ಎಂಇಎಸ್‌ ನಿಷೇಧಕ್ಕೆ ಆಗ್ರಹಿಸಿ ಭಾನುವಾರ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ ದೊರೆತ ಬೆನ್ನ ಹಿಂದೆಯೇ ಶಿವಸೇನೆಯ ಯುವ ಸೇನೆ ‘ಬೆಳಗಾವಿ ಬಂದ್‌ ಮಾಡುವ ತಾಕತ್ತು ಕೇವಲ ಮರಾಠಿಗರ ರಕ್ತದಲ್ಲಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದು ಕನ್ನಡಿಗರನ್ನು ಕೆರಳಿಸಿದೆ.

ಬೆಳಗಾವಿ (ಮಾ.24): ಎಂಇಎಸ್‌ ನಿಷೇಧಕ್ಕೆ ಆಗ್ರಹಿಸಿ ಭಾನುವಾರ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ ದೊರೆತ ಬೆನ್ನ ಹಿಂದೆಯೇ ಶಿವಸೇನೆಯ ಯುವ ಸೇನೆ ‘ಬೆಳಗಾವಿ ಬಂದ್‌ ಮಾಡುವ ತಾಕತ್ತು ಕೇವಲ ಮರಾಠಿಗರ ರಕ್ತದಲ್ಲಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದು ಕನ್ನಡಿಗರನ್ನು ಕೆರಳಿಸಿದೆ.

ಬೆಳಗಾವಿ ಬಂದ್‌ ಮಾಡುವ ತಾಕತ್ತು ಕೇವಲ ಮರಾಠಿಗರ ರಕ್ತದಲ್ಲಿದೆ. ಉಳಿದವರಿಂದ ಬಂದ್‌ ಸಾಧ್ಯ ಇಲ್ಲ ಎಂದು ಮರಾಠಿ ಭಾಷೆಯಲ್ಲಿ ಯುವಸೇನಾ ಬೆಳಗಾವಿ ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಿದೆ. 

ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬೇಡಿ ಎಂದು ಬೆಳಗಾವಿ ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್‌ ಎಚ್ಚರಿಕೆ ನೀಡಿದ್ದರೂ, ಶಿವಸೇನೆ ಪುಂಡರ ಪುಂಡಾಟಿಕೆ ಮುಂದುವರಿದಿದೆ. ವಿವಾದಾತ್ಮಕ ಪೋಸ್ಟ್ ಮಾಡಿರುವ ಯುವಸೇನಾ ಬೆಳಗಾವಿ ಇನ್‌ಸ್ಟಾಗ್ರಾಂ ಅಡ್ಮಿನ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.

ಇದನ್ನೂ ಓದಿ: ಕರ್ನಾಟಕ ಬಂದ್: ಯಾವುದೇ ಅಹಿತರಕರ ಘಟನೆ ಆಗೋಕೆ ನಾವು ಬಿಡೋಲ್ಲ: ಗೃಹ ಸಚಿವ

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಸಂಘಟನೆ ನಿಷೇಧಿಸುವುದು ಸೇರಿದಂತೆ ಮತ್ತಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್‌ ಕರೆಗೆ ಬೆಳಗಾವಿಯಲ್ಲಿ ನೀರಸ ಪ್ರತಿಕ್ರಿಯೆ ದೊರೆತಿದೆ. ಕರ್ನಾಟಕ ಬಂದ್‌ ಕೇವಲ ಪ್ರತಿಭಟನೆಗೆ ಸೀಮಿತವಾಯಿತು.

ಕರ್ನಾಟಕ ಬಂದ್‌ ಕರೆಗೆ ವಿವಿಧ ಸಂಘಟನೆಗಳು, ವ್ಯಾಪಾರಸ್ಥರು, ಆಟೋ ಚಾಲಕರಿಂದ ನಿರೀಕ್ಷಿತ ಬೆಂಬಲ ವ್ಯಕ್ತವಾಗಲಿಲ್ಲ. ಹಾಗಾಗಿ ಎಂದಿನಂತೆಯೇ ನಗರದಲ್ಲಿ ಆಟೋ, ಸಾರಿಗೆ ಬಸ್‌ಗಳು ಸೇರಿದಂತೆ ಇತರೆ ವಾಹನಗಳು ಸಂಚರಿಸಿದವು. ಅಂಗಡಿ ಮುಗ್ಗಟ್ಟುಗಳನ್ನು ತೆರೆದು ವ್ಯಾಪಾರಸ್ಥರು ವ್ಯಾಪಾರ ವಹಿವಾಟು ನಡೆಸಿದರು. ಇದರಿಂದಾಗಿ ಬಂದ್‌ ಬಿಸಿ ಯಾರಿಗೂ ತಟ್ಟಲಿಲ್ಲ. ಹೋಟೆಲ್, ಬಾರ್ ರೆಸ್ಟೋರೆಂಟ್, ಮಾಲ್ ಗಳು ಚಿತ್ರಮಂದಿರಗಲ್ಲಿ ಎಂದಿನಂತೆ ವಹಿವಾಟು ನಡೆಯಿತು. ನಗರ ಸಾರಿಗೆ ಹಾಗೂ ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆಯೇ ಸಂಚರಿಸಿದವು.