Asianet Suvarna News Asianet Suvarna News

ಈರುಳ್ಳಿ ಬೆಲೆ ಕುಸಿತ, ಕೇಜಿಗೆ ₹10: ರೈತ ಕಣ್ಣೀರು!

ಈರುಳ್ಳಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಕೆಜಿಗೆ 10 ರೂ.ಯಂತೆ, 10 ಕೆಜಿ (100 ರೂ.)ಲೆಕ್ಕದಲ್ಲಿ ಈರುಳ್ಳಿ ಮಾರಾಟವಾಗುತ್ತಿದೆ. ಈಗ ಮಾರುಕಟ್ಟೆಗಿಂತಲೂ ಗಲ್ಲಿ, ಗಲ್ಲಿಯಲ್ಲಿ ಈರುಳ್ಳಿಯನ್ನು ಚೀಲಗಟ್ಟಲೆ ಮಾರುತ್ತಿರುವುದು ಸಾಮಾನ್ಯವಾಗಿದೆ. 

Onion price is 10 rupees per kg farmer tears gvd
Author
First Published Mar 13, 2024, 11:29 AM IST

ಕೊಪ್ಪಳ (ಮಾ.13): ಈರುಳ್ಳಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಕೆಜಿಗೆ 10 ರೂ.ಯಂತೆ, 10 ಕೆಜಿ (100 ರೂ.)ಲೆಕ್ಕದಲ್ಲಿ ಈರುಳ್ಳಿ ಮಾರಾಟವಾಗುತ್ತಿದೆ. ಈಗ ಮಾರುಕಟ್ಟೆಗಿಂತಲೂ ಗಲ್ಲಿ, ಗಲ್ಲಿಯಲ್ಲಿ ಈರುಳ್ಳಿಯನ್ನು ಚೀಲಗಟ್ಟಲೆ ಮಾರುತ್ತಿರುವುದು ಸಾಮಾನ್ಯವಾಗಿದೆ. ಇನ್ನು, ಸಂಜೆಯಾಗುತ್ತಿದ್ದಂತೆ ಉಳಿದ ಈರುಳ್ಳಿಯನ್ನು ಕೇಳಿದಷ್ಟಕ್ಕೆ ಕೊಟ್ಟು ಹೋಗುತ್ತಿದ್ದಾರೆ. ಈರುಳ್ಳಿಯನ್ನು ಈಗ ಕೆಜಿ ಲೆಕ್ಕಚಾರದಲ್ಲಿ ಮಾರುವುದೇ ಅಪರೂಪ. ಐದು ಕೆಜಿಗೆ ಇಷ್ಟು, 10 ಕೆಜಿಗೆ ಇಷ್ಟು ಎಂದೇ ಮಾರಾಟ ಮಾಡುತ್ತಾರೆ.

ಪ್ರತಿ ಚೀಲ ಈರುಳ್ಳಿ (50 ಕೆಜಿ) ದರ ಮಾರುಕಟ್ಟೆಯಲ್ಲಿ ಸೂಪರ್ ಕ್ವಾಲಿಟಿ ಇದ್ದರೆ ₹600-700 ರುಪಾಯಿ, ಅಬ್ಬಾಬ್ಬ ಎಂದರೇ ಸಾವಿರ ರುಪಾಯಿ. ಇನ್ನು ಗುಣಮಟ್ಟದಲ್ಲಿ ಒಂಚೂರು ಕಡಿಮೆ ಇದ್ದರೂ ಐದು ನೂರು ರುಪಾಯಿಗೆ ಚೀಲವನ್ನೇ ಕೊಡುತ್ತಿದ್ದಾರೆ. ಇನ್ನು ಕೆಲವರು ತೂಕದ ಬಗ್ಗೆಯೂ ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ. ನಾಲ್ಕಾರು ಕೆಜಿ ಹೆಚ್ಚಿದ್ದರೂ ಚೀಲದ ಲೆಕ್ಕದಲ್ಲೇ ಮಾರಾಟ ಮಾಡುತ್ತಾರೆ. ಹೀಗಾಗಿ, ಈರುಳ್ಳಿ ಬೆಳೆದ ರೈತರು ಪರಿತಪಿಸುತ್ತಿದ್ದಾರೆ. ಕೊಪ್ಪಳ ಮಾರುಕಟ್ಟೆ ಸೇರಿದಂತೆ ರಾಜ್ಯಾದ್ಯಂತ ಈರುಳ್ಳಿ ದರ ಕುಸಿದಿದ್ದು, ರೈತರು ಶಪಿಸುತ್ತಿದ್ದಾರೆ. ಹೇಗಾದರೂ ಮಾಡಿ ಈರುಳ್ಳಿ ಬೆಳೆದ ರೈತರನ್ನು ಕಾಪಾಡಲು ಕನಿಷ್ಠ ಬೆಂಬಲ ಬೆಲೆಯನ್ನಾದರೂ ಘೋಷಣೆ ಮಾಡಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ.

ಬ್ಯಾಂಕ್​ನಲ್ಲಿದ್ದ ಹಣಕ್ಕಾಗಿ ರಾಕ್ಷಸಿ ಕೃತ್ಯ: ಇಸ್ತ್ರಿ ಪೆಟ್ಟಿಗೆಯಿಂದ ಮಗಳ ತೊಡೆ ಸುಟ್ಟ ದೊಡ್ಡಮ್ಮ!

ದಾಸ್ತಾನನಿಂದ ಮಾರಾಟ: ಈರುಳ್ಳಿ ಬೆಲೆಯನ್ನು ನಿಯಂತ್ರಣ ಮಾಡಲು ಕೇಂದ್ರ ಸರ್ಕಾರ ರಫ್ತು ನಿಷೇಧ ಮಾಡಿರುವುದು ಹಾಗೂ ದಾಸ್ತಾನು ಮಾಡಿಟ್ಟುಕೊಂಡಿರುವ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಟ್ಟಿರುವುದೇ ದರ ಕುಸಿತಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ಹೊಸ ಈರುಳ್ಳಿಯನ್ನು ಸಂಗ್ರಹಿಸಿಟ್ಟುಕೊಳ್ಳಲು ಹಳೆ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರಿಂದ ಬೆಲೆ ಕುಸಿದಿದೆ ಎಂಬುದು ರೈತರ ವಿಶ್ಲೇಷಣೆ. ಈರುಳ್ಳಿ ದರ ಕುಸಿದಿದ್ದರೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಆದರೆ, ರಪ್ತಿಗೆ ಅವಕಾಶ ಯಾಕೆ ನೀಡುತ್ತಿಲ್ಲ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

ಬೇಸಿಗೆಯಲ್ಲಿಯೂ ರೈತರು ಕಷ್ಟಪಟ್ಟು ಈರುಳ್ಳಿ ಬೆಳೆದಿದ್ದಾರೆ. ಬರದ ನಡುವೆ, ನೀರಿನ ಅಭಾವದ ನಡುವೆಯೂ ಈರುಳ್ಳಿ ಬೆಳೆದಿದ್ದಾರೆ. ಈ ವರ್ಷ ಈರುಳ್ಳಿ ದರ ಬಂದೇ ಬರುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡು ಸಾಲಸೋಲ ಮಾಡಿ, ಬೆಳೆದಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿತವಾಗಿರುವುದು ರೈತರನ್ನು ಕಂಗೆಡುವಂತೆ ಮಾಡಿದೆ.

ಬೇಡವೆಂದರೂ ಕರೆತಂದು ಈಗ ಟಿಕೆಟ್‌ ಕೊಡದಿದ್ರೆ ಅಪಮಾನ: ಡಿ.ವಿ.ಸದಾನಂದಗೌಡ

ನಮ್ಮ ಹೊಲದಲ್ಲಿ 250 ಚೀಲ ಈರುಳ್ಳಿ ಬೆಳೆದಿದ್ದು, ಮಾರುಕಟ್ಟೆಯಲ್ಲಿ ದರ ಇಲ್ಲದಿರುವುದಕ್ಕೆ ಸಮಸ್ಯೆಯಾಗಿದೆ. ಕಟಾವು ಮಾಡಿದ್ದರೂ ಅವುಗಳನ್ನು ತೆಗೆದುಕೊಂಡು ಮಾರುಕಟ್ಟೆಗೆ ಹೊಗಲು ಆಗುತ್ತಿಲ್ಲ. ನಮ್ಮೂರಿಗೆ ತಂದು ಚೀಲಗಟ್ಟಲೇ ಮಾರುತ್ತಿರುವುದರಿಂದ ನಾವು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ಧೈರ್ಯವಾದರೂ ಹೇಗೆ ಬರುತ್ತದೆ.
- ಸಿದ್ದಪ್ಪ ಯಡ್ರಮನಳ್ಳಿ, ರೈತ.

Follow Us:
Download App:
  • android
  • ios