ಹುಬ್ಬಳ್ಳಿ :  ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಗುರುವಾರ .100ರಿಂದ .1,500ವರೆಗೂ ಏರಿಕೆ ಕಂಡು ಭರವಸೆ ಮೂಡಿಸಿದ್ದ ಈರುಳ್ಳಿ ದರ ಶುಕ್ರವಾರ .1200ಕ್ಕೆ ಕುಸಿದು ರೈತರಲ್ಲಿ ಆತಂಕ ಮೂಡಿಸಿದೆ. ರಾಜ್ಯದಲ್ಲಿ ಇನ್ನು 15 ದಿನಗಳಲ್ಲಿ ಈರುಳ್ಳಿ ಸೀಜನ್‌ ಮುಕ್ತಾಯಗೊಳ್ಳಲಿದೆ. ಆದರೂ ದರ ಏರದೆ ರೈತರು ಕಂಗಾಲಾಗಿದ್ದಾರೆ. ರಾಜ್ಯದ ಈರುಳ್ಳಿಯನ್ನು ಹೆಚ್ಚು ಕಾಲ ಇಟ್ಟುಕೊಳ್ಳಲು ಸಾಧ್ಯವಿಲ್ಲ.

 ಈ ಹಿನ್ನೆಲೆಯಲ್ಲಿ ತಮಿಳುನಾಡಿನ ವರ್ತಕರು ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಖರೀದಿಸುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿಯೇ ರಾಜ್ಯದ ಈರುಳ್ಳಿ ಬೆಲೆ ಕುಸಿಯುತ್ತಿದೆ. ನೆರೆಯ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆದಿರುವ ಹಿನ್ನೆಲೆಯಲ್ಲಿ ಅಲ್ಲಿ ರಾಜ್ಯದ ಈರುಳ್ಳಿಗೆ ಬೇಡಿಕೆ ಇಲ್ಲ. ಅಲ್ಲದೆ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಎರಡೂ ರಾಜ್ಯಗಳೂ ತಮಿಳುನಾಡಿಗೆ ಈರುಳ್ಳಿ ರಫ್ತು ಮಾಡುತ್ತಿವೆ. ರಾಜ್ಯದ ಈರುಳ್ಳಿ ದರ ಕುಸಿಯಲು ಇದೂ ಒಂದು ಕಾರಣ ಎನ್ನಲಾಗುತ್ತಿದೆ.

ಕೆಲ ಸ್ಥಳೀಯ ಖರೀದಿದಾರರನ್ನು ಇಟ್ಟುಕೊಂಡು ಹರಾಜು ನಡೆಸುವ ವರ್ತಕರು, ನಂತರ ಎಲ್ಲ ಈರುಳ್ಳಿಯನ್ನು ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಗೆ ಹೆಚ್ಚಿನ ದರಕ್ಕೆ ರಫ್ತು ಮಾಡುತ್ತಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಚಿಲ್ಲರೆ ಮಾರಾಟಗಾರರಿಗೆ ಸುಗ್ಗಿ!:  ನಗರದ ವಿವಿಧ ಮಾರುಕಟ್ಟೆಮತ್ತು ಪ್ರದೇಶಗಳಲ್ಲಿ ಈರುಳ್ಳಿಯನ್ನು ಚಿಲ್ಲರೆ ಮಾರಾಟ ಮಾಡುವವರಿಗೆ ಇದು ಸುಗ್ಗಿ ಕಾಲ. ಕಾರಣ, ಮಾರುಕಟ್ಟೆಯಲ್ಲೇ ಕೇವಲ ಕ್ವಿಂಟಲ್‌ಗೆ .100ರಿಂದ . 600ಕ್ಕೆ ದೊರಕುವ ಈರುಳ್ಳಿಯನ್ನು ಚಿಲ್ಲರೆ ಮಾರಾಟಗಾರರು ಕೆಜಿಗೆ . 10ರಿಂದ .15ರವರೆಗೂ ಮಾರಾಟ ಮಾಡುತ್ತಿದ್ದಾರೆ.