ಬೆಂಗಳೂರು(ಸೆ.07): ಖಾಸಗಿ ಬಸ್‌ವೊಂದು ನಿಲ್ದಾಣ ಬಳಿ ನಿಂತಿದ್ದ ಪ್ರಯಾಣಿಕರಿಗೆ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕನೊಬ್ಬ ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಎಂಟನೇ ಮೈಲಿ ಸಮೀಪ ಭಾನುವಾರ ರಾತ್ರಿ ಸಂಭವಿಸಿದೆ.

ಮೃತರನ್ನು ಲಿಂಗಸೂರು ಮೂಲದ ಜ್ಞಾನಪ್ಪ ಎಂದು ಗುರುತಿಸಲಾಗಿದೆ. ಖಾಸಗಿ ಬಸ್‌ ಚಾಲಕ ದೇವರಾಜ್‌ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಪೀಣ್ಯ ಸಂಚಾರ ಠಾಣೆ ಪೊಲೀಸರು ಹೇಳಿದ್ದಾರೆ.

ಲಾರಿ - ಕಾರು ಡಿಕ್ಕಿ : ಮೂವರು ಸ್ಥಳದಲ್ಲೇ ಸಾವು

ಭಾನುವಾರ ರಾತ್ರಿ ಏಳು ಗಂಟೆ ಸುಮಾರಿಗೆ ಪ್ರಯಾಣಿಕರು ಹೆಸರುಘಟ್ಟ ಮುಖ್ಯರಸ್ತೆಯ ಎಂಟನೇ ಮೈಲಿ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಾ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಖಾಸಗಿ ಬಸ್‌ ಮುಂದೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನಿಲ್ದಾಣಕ್ಕೆ ನುಗ್ಗಿದೆ. ಪರಿಣಾಮ ಬಸ್‌ ನಿಲ್ದಾಣದಲ್ಲಿ ಕುಳಿತಿದ್ದ ಜ್ಞಾನಪ್ಪ ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲಿಯೇ ಅಸು ನೀಗಿದ್ದಾರೆ. ಉಳಿದು ಐವರಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.