ಬೆಂಗಳೂರು(ಡಿ.11):  ಕೇಂದ್ರ ಸರ್ಕಾರವು ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ಕಲ್ಪಿಸಲು ಮುಂದಾಗಿರುವುದನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶುಕ್ರವಾರ ಹೊರರೋಗಿ ವಿಭಾಗದ (ಓಪಿಡಿ) ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ಹಮ್ಮಿಕೊಂಡಿದೆ.

ಪರಿಣಾಮ ಖಾಸಗಿ ಕ್ಲಿನಿಕ್‌ ಹಾಗೂ ಆಸ್ಪತ್ರೆಗಳಲ್ಲಿ ಅಲೋಪಥಿ ವೈದ್ಯರು ಸೇವೆ ಬಹಿಷ್ಕರಿಸುತ್ತಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಖಾಸಗಿ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಉಳಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂದಿನಂತೆ ಸೇವೆಗಳು ದೊರೆಯಲಿವೆ.

ಇನ್ನು ಓಪಿಡಿ ಸೇವೆ ಬಂದ್‌ ಮಾಡುತ್ತಿರುವ ಭಾರತೀಯ ವೈದ್ಯಕೀಯ ಸಂಘದ ನಿರ್ಧಾರವನ್ನು ಖಂಡಿಸಿರುವ ನ್ಯಾಷನಲ್‌ ಇಂಟಿಗ್ರೇಟೆಡ್‌ ಮೆಡಿಕಲ್‌ ಅಸೋಸಿಯೇಷನ್‌ (ಆಯುಷ್‌ ವೈದ್ಯರ ಸಂಘ), ಶುಕ್ರವಾರ ರಾಜ್ಯಾದ್ಯಂತ ಆಯುರ್ವೇದ ಕ್ಲಿನಿಕ್‌ ಆಸ್ಪತ್ರೆ, ನರ್ಸಿಂಗ್‌ ಹೋಂಗಳನ್ನು ತೆರೆಯುವುದರ ಜೊತೆಗೆ ಉಚಿತವಾಗಿ ಆರೋಗ್ಯ ಸೇವೆ ನೀಡುವಂತೆ ಸೂಚನೆ ನೀಡಿದೆ. ಈ ಮೂಲಕ ರೋಗಿಗಳ ಸೇವೆಯೇ ನಮ್ಮ ಧ್ಯೇಯ ಎಂಬುದನ್ನು ಸಾರ್ವಜನಿಕರಿಗೆ ಸಾರಬೇಕು ಎಂದು ರಾಜ್ಯ ಘಟಕದ ಅಧ್ಯಕ್ಷ ಡಾ. ರಾಜಶೇಖರ್‌ ಭೂಸನೂರುಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಯುರ್ವೇದ ವೈದ್ಯರಿಗೂ ಸರ್ಜರಿಗೆ ಅನುಮತಿ!

ಶಸ್ತ್ರಚಿಕಿತ್ಸೆಗೆ ಅವಕಾಶ ಬೇಡ-ಐಎಂಎ:

ಕೇಂದ್ರ ಸರ್ಕಾರವು ಸ್ನಾತಕೋತ್ತರ ಆಯುರ್ವೇದ ಶಿಕ್ಷಣ ತಿದ್ದುಪಡಿ ನಿಯಮಾವಳಿಗಳ ಅಧಿಸೂಚನೆಯನ್ನು ಹೊರಡಿಸಿದೆ. ಇದರಲ್ಲಿ ಆಯುರ್ವೇದ ಸ್ನಾತಕೋತ್ತದಲ್ಲಿ ಎಂ.ಎಸ್‌. ಶಲ್ಯ ತಂತ್ರ ಹಾಗೂ ಎಂ.ಎಸ್‌. ಶಾಲಕ್ಯ ತಂತ್ರ ಎಂಬ ಸ್ನಾತಕೋತ್ತರ ಕೋರ್ಸ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಜೊತೆಗೆ ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳ ಒಂದು ದೀರ್ಘ ಪಟ್ಟಿಯನ್ನೂ ಇದಕ್ಕೆ ಸೇರಿಸಲಾಗಿದೆ.

ಇದರಂತೆ 39 ಸಾಮಾನ್ಯ ಹಾಗೂ ಕಿವಿ, ಮೂಗು, ಗಂಟಲು, ಕಣ್ಣಿ, ಶಿರ ಮತ್ತು ದಂತ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಅನುಮತಿ ನೀಡಿ ಸೆಂಟ್ರಲ್‌ ಕೌನ್ಸಿಲ್‌ ಆಫ್‌ ಇಂಡಿಯನ್‌ ಮೆಡಿಸಿನ್‌ ಅಧಿಸೂಚನೆ ಹೊರಡಿಸಿದೆ. ಭಾರತೀಯ ವೈದ್ಯಕೀಯ ಮಂಡಳಿಯ ಶಿಫಾರಸಿನಂತೆ ಈ ಎಲ್ಲಾ ಶಸ್ತ್ರ ಚಿಕಿತ್ಸೆ ಆಧುನಿಕ ವೈದ್ಯಕೀಯ ಶಾಸ್ತ್ರದ ಪರಿಮಿತಿಗೆ ಬರುತ್ತದೆ. ಹೀಗಿರುವಾಗ ಆಯುರ್ವೇದದಲ್ಲಿ ಶಸ್ತ್ರಚಿಕಿತ್ಸೆಗಳಿಗೆ ಅವಕಾಶ ಕಲ್ಪಿಸುವುದು ಹೇಗೆ ಸಾಧ್ಯ? ಆಯುರ್ವೇದದಲ್ಲಿ ಅರವಳಿಕೆ ಮದ್ದುಗಳು ಇವೆಯೇ? ಎಂದು ಪ್ರಶ್ನಿಸಿರುವ ಭಾರತೀಯ ವೈದ್ಯಕೀಯ ಸಂಘವು ಸೇವೆ ಬಹಿಷ್ಕರಿಸಿ ಪ್ರತಿಭಟಿಸಲು ಕರೆ ನೀಡಿದೆ.

ಲಕ್ಷಾಂತರ ವೈದ್ಯರಿಂದ ಸೇವೆ ಬಹಿಷ್ಕಾರ:

ರಾಜ್ಯದ 27 ಸಾವಿರಕ್ಕೂ ಹೆಚ್ಚು ಐಎಂಎ ನೋಂದಾಯಿತ ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಜತೆಗೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಮ್ಸ್‌ ಅಸೋಸಿಯೇಷನ್‌(ಫಾನಾ) ಬೆಂಬಲ ಸೂಚಿಸಿವೆ. ಹೀಗಾಗಿ, ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಹೊರ ರೋಗಿಗಳ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ. ಒಳರೋಗಿ ವಿಭಾಗಗಳಲ್ಲಿ ಕಪ್ಪು ಪಟ್ಟಿಧರಿಸಿ, ಸೇವೆ ನೀಡಲು ವೈದ್ಯರು ನಿರ್ಧರಿಸಿದ್ದಾರೆ. ಹೀಗಾಗಿ ಲಕ್ಷಾಂತರ ಖಾಸಗಿ ವೈದ್ಯರು ಶುಕ್ರವಾರ ಸೇವೆ ಬಹಿಷ್ಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಐಎಎಂ ಕರ್ನಾಟಕ ಶಾಖೆ ಕಾರ್ಯದರ್ಶಿ ಡಾ.ಎಸ್‌.ಎಂ.ಪ್ರಸಾದ್‌ ಮಾತನಾಡಿ, ಸಾಕಷ್ಟುಎಚ್ಚರಿಕೆ ನಡುವೆಯೂ ಅನುಭವಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವಾಗಲೇ ಕೆಲ ಎಡವಟ್ಟು ಆಗುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ಆಯುರ್ವೇದ ಪದವೀಧರರಿಗೆ ಶಸ್ತ್ರಚಿಕಿತ್ಸೆಗೆ ಅವಕಾಶ ನೀಡಿರುವುದು ಎಷ್ಟುಸರಿ? . ಸರ್ಕಾರ ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದರು.

ಸರ್ಕಾರಿ ವೈದ್ಯರಿಗೆ ರಜೆ ಇಲ್ಲ

ಐಎಂಎ ವೈದ್ಯರ ಈ ಮುಷ್ಕರದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಆರೋಗ್ಯ ಸೇವೆಗೆ ಯಾವುದೇ ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಸಂಬಂಧ ಮುಷ್ಕರ ಅವಧಿಯಲ್ಲಿ ವೈದ್ಯರಿಗೆ ರಜೆ ನೀಡದಂತೆ ಆರೋಗ್ಯ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ವೈದ್ಯಕೀಯ ಸೇವೆ ಬಂದ್‌ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ. ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡುವುದರಿಂದ ಮುಂದಾಗಬಹುದಾದ ಅನಾಹುತಗಳ ಬಗ್ಗೆ ಸಾರ್ವಜನಿಕರು ಮತ್ತು ಸರ್ಕಾರಕ್ಕೆ ಗಮನ ಸೆಳೆಯಲು ಒಪಿಡಿಯನ್ನು ಮಾತ್ರ ಬಂದ್‌ ಮಾಡಲಾಗುತ್ತಿದೆ. ಕೊರೊನಾ ಚಿಕಿತ್ಸೆ, ತುರ್ತು ಚಿಕಿತ್ಸೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಐಎಂಎ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ.ಎಂ.ವೆಂಕಟಾಚಲಪತಿ ತಿಳಿಸಿದ್ದಾರೆ.