಕಾರವಿಲ್ಲದೆ ಬದುಕಲಾಗುತ್ತಿಲ್ಲ. ಹತಾಶೆಯಿಂದ ಇಂತಹ ಕೃತ್ಯಕ್ಕೆ ಇಳಿದಿದ್ದಾರೆ ಎಂದು ಕಿಡಿಕಾರಿದರು.

ಕೀಳು ರಾಜಕಾರಣ: ದೆಹಲಿಯಲ್ಲಿ ಕುಳಿತು ನೈತಿಕ ರಾಜಕಾರಣದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕದಲ್ಲಿ ಮಾತ್ರ ಕೀಳು ಮಟ್ಟದ ರಾಜಕೀಯದಲ್ಲಿ ತೊಡಗಿದ್ದಾರೆ. ಆಪರೇಷನ್ ಕಮಲದ ಮೂಲಕ ಪ್ರಜಾಪ್ರಭುತ್ವದ ಕೊಲೆ  ಮಾಡುತ್ತಿದ್ದಾರೆ. ಆದರೆ ನಮ್ಮ ಶಾಸಕರ ಮೇಲೆ ನಮಗೆ ಪೂರ್ಣ ವಿಶ್ವಾಸವಿದೆ. ಈ ಸರ್ಕಾರ ಐದು ವರ್ಷಗಳನ್ನು ಖಂಡಿತವಾಗಿಯೂ  ಪೂರ್ಣಗೊಳಿಸಲಿದೆ. ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡುತ್ತಿದೆ. ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ವೇಣುಗೋಪಾಲ್ ಸ್ಪಷ್ಟಪಡಿಸಿದರು.  

ಬಿಜೆಪಿಗೆ ಕೋಟ್ಯಂತರ ಹಣ  ಎಲ್ಲಿಂದ?: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 30, 40 ಕೋಟಿ ಆಮಿಷ ಒಡ್ಡುತ್ತಿದೆ. ಸೆವೆನ್ ಸ್ಟಾರ್ ಹೊಟೇಲಲ್ಲಿ 10 ದಿನ ಉಳಿದು ಕೋಟ್ಯಂತರ ರುಪಾಯಿ ಖರ್ಚು ಮಾಡಿದ್ದಾರೆ. ಇಷ್ಟೊಂದು ಹಣ ಅವರಿಗೆ ಎಲ್ಲಿಂದ ಬರುತ್ತಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಶಾಸಕರ ಖರೀದಿಯ ಕುದುರೆ ವ್ಯಾಪಾರಕ್ಕಿಳಿಯಲು 200 - 300 ಕೋಟಿ ಒಟ್ಟು ಮಾಡಿದ್ದಾರೆ ಎಂದಾದರೆ ಭ್ರಷ್ಟಾಚಾರಕ್ಕೆ ಕೈ ಹಾಕಿದ್ದಾರೆ ಎನ್ನುವುದು ಸ್ಪಷ್ಟ ಎಂದು ಆರೋಪಿಸಿದರು. ಬಿಜೆಪಿಯಲ್ಲೇ ಸಮಸ್ಯೆ ಹೆಚ್ಚು: ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿರುವ ಬಿಜೆಪಿಯಲ್ಲೇ ನಮಗಿಂತ ಹೆಚ್ಚು ಆಂತರಿಕ ಸಮಸ್ಯೆಗಳಿವೆ. ಆದರೆ ಅಲ್ಲಿ ನಾಯಕರನ್ನು ಬಾಯಿ ಮುಚ್ಚಿಸಿ ಕೂರಿಸಿದ್ದಾರೆ. ಹೆದರಿಸೋದು, ಭಯಪಡಿಸೋದು ಅವರಲ್ಲಿದೆ ಎಂದು ದಿನೇಶ್ ಟೀಕಿಸಿದರು.