ಬೆಂಗಳೂರು[ಡಿ.17]: ಸರ್ಕಾರದ ಆಡಳಿತ ವೆಚ್ಚಗಳಲ್ಲಿ ಮಿತವ್ಯಯ ಸಾಧಿಸುವ ಕಾರಣ ನೀಡಿ 67,500 ರು.ಗಳಿಗಿಂತ ಹೆಚ್ಚು ವೇತನ ಶ್ರೇಣಿ ಉಳ್ಳವರಿಗೆ ಮಾತ್ರ ಕಚೇರಿಯಲ್ಲಿ ಸರ್ಕಾರಿ ದೂರವಾಣಿ ಹೊಂದಲು ಅವಕಾಶ ನೀಡಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.

ಅಲ್ಲದೆ, ಕಚೇರಿಗೆ ಸರ್ಕಾರಿ ದೂರವಾಣಿ ಹೊಂದಲು ಕನಿಷ್ಠ 67,550 -1,04,600 ರು. ವೇತನ ಶ್ರೇಣಿ ಹೊಂದಿರಬೇಕು ಎಂದು ತಿಳಿಸಿದೆ. ಉಳಿದಂತೆ, 74,400-1,09,600 ರು. ಹಾಗೂ ಅದಕ್ಕಿಂತ ಹೆಚ್ಚಿನ ವೇತನ ಶ್ರೇಣಿ ಹೊಂದಿರುವವರು ಮಾತ್ರ ಕಚೇರಿ ಹಾಗೂ ನಿವಾಸ ಎರಡೂ ಕಡೆ ದೂರವಾಣಿ ಹೊಂದಲು ಅರ್ಹರಿರುತ್ತಾರೆ ಎಂದು ಆರ್ಥಿಕ ಇಲಾಖೆಯ ಆಯವ್ಯಯ ಮತ್ತು ಸಂಪನ್ಮೂಲ ವಿಭಾಗದ ಸರ್ಕಾರದ ಉಪ ಕಾರ್ಯದರ್ಶಿ ಪವನ್‌ ಕುಮಾರ್‌ ಮಾಪಲಾಟಿ ಆದೇಶ ಹೊರಡಿಸಿದ್ದಾರೆ. ಡಿಸೆಂಬರ್‌ನಲ್ಲಿ ಹೊರಡಿಸಿರುವ ಈ ಆದೇಶ 2019ರ ಏಪ್ರಿಲ್‌ನಿಂದ ಪೂರ್ವಾನ್ವಯ ಆಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ದೂರವಾಣಿ ಶುಲ್ಕದಿಂದ ಆಗುತ್ತಿರುವ ಆಡಳಿತ ವೆಚ್ಚಕ್ಕೆ ಕಡಿವಾಣ ಹಾಕಲು ಸರ್ಕಾರಿ ಅಧಿಕಾರಿಗಳು ಕಚೇರಿ ಹಾಗೂ ನಿವಾಸದ ದೂರವಾಣಿ ಹೊಂದುವ ಮಾರ್ಗಸೂಚಿಯಲ್ಲಿ ಮಾರ್ಪಾಡು ತರಲಾಗಿದೆ.

ಈ ಮೊದಲು 36,300-53,850 ರು. ವೇತನ ಶ್ರೇಣಿಗಿಂತ ಮೇಲ್ಪಟ್ಟು ವೇತನ ಉಳ್ಳವರಿಗೆ ಕಚೇರಿ ದೂರವಾಣಿ ಹಾಗೂ 40,050 - 56,550 ರು. ಹಾಗೂ ಅದಕ್ಕಿಂತ ಮೇಲ್ಪಟ್ಟಶ್ರೇಣಿಯವರಿಗೆ ಕಚೇರಿ ಹಾಗೂ ನಿವಾಸ ಎರಡೂ ಕಡೆ ದೂರವಾಣಿ ಹೊಂದಲು ಅವಕಾಶವಿತ್ತು.

ಇದೀಗ 67,550-1,04,600 ರು. ಅಥವಾ ಅದಕ್ಕಿಂತ ಹೆಚ್ಚಿನ ವೇತನ ಶ್ರೇಣಿ ಉಳ್ಳ ಸರ್ಕಾರಿ ಅಧಿಕಾರಿಗಳಿಗೆ ಮಾತ್ರವೇ ಕಚೇರಿ ದೂರವಾಣಿ ಹೊಂದಲು ಅರ್ಹರಿರುತ್ತಾರೆ. ಉಳಿದಂತೆ, 74,400-1,09,600 ರು. ಹಾಗೂ ಅದಕ್ಕಿಂತ ಹೆಚ್ಚಿನ ವೇತನ ಶ್ರೇಣಿ ಹೊಂದಿರುವವರು ಮಾತ್ರ ಕಚೇರಿ ಹಾಗೂ ನಿವಾಸ ಎರಡೂ ಕಡೆ ದೂರವಾಣಿ ಹೊಂದಲು ಅರ್ಹರಿರುತ್ತಾರೆ ಎಂದು ಆರ್ಥಿಕ ಇಲಾಖೆಯ ಆಯವ್ಯಯ ಮತ್ತು ಸಂಪನ್ಮೂಲ ವಿಭಾಗದ ಸರ್ಕಾರದ ಉಪ ಕಾರ್ಯದರ್ಶಿ ಪವನ್‌ ಕುಮಾರ್‌ ಮಾಪಲಾಟಿ ಆದೇಶ ಹೊರಡಿಸಿದ್ದಾರೆ.